ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಾ’ ಪಂದ್ಯದಲ್ಲಿ ಸೆಮಿಗೆ ಮುಂಬೈ: ಬಾಲಂಗೋಚಿಗಳ ಶತಕ ದಾಖಲೆ

‘ಡ್ರಾ’ ಪಂದ್ಯದಲ್ಲಿ ಸೆಮಿಗೆ ಮುಂಬೈ* ತನುಷ್‌–ತುಷಾರ್‌ ಶತಕ
Published 27 ಫೆಬ್ರುವರಿ 2024, 15:59 IST
Last Updated 27 ಫೆಬ್ರುವರಿ 2024, 15:59 IST
ಅಕ್ಷರ ಗಾತ್ರ

ಮುಂಬೈ: ಬಾಲಂಗೋಚಿಗಳಾದ ತನುಷ್ ಕೋಟ್ಯಾನ್ (ಅಜೇಯ 120) ಮತ್ತು ತುಷಾರ್ ದೇಶಪಾಂಡೆ (123) ಅವರು ಶತಕಗಳನ್ನು ಬಾರಿಸಿ ದಾಖಲೆ ಪುಸ್ತಕಕ್ಕೆ ಸೇರಿದರು. ಆದರೆ ಬರೋಡ ವಿರುದ್ಧ ‘ಡ್ರಾ’ ಆದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನ ಅಲ್ಪ ಮುನ್ನಡೆ ಆಧಾರದ ಮೇಲೆ ಮುಂಬೈ ತಂಡ ಮಂಗಳವಾರ ರಣಜಿ ಟ್ರೋಫಿ ಸೆಮಿಫೈನಲ್ ತಲುಪಿತು.

ಬಾಂದ್ರಾದಲ್ಲಿರುವ ಬಿಕೆಸಿ ಮೈದಾನದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ಭಾನುವಾರ 36 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು. ಮುಂಬೈ ತಂಡದ 384 ರನ್‌ಗಳಿಗೆ ಉತ್ತರವಾಗಿ ಬರೋಡಾ 348 ರನ್ ಗಳಿಸಿತ್ತು.

9 ವಿಕೆಟ್‌ಗೆ 379 ರನ್‌ಗಳೊಡನೆಆಟ ಮುಂದುವರಿಸಿದ ಮುಂಬೈ ತಂಡದ ಮೊತ್ತ ನಂಬರ್ 10 ಮತ್ತು 11ನೇ ಆಟಗಾರರ ಶತಕಗಳಿಂದಾಗಿ ಬೃಹದಾಕಾರವಾಗಿ ಬೆಳೆದು 569 ರನ್ನಿಗೆ ಕೊನೆಗೊಂಡಿತು. ಗೆಲುವಿಗೆ 606 ರನ್‌ಗಳ ಅಸಾಧ್ಯ ಗುರಿ ಎದುರಿಸಿದ ಬರೋಡ ವಿಕೆಟ್‌ಗೆ 121 ರನ್ ಗಳಿಸಿತು. ಟೀ ನಂತರ ಪಂದ್ಯವನ್ನು ಕೊನೆಗೊಳಿಸಲಾಯಿತು. ತವರಿನಲ್ಲೇ ನಡೆಯುವ ಸೆಮಿಫೈನಲ್‌ನಲ್ಲಿ ಮುಂಬೈ, ತಮಿಳುನಾಡು ತಂಡವನ್ನು ಎದುರಿಸಲಿದೆ.

ತನುಷ್ (ಸೋಮವಾರ ಅಜೇಯ 32) ಮತ್ತು ತುಷಾರ್ (ಅಜೇಯ 23) ಅವರು ಬರೋಡ ತಂಡವನ್ನು ಮತ್ತಷ್ಟು ಹತಾಶರನ್ನಾಗಿಸಿದರು. ಇವರಿಬ್ಬರು ಅಂತಿಮ ವಿಕೆಟ್‌ಗೆ 240 ಎಸೆತಗಳಲ್ಲಿ 232 ರನ್ ಸೇರಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಇಬ್ಬರಿಗೂ ಮೊದಲ ಶತಕ. ಇನ್ನೊಂದು ರನ್‌ ಸೇರಿದ್ದರೆ ಹತ್ತನೇ ವಿಕೆಟ್‌ ಜೊತೆಯಾಟದಲ್ಲಿ ದಾಖಲೆ ಸರಿಗಟ್ಟಿದಂತೆ ಆಗುತಿತ್ತು. ದೆಹಲಿಯ ಅಜಯ್ ಶರ್ಮ ಮತ್ತು ಮಣಿಂದರ್ ಸಿಂಗ್ ಹತ್ತನೇ ವಿಕೆಟ್‌ಗೆ 241 ರನ್ ಸೇರಿಸಿದ್ದು ಈವರೆಗಿನ ದಾಖಲೆ. 1991–92ರಲ್ಲಿ ಅವರು, ಮುಂಬೈ ವಿರುದ್ಧ ಆ ದಾಖಲೆ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಕೋಟ್ಯಾನ್ ಅವರು 129 ಎಸೆಗಳನ್ನಾಡಿ 10 ಬೌಂಡರಿ, ಮೂರು ಸಿಕ್ಸರ್ ಬಾರಿಸಿದರೆ, ತುಷಾರ್ ಕೂಡ 129 ಎಸೆತಗಳನ್ನು ಎದುರಿಸಿ, 10 ಬೌಂಡರಿ, ಎಂಟು ಸಿಕ್ಸರ್‌ಗಳನ್ನು ಎತ್ತಿದರು. 

ಕರಾವಳಿ ನಂಟು: ತನುಷ್‌ ಪೋಷಕರು (ಕರುಣಾಕರ ಮತ್ತು ಮಲ್ಲಿಕಾ ಕೋಟ್ಯಾನ್) ಉಡುಪಿ ಜಿಲ್ಲೆಯ ಪಾಂಗಾಳದವರು. ಅವರು ನೆಲೆಸಿರುವುದು ಮುಂಬೈನ ಚೆಂಬೂರಿನಲ್ಲಿ.

ಸ್ಕೋರುಗಳು: ಮುಂಬೈ: 384 ಮತ್ತು 132 ಓವರುಗಳಲ್ಲಿ 569 (ಹಾರ್ದಿಕ್ ತಮೋರೆ 114, ತನುಷ್‌ ಕೋಟ್ಯಾನ್ ಔಟಾಗದೇ 120, ತುಷಾರ್ ದೇಶಪಾಂಡೆ 123; ಭಾರ್ಗವ್ ಭಟ್‌ 200ಕ್ಕೆ7); ಬರೋಡಾ: 348 ಮತ್ತು 30 ಓವರುಗಳಲ್ಲಿ 3 ವಿಕೆಟ್‌ಗೆ 121 (ಪ್ರಿಯಾಂಶು ಮೊಲಿಯ 54‘ ತನುಷ್ ಕೋಟ್ಯಾನ್ 16ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT