ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಅಮ್ಮ ಇಲ್ಲ; ಕ್ರಿಕೆಟ್ ಕೈ ಬಿಡಲಿಲ್ಲ

ಒಪ್ಪೊತ್ತಿನ ಊಟಕ್ಕೂ ತೊಂದರೆ ಅನುಭವಿಸಿದ ಪಪ್ಪು ರಾಯ್‌, ದೇವಧರ್ ಟ್ರೋಫಿ ಕಣದಲ್ಲಿ
Last Updated 19 ಅಕ್ಟೋಬರ್ 2018, 18:29 IST
ಅಕ್ಷರ ಗಾತ್ರ

ಗುವಾಹಟಿ: ಅಪ್ಪ ಅಮ್ಮನ ಪ್ರೀತಿ–ವಾತ್ಸಲ್ಯ ಏನೆಂದೇ ಗೊತ್ತಿಲ್ಲ. ಅವರು ಇಲ್ಲದ ಕಾರಣ ಒಪ್ಪೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಲ್ಲಿ ಬೆಳೆದ ಹುಡುಗ ಆತ.

ನೆಟ್ಸ್‌ನಲ್ಲಿ ಅಭ್ಯಾಸ ಮಾಡುವವರಿಗೆ ಬೌಲಿಂಗ್ ಮಾಡಿ ಸಿಗುತ್ತಿದ್ದ ‘ಚಿಲ್ಲರೆ’ ಹಣದಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದವನ ಕೈ ಹಿಡಿದದ್ದು ಕ್ರಿಕೆಟ್. ಸಂಕಷ್ಟದಲ್ಲೇ ಬೆಳೆದ ಪಪ್ಪು ರಾಯ್‌ ಈಗ ದೇವಧರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಇಂಡಿಯಾ ‘ಸಿ’ ತಂಡಕ್ಕೆ ಆಯ್ಕೆಯಾಗಿದ್ದಾರೆ. ಚೊಚ್ಚಲ ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದಾರೆ.

ಬಿಹಾರ ಮೂಲದ ಜಾಮದಾರ್‌ ರಾಯ್‌ ಮತ್ತು ಪಾರ್ವತಿ ದೇವಿ ಅವರ ಮಗ ಪಪ್ಪು ರಾಯ್‌ ಎಡಗೈ ಸ್ಪಿನ್ನರ್‌. ಸರಾನ್‌ ಜಿಲ್ಲೆಯವರಾದ ಜಾಮ ದಾರ್ ಮತ್ತು ಪಾರ್ವತಿ ಕೆಲಸ ಹುಡುಕುತ್ತ ಕೋಲ್ಕತ್ತಗೆ ಬಂದವರು. ಟ್ರಕ್‌ ಚಾಲಕರಾಗಿದ್ದ ಜಾಮದಾರ್‌ ಹೃದಯಾಘಾತದಿಂದ ಸಾವಿಗೀಡಾದರೆ, ಪಾರ್ವತಿ ಅನಾರೋಗ್ಯಕ್ಕೆ ಈಡಾಗಿ ಮೃತಪಟ್ಟಿದ್ದರು.

ಮಗುವಾಗಿದ್ದ ಪಪ್ಪುಗೆ ಮಾವ ಮತ್ತು ಅತ್ತೆ ಆಸರೆಯಾದರು. ಆದರೆ ಪ‍ಪ್ಪುಗೆ 15 ವರ್ಷ ಆಗಿದ್ದಾಗ ಅವರಿ ಬ್ಬರು ಕೂಡ ಸಾವಿಗೀಡಾದರು. ಹೀಗಾಗಿ ಬದುಕಿಗೆ ಕತ್ತಲೆ ಆವ ರಿಸಿತು. ಆದರೆ ಬೌಲಿಂಗ್ ಬಲ್ಲ ಪಪ್ಪು ಅದನ್ನೇ ‘ವೃತ್ತಿ’ಯಾಗಿಸಿಕೊಂಡರು. ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಶುರು ಮಾಡಿದರು. ಒಂದು ವಿಕೆಟ್ ಉರುಳಿಸಿದರೆ ₹ 10 ಸಿಗುತ್ತಿತ್ತು. ಹೀಗಾಗಿ ಊಟ, ಮನೆ ಬಾಡಿಗೆ, ಬಟ್ಟೆಗಾಗಿ ವಿಕೆಟ್‌ ಕಬಳಿಸುವುದು ಅನಿವಾರ್ಯವಾಯಿತು.

ಹೀಗೆ ಬೆಳೆದ ಪಪ್ಪುಗೆ ಈಗ 23 ವರ್ಷ. ಅಜಿಂಕ್ಯ ರಹಾನೆ ನಾಯಕತ್ವದ ಇಂಡಿಯಾ ‘ಸಿ’ ತಂಡದಲ್ಲಿ ಸ್ಥಾನ ಗಳಿಸಿದ್ದು ಚೊಚ್ಚಲ ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದಾರೆ. ಟೂರ್ನಿ ಇದೇ 23ರಂದು ಆರಂಭವಾಗಲಿದೆ.

ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತ ಬೆಳೆದ ಪಪ್ಪು ನಂತರ ಕಿರಿಯರ ಕ್ರಿಕೆಟ್‌ನಲ್ಲಿ ಬಂಗಾಳದ ಕ್ಲಬ್‌ಗಳ ಪರ ಆಡಿದರು. ಮೊದಮೊದಲು ವೇಗದ ಬೌಲಿಂಗ್‌ ಮಾಡುತ್ತಿದ್ದ ಪಪ್ಪು, ಹೌರಾ ಯೂನಿಯನ್‌ ಕ್ರಿಕೆಟ್ ಅಕಾಡೆಮಿಯ ಕೋಚ್‌ ಸುಜಿತ್ ಸಹಾ ಅವರ ಸಲಹೆ ಮೇರೆಗೆ ಸ್ಪಿನ್‌ ಬೌಲಿಂಗ್ ಮಾಡಲು ಆರಂಭಿಸಿದರು.

ಕೋಲ್ಕತ್ತದಲ್ಲಿ ಅವ ಕಾಶಗಳು ಕಡಿಮೆ ಇರುವುದರಿಂದ ಒಡಿಶಾ ರಾಜ್ಯದಲ್ಲಿ ಆಶ್ರಯ ಪಡೆದರು. 2015ರಲ್ಲಿ 23 ವರ್ಷದೊಳಗಿನ ತಂಡದಲ್ಲಿ ಸ್ಥಾನ ಗಳಿಸಿದ ಈ ಬೌಲರ್‌ ಮೂರು ವರ್ಷಗಳ ನಂತರ ಲಿಸ್ಟ್ ‘ಎ’ ಪಂದ್ಯ ಆಡಿ ಎಂಟು ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದರು.

ಅಜಿಂಕ್ಯ, ದಿನೇಶ್‌, ಶ್ರೇಯಸ್‌ಗೆ ನಾಯಕತ್ವ

ದೇವಧರ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಇಂಡಿಯಾ ‘ಎ’, ಇಂಡಿಯಾ ‘ಬಿ’ ಮತ್ತು ಇಂಡಿಯಾ ‘ಸಿ’ ತಂಡಗಳಿಗೆ ಕ್ರಮವಾಗಿ ದಿನೇಶ್ ಕಾರ್ತಿಕ್‌, ಶ್ರೇಯಸ್‌ ಅಯ್ಯರ್‌ ಮತ್ತು ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ಮಾಡಲಾಗಿದೆ.

ತಂಡಗಳು ಇಂತಿವೆ: ಇಂಡಿಯಾ ‘ಎ’: ದಿನೇಶ್ ಕಾರ್ತಿಕ್‌ (ನಾಯಕ, ವಿಕೆಟ್ ಕೀಪರ್‌), ಪೃಥ್ವಿ ಶಾ, ಅನ್ಮೋಲ್‌ ಪ್ರೀತ್‌ ಸಿಂಗ್‌, ಎ.ಆರ್‌.ಈಶ್ವರನ್‌, ಅಂಕಿತ್‌ ಬಾವ್ನೆ, ನಿತೀಶ್ ರಾಣಾ, ಕರುಣ್‌ ನಾಯರ್‌, ಕೃಣಾಲ್ ಪಾಂಡ್ಯ, ರವಿಚಂದ್ರನ್ ಅಶ್ವಿನ್‌, ಶ್ರೇಯಸ್‌ ಗೋಪಾಲ್‌, ಎಸ್‌.ಮುಲಾನಿ, ಮೊಹಮ್ಮದ್‌ ಸಿರಾಜ್‌, ಧವಳ್ ಕುಲಕರ್ಣಿ, ಸಿದ್ದಾರ್ಥ್‌ ಕೌಲ್‌; ಇಂಡಿಯಾ ‘ಬಿ‘: ಶ್ರೇಯಸ್ ಅಯ್ಯರ್‌ (ನಾಯಕ), ಮಯಂಕ್‌ ಅಗರವಾಲ್‌, ಋತುರಾಜ್ ಗಾಯಕವಾಡ್‌, ಪಿ.ಎಸ್‌.ಚೋಪ್ರಾ, ಹನುಮವಿಹಾರಿ, ಮನೋಜ್‌ ತಿವಾರಿ, ಅಂಕುಶ್‌ ಬೇನ್ಸ್ (ವಿಕೆಟ್ ಕೀಪರ್‌), ರೋಹಿತ್ ರಾಯುಡು, ಕೆ.ಗೌತಮ್‌, ಮಯಂಕ್‌ ಮಾರ್ಖಂಡೆ, ಎಸ್‌.ನದೀಮ್‌, ದೀಪಕ್‌ ಚಾಹರ್‌, ವರುಣ್ ಆ್ಯರನ್‌, ಜಯದೇವ್‌ ಉನದ್ಕತ್‌; ಇಂಡಿಯಾ ‘ಸಿ’: ಅಜಿಂಕ್ಯ ರಹಾನೆ (ನಾಯಕ), ಅಭಿನವ್‌ ಮುಕುಂದ್‌, ಶುಭಮನ್ ಗಿಲ್‌. ಆರ್‌.ಸಮರ್ಥ್‌, ಸುರೇಶ್ ರೈನಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್‌ (ವಿಕೆಟ್ ಕೀಪರ್‌), ವಿಜಯ ಶಂಕರ್‌, ವಾಷಿಂಗ್ಟನ್‌ ಸುಂದರ್‌, ರಾಹುಲ್ ಚಾಹರ್‌, ಪಪ್ಪು ರಾಯ್‌, ನವದೀಪ್ ಸೈನಿ, ರಜನೀಶ್ ಗುರುಬಾನಿ, ಉಮರ್ ನಜೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT