ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಎಲ್: ಪವನ್ ದೇಶಪಾಂಡೆಗೆ ಬಂಪರ್; ಜೋಶಿ ಸೂಪರ್

ಬಿ ಗುಂಪಿನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಜೋನಾಥನ್; ಶ್ರೇಯಸ್‌ಗೆ ಸಿಗದ ಮೌಲ್ಯ; ಮಿಥುನ್‌, ಅಮಿತ್‌ಗೆ ಮ್ಯಾಚ್‌ ಕಾರ್ಡ್‌
Last Updated 27 ಜುಲೈ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡದ ಪವನ್ ದೇಶಪಾಂಡೆ ಮತ್ತು ಗದುಗಿನ ಅನಿರುದ್ಧ ಜೋಶಿಗೆ ಶನಿವಾರ ‘ಶುಕ್ರದೆಸೆ’ ಒಲಿಯಿತು.

ಇಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಈ ವರ್ಷದ ಆವೃತ್ತಿಯ ಹರಾಜು ಪ್ರಕ್ರಿಯೆಯ ‘ಎ’ ಗುಂಪಿನಲ್ಲಿ ಆಲ್‌ರೌಂಡರ್ ಪವನ್ ಅವರಿಗೆ ಶಿವಮೊಗ್ಗ ಲಯನ್ಸ್‌ ಫ್ರಾಂಚೈಸಿಯು ₹ 7.30 ಲಕ್ಷ ಮೌಲ್ಯ ನೀಡಿತು. ಪವನ್ ಅವರನ್ನು ಖರೀದಿಸಿಲು ಫ್ರ್ಯಾಂಚೈಸಿಗಳ ನಡುವೆ ತುರುಸಿನ ಪೈಪೋಟಿ ನಡೆಯಿತು. ಕೊನೆಗೂ ಲಯನ್ಸ್ ತಂಡವು ಯಶ ಸಾಧಿಸಿತು. ಈ ಬಾರಿ ಗರಿಷ್ಠ ಮೌಲ್ಯ ಪಡೆದ ಆಟಗಾರನೆಂಬ ಹೆಗ್ಗಳಿಕೆಗೆ ಪವನ್ ಪಾತ್ರರಾದರು. ಸ್ಫೋಟಕ ಬ್ಯಾಟ್ಸ್‌ಮನ್ ಅನಿರುದ್ಧ ಜೋಶಿ ಅವರನ್ನು ಮೈಸೂರು ವಾರಿಯರ್ಸ್‌ ತಂಡವು ₹ 7.10 ಲಕ್ಷ ಮೌಲ್ಯ ನೀಡಿ ಖರೀದಿಸಿತು. ಇದೇ ಗುಂಪಿನಲ್ಲಿ ಮಧ್ಯಮವೇಗಿ ಪ್ರತೀಕ್ ಜೈನ್ ಅವರನ್ನು ಬಿಜಾಪುರ ಬುಲ್ಸ್ ತಂಡವು ₹ 4.50 ಲಕ್ಷ ನೀಡಿ ಖರೀದಿಸಿತು.

ಈಚೆಗೆ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ರೋಹನ್ ಕದಂ ಅವರು ಬೆಂಗಳೂರು ಬ್ಲಾಸ್ಟರ್ಸ್‌ ತಂಡದ (₹ 3.20 ಲಕ್ಷ) ಪಾಲಾದರು.

ಅಚ್ಚರಿ ಮೂಡಿಸಿದ ಜೋನಾಥನ್: 223 ಆಟಗಾರರು ಸ್ಪರ್ಧೆಯಲ್ಲಿದ್ದ ಬಿ ಗುಂಪಿನಲ್ಲಿ ಆರ್. ಜೋನಾಥನ್ ಅಚ್ಚರಿಯ ಮೌಲ್ಯ ಪಡೆದರು. ತುರುಸಿನ ಪೈಪೋಟಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಫ್ರ್ಯಾಂಚೈಸ್‌ ಆರು ಲಕ್ಷ ರೂಪಾಯಿ ನೀಡಿ ಜೋನಾಥನ್ ಅವರನ್ನು ಖರೀದಿಸಿತು. ಈ ಸುತ್ತಿನಲ್ಲಿ ಅನುಭವಿ ಆಟಗಾರ ಕೆ.ಬಿ. ಪವನ್, ಶೋಯಬ್ ಮ್ಯಾನೇಜರ್, ಅಭಿನವ್ ಮನೋಹರ್, ಭರತ್ ಧೂರಿ ಅವರು ಉತ್ತಮ ಮೌಲ್ಯ ಪಡೆದು ಗಮನ ಸೆಳೆದರು.

ಅನಿರುದ್ಧ ಜೋಶಿ
ಅನಿರುದ್ಧ ಜೋಶಿ

‘ಅನ್‌ಸೋಲ್ಡ್‌ ಬಿಡ್‌’ನಲ್ಲಿ ಪ್ರಸಿದ್ಧ ಕೃಷ್ಣ

‘ಎ’ ಗುಂಪಿನಲ್ಲಿದ್ದ ಮಧ್ಯಮವೇಗಿ ಪ್ರಸಿದ್ಧಕೃಷ್ಣ ಅವರನ್ನು ಮೊದಲ ಸುತ್ತಿನ ಬಿಡ್‌ನಲ್ಲಿ ಯಾವ ತಂಡವೂ ಖರೀದಿಸಲಿಲ್ಲ. ಆದರೆ ದಿನದ ಕೊನೆಗೆ ನಡೆದ ಮಾರಾಟವಾಗದ ಆಟಗಾರರ ಬಿಡ್ (ಅನ್‌ಸೋಲ್ಡ್ ರೌಂಡ್‌) ನಲ್ಲಿ ಪ್ರಸಿದ್ಧ ಕೃಷ್ಣ ಅವರನ್ನು ಪಡೆಯಲು ತುರುಸಿನ ಪೈಪೋಟಿ ನಡೆಯಿತು. ಬಳ್ಳಾರಿ ಟಸ್ಕರ್ಸ್‌ ತಂಡವು ₹ 5.80 ಲಕ್ಷ ನೀಡಿ ಕೃಷ್ಣ ಅವರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು. ಇದೇ ಸುತ್ತಿನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವು ₹ 2.10 ಲಕ್ಷ ನೀಡಿ ಬ್ಯಾಟ್ಸ್‌ಮನ್ ಆರ್. ಸಮರ್ಥ ಅವರನ್ನು ಪಡೆಯಿತು.

ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮನೀಷ್ ಪಾಂಡೆ ಅವರಿಗೆ ಮೊದಲ ಸುತ್ತಿನಲ್ಲಿ ಬೇಡಿಕೆ ಇರಲಿಲ್ಲ. ಆದರೆ ಅನ್‌ಸೋಲ್ಡ್‌ ಸುತ್ತಿನಲ್ಲಿ ಬೆಳಗಾವಿ ತಂಡವು ₹ 2 ಲಕ್ಷ ನೀಡಿ ಪಾಂಡೆಗೆ ಮಣೆ ಹಾಕಿತು.

ಆದರೆ ಆಲ್‌ರೌಂಡರ್ ಶ್ರೆಯಸ್ ಗೋಪಾಲ್, ಮಧ್ಯಮವೇಗಿ ರೋನಿತ್ ಮೋರೆ ಮತ್ತು ಕರುಣ್ ನಾಯರ್ ಅವರನ್ನು ಯಾವ ತಂಡವೂ ಪರಿಗಣಿಸಲಿಲ್ಲ. ಕೆಪಿಎಲ್ ನಡೆಯುವ ಅವಧಿಯಲ್ಲಿಯೇ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದೆ. ಅದರಲ್ಲಿ ಈ ಆಟಗಾರರು ಆಡುವುದರಿಂದ ಇಲ್ಲಿ ಅಲಭ್ಯರಾಗುವ ಸಾಧ್ಯತೆ ಇದೆ.

ಆದ್ದರಿಂದ ಫ್ರ್ಯಾಂಚೈಸ್‌ಗಳು ಒಲವು ತೋರಲಿಲ್ಲ.

ಮ್ಯಾಚ್‌ ಕಾರ್ಡ್‌ನಲ್ಲಿ ಒಲಿದ ಮಿಥುನ್, ಅಮಿತ್

ಹೋದ ಸಲದ ಬಿಡ್‌ನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದಿದ್ದ ಅಭಿಮನ್ಯು ಮಿಥುನ್ ಅವರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಶಿವಮೊಗ್ಗ ಲಯನ್ಸ್‌ ಯಶಸ್ವಿಯಾಯಿತು.

ಎ ಗುಂಪಿನಲ್ಲಿ ಮಧ್ಯಮವೇಗಿ ಮಿಥುನ್ ಅವರನ್ನು ಫ್ರ್ಯಾಂಚೈಸ್‌ಗಳು ಪೈಪೋಟಿ ನಡೆಸಿದವು. ₹ 3.60 ಲಕ್ಷಕ್ಕೆ ಅವರು ಬೇರೆ ಫ್ರ್ಯಾಂಚೈಸ್ ಪಾಲಾಗುವುದನ್ನು ತಡೆಯಲು ಶಿವಮೊಗ್ಗ ತಂಡವು ಮ್ಯಾಚ್‌ ಕಾರ್ಡ್‌ ಹಕ್ಕು ಬಳಸಿಕೊಂಡಿತು. ಅದೇ ಮೌಲ್ಯವನ್ನು ನೀಡಿ ಮಿಥುನ್ ಅವರನ್ನು ಉಳಿಸಿಕೊಂಡಿತು.

ಮೈಸೂರು ವಾರಿಯರ್ಸ್ ಕೂಡ ಆಲ್‌ರೌಂಡರ್ ಅಮಿತ್ ವರ್ಮಾ (₹ 5.20ಲಕ್ಷ) ಅವರನ್ನು ಉಳಿಸಿಕೊಳ್ಳಲು ಮ್ಯಾಚ್‌ ಕಾರ್ಡ್‌ ಬಳಸಿಕೊಂಡಿತು. ಬೆಳಗಾವಿ ಪ್ಯಾಂಥರ್ಸ್ (ದಿಕ್ಷಾಂಕ್ಷು ನೇಗಿ; 1 ಲಕ್ಷ), ಬಿಜಾಪುರ ಬುಲ್ಸ್ (ಎಂ.ಜಿ. ನವೀನ್; ₹ 3.50 ಲಕ್ಷ), ಹುಬ್ಬಳ್ಳಿ ಟೈಗರ್ಸ್ (ಮೊಹಮ್ಮದ್ ತಹಾ; 5.70 ಲಕ್ಷ), ಬಳ್ಳಾರಿ ಟಸ್ಕರ್ಸ್ (ಸಿ.ಎ. ಕಾರ್ತಿಕ್; 4.70 ಲಕ್ಷ) ಮತ್ತು ಬೆಂಗಳೂರು ಬ್ಲಾಸ್ಟರ್ಸ್‌ (ಆನಂದ ದೊಡ್ಡಮನಿ; ₹ 2.45 ಲಕ್ಷ) ಕೂಡ ತಮ್ಮ ಪಾಲಿನ ಮ್ಯಾಚ್‌ ಕಾರ್ಡ್ ಬಳಸಿಕೊಂಡವು.

ಅಮಿತ್ ವರ್ಮಾ
ಅಮಿತ್ ವರ್ಮಾ

ಕರುಣ್‌ ಕರೆ; ನಿಶ್ಚಲ್‌ಗೆ ಅದೃಷ್ಟ!

ಬಿಡ್‌ ಪ್ರಕ್ರಿಯೆಯ ಕೊನೆಯಲ್ಲಿ ಮೈಸೂರು ವಾರಿಯರ್ಸ್‌ ತಂಡವು 13 ಆಟಗಾರರನ್ನು ಮಾತ್ರ ಖರೀದಿಸಿತ್ತು. ನಿಯಮದ ಪ್ರಕಾರ ಪ್ರತಿ ತಂಡವೂ ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರರನ್ನು ಖರೀದಿಸಬೇಕು. ಆದ್ದರಿಂದ ಮೈಸೂರು ತಂಡವು ಐವರು ಆಟಗಾರರನ್ನು ಖರೀದಿಸಬೇಕಾಯಿತು. ಆಗ ತಂಡದ ಮಾಲೀಕರಾದ ಅರ್ಜುನ್ ರಂಗಾ ಅವರು ಬಿ.ಯು. ಶಿವಕುಮಾರ್, ರಾಮಸರಿಕ್ ಯಾದವ್, ಜಯೇಶ್ ಬಾಬು ಮತ್ತು ಕಿಶನ್ ಬೇದರೆ ಅವರಿಗೆ ತಲಾ ₹ 20 ಸಾವಿರ ನೀಡಿ ಖರೀದಿಸಿದರು.

ಇದೇ ಸಂದರ್ಭದಲ್ಲಿ ಅವರು ಕರುಣ್ ನಾಯರ್ ಅವರಿಗೂ ಮೂಲ ಬೆಲೆ 20 ಸಾವಿರ ನೀಡಿ ಪಡೆದರು. ಇದಾಗಿ ಕೆಲವೇ ನಿಮಿಷಗಳಲ್ಲಿ ರಂಗಾ ಅವರಿಗೆ ಫೋನ್ ಕರೆ ಮಾಡಿದ ಕರುಣ್ ನಾಯರ್ ಅವರು ‘ತಾವು ಈ ಅವಧಿಯಲ್ಲಿ ಅಲಭ್ಯರಾಗಿದ್ದು, ತಂಡಕ್ಕೆ ಸೇರ್ಪಡೆ ಬೇಡ’ ಎಂದು ಮನವಿ ಮಾಡಿಕೊಂಡರು. ಈ ವಿಷಯವನ್ನು ಅರ್ಜುನ್ ಅವರು ಆರ್ಬಿಟ್ರೇಟರ್ ಸಂತೋಷ್ ಮೆನನ್ ಮತ್ತು ವಿನಯ್ ಮೃತ್ಯುಂಜಯ ಅವರಿಗೆ ತಿಳಿಸಿದರು.

ಆಗ ಅವರಿಗೆ ಮೆನನ್ ಅವರು ‘ ಕರುಣ್ ಬದಲು ಡೇಗಾ ನಿಶ್ಚಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳಬಹುದು’ ಎಂದು ಸಲಹೆ ನೀಡಿದರು. ಅರ್ಜುನ್ ರಂಗಾ ನಿಶ್ಚಲ್ ಅವರನ್ನು ₹ 25 ಸಾವಿರ ನೀಡಿ ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT