ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ | ಮುಂಬೈ ಮೇಲುಗೈ; ಆರ್‌ಸಿಬಿಗೆ ನಿರಾಶೆ

ಅಮೋಘ ಫೀಲ್ಡಿಂಗ್, ಬೌಲಿಂಗ್ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್
ಗಿರೀಶ ದೊಡ್ಡಮನಿ
Published 2 ಮಾರ್ಚ್ 2024, 17:24 IST
Last Updated 2 ಮಾರ್ಚ್ 2024, 17:24 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಆರ್ಭಟ ಮುಗಿಲುಮುಟ್ಟಿತ್ತು. 

ಆದರೆ ಇಲ್ಲಿ ಸೇರಿದ್ದ 28 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ  ಆರ್‌ಸಿಬಿ ಆಟಗಾರ್ತಿಯರು ಗೆಲುವಿನ ಕಾಣಿಕೆ ಕೊಡುವಲ್ಲಿ ಮತ್ತೊಮ್ಮೆ ವಿಫಲರಾದರು.

ಇಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಸತತ ಎರಡನೇ ಸೋಲು ಅನುಭವಿಸಿತು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 7 ವಿಕೆಟ್‌ಗಳಿಂದ ಗೆದ್ದಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡವು ಆರಂಭದಿಂದಲೇ ಯೋಜನಾಬದ್ಧ ಅಟವಾಡಿತು. ಗಾಯದಿಂದಾಗಿ ಹರ್ಮನ್‌ಪ್ರೀತ್ ಕೌರ್ ವಿಶ್ರಾಂತಿ ಪಡೆದಿದ್ದರಿಂದ ನಥಾಲಿ ಶಿವರ್ ಬ್ರಂಟ್ ತಂಡವನ್ನು ಮುನ್ನಡೆಸಿದರು. ಅಲ್ಲದೇ ನಥಾಲಿ (27ಕ್ಕೆ2 ಮತ್ತು 27ರನ್) ಆಲ್‌ರೌಂಡ್ ಆಟವಾಡಿದರು. ಅಮೆಲಿಯಾ ಕೆರ್ (ಔಟಾಗದೆ 40; 24ಎ, 4X7) ಚೆಂದದ ಬ್ಯಾಟಿಂಗ್ ಮಾಡಿದರು.

ಬೆಂಗಳೂರು ತಂಡವು ಒಡ್ಡಿದ್ದ 132 ರನ್‌ಗಳ ಗುರಿಯನ್ನು ಇನಿಂಗ್ಸ್‌ನಲ್ಲಿ 29 ಎಸೆತಗಳು ಬಾಕಿಯಿದ್ದಾಗಲೇ ಮುಂಬೈ ಮುಟ್ಟಲು ಅಮೆಲಿಯಾ ಆಟ ಕಾರಣವಾಯಿತು. ಅದಕ್ಕಾಗಿ ಮುಂಬೈ ತಂಡದ  ಮೂರು ವಿಕೆಟ್ ಗಳಿಸುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು.

ಅಮೋಘ ಫೀಲ್ಡಿಂಗ್–ಬೌಲಿಂಗ್:

ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 131 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಅದಕ್ಕೆ ಕಾರಣವಾಗಿದ್ದು ಮುಂಬೈ ತಂಡದ ಬೌಲರ್‌ಗಳ ಶಿಸ್ತಿನ ಬೌಲಿಂಗ್ ಮತ್ತು ಚುರುಕಾದ ಕ್ಷೇತ್ರರಕ್ಷಣೆ. ಸುಮಾರು 40 ರಿಂದ 45 ರನ್‌ಗಳನ್ನು ತಮ್ಮ ಚುರುಕಾದ ಫೀಲ್ಡಿಂಗ್‌ನಿಂದಾಗಿ ತಡೆದರು. ಯಾವುದೇ ಕ್ಯಾಚ್‌ಗಳನ್ನೂ ನೆಲಕ್ಕೆ ಚೆಲ್ಲಲಿಲ್ಲ. ಆರ್‌ಸಿಬಿ ಆಟಗಾರ್ತಿಯರಿಗೆ ಈ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ಹೊಡೆಯಲು ಸಾಧ್ಯವಾಗಲಿಲ್ಲ. 14 ಬೌಂಡರಿಗಳು ಮಾತ್ರ ದಾಖಲಾದವು.

ಪೆರಿ ಆಸರೆ: ಇದರಿಂದಾಗಿ  ಬೆಂಗಳೂರು ತಂಡವು ಮೊದಲ ಪವರ್‌ಪ್ಲೇನಲ್ಲಿಯೇ ಮೂರು ವಿಕೆಟ್ ಕಳೆದುಕೊಂಡು 31 ರನ್ ಗಳಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಎಲಿಸ್ ಪೆರಿ (ಔಟಾಗದೆ 44; 38ಎ, 4X5) ಆಸರೆಯಾದರು.   ಅವರಿಗೆ ಜಾರ್ಜಿಯಾ ವೆರ್ಹಾಮ್ (27; 20ಎ, 4X3) ಉತ್ತಮ ಬೆಂಬಲ ನೀಡಿದರು. ಒತ್ತಡದ ನಡುವೆಯೂ ಪೆರಿ ಮತ್ತು ಜಾರ್ಜಿಯಾ ಏಳನೇ ವಿಕೆಟ್ ಜೊತೆಯಾಟದಲ್ಲಿ 52 ರನ್‌ಗಳನ್ನು ಸೇರಿಸಿದರು.

ಸಂಕ್ಷಿಪ್ತ ಸ್ಕೋರು:

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 131 (ಎಲಿಸ್ ಪೆರಿ ಔಟಾಗದೆ 44, ಜಾರ್ಜಿಯಾ ವೆರ್ಹಾಮ್ 27, ನಥಾಲಿ ಶಿವರ್ ಬ್ರಂಟ್ 27ಕ್ಕೆ2, ಪೂಜಾ ವಸ್ತ್ರಾಕರ್ 14ಕ್ಕೆ2)

ಮುಂಬೈ ಇಂಡಿಯನ್ಸ್: 15.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 133 (ಯಷ್ಟಿಕಾ ಭಾಟಿಯಾ 31, ಹೆಯಲಿ ಮ್ಯಾಥ್ಯೂಸ್ 26, ನಥಾಲಿ ಶಿವರ್ ಬ್ರಂಟ್ 27, ಅಮೆಲಿಯಾ ಕೆರ್ ಔಟಾಗದೆ 40) ಫಲಿತಾಂಶ; ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT