ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ತಂದೆಯ ಕನಸು, ಪದಾರ್ಪಣೆ ಪಂದ್ಯದ ಈ ಯಶಸ್ಸು ಅವರಿಗೆ ಅರ್ಪಣೆ: ಆಕಾಶ್ ದೀಪ್

Published 23 ಫೆಬ್ರುವರಿ 2024, 14:27 IST
Last Updated 23 ಫೆಬ್ರುವರಿ 2024, 14:27 IST
ಅಕ್ಷರ ಗಾತ್ರ

ರಾಂಚಿ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಭಾರತದ ವೇಗಿ ಆಕಾಶ್ ದೀಪ್, ಅಗ್ರ ಕ್ರಮಾಂಕದ 3 ವಿಕೆಟ್ ಉರುಳಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಪದಾರ್ಪಣೆ ಪಂದ್ಯದ ಯಶಸ್ಸನ್ನು ಅವರು ದಿವಂಗತ ತಂದೆ ಮತ್ತು ಸಹೋದರನಿಗೆ ಅರ್ಪಿಸಿದ್ದಾರೆ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತಮ್ಮ ತಂದೆಯ ಕನಸನ್ನು ನನಸು ಮಾಡಿದ್ದೇನೆ. ಅದಕ್ಕಾಗಿ, ನನಗೆ ಸಂತೋಷವಿದೆ ಎಂದು ಮೊದಲ ದಿನದಾಟದ ಬಳಿಕ ಅವರು ಹೇಳಿದ್ದಾರೆ.

ಪ್ಯಾರಲಿಸಿಸ್‌ಗೆ ತುತ್ತಾಗಿದ್ದ ಆಕಾಶ್ ತಂದೆ ರಾಮ್‌ಜಿ ಸಿಂಗ್ 2015ರಲ್ಲಿ ಮೃತಪಟ್ಟಿದ್ದರು. ಆ ಸಾವಿನ ನೋವು ಮಾಸುವ ಮುನ್ನವೇ ಸಹೊದರ ಸಹ ಅನಾರೋಗ್ಯದಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು.

‘ಒಂದೇ ವರ್ಷದಲ್ಲಿ ತಂದೆ ಮತ್ತು ಸಹೋದರನನ್ನು ಕಳೆದುಕೊಂಡ ಬಳಿಕ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದುಕೊಂಡು ಕ್ರಿಕೆಟ್ ಆಡಲು ಆರಂಭಿಸಿದೆ.. ಕಳೆದುಕೊಳ್ಳಲು ನನ್ನ ಬಳಿ ಏನೂ ಉಳಿದಿರಲಿಲ್ಲ. ಗೆಲುವಿಗಾಗಿ ಎಲ್ಲವನ್ನೂ ಮಾಡಿದೆ’ಎಂದು ಆಕಾಶ್ ದೀಪ್ ವರದಿಗಾರರಿಗೆ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಪಂದ್ಯದಲ್ಲೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ 27 ವರ್ಷದ ವೇಗಿ ಆಕಾಶ್, ಇಂಗ್ಲೆಂಡ್‌ನ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು(70/3) ಪೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ, ಭೋಜನ ವಿರಾಮದ ಹೊತ್ತಿಗೆ 112 ರನ್‌ಗೆ ಇಂಗ್ಲೆಂಡ್ ತಂಡದ ಅರ್ಧ ಬ್ಯಾಟಿಂಗ್ ಪಡೆ ಪೆವಿಲಿಯನ್ ಸೇರಿತ್ತು.

‘ಈ ಯಶಸ್ಸನ್ನು ನಾನು ನನ್ನ ತಂದೆಗೆ ಅರ್ಪಿಸಲು ಬಯಸುತ್ತೇನೆ. ಏಕೆಂದರೆ, ನನ್ನ ಮಗ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬುದು ಅವರ ಕನಸಾಗಿತ್ತು. ಅವರು ಬದುಕಿದ್ದಾಗ ಅವರಿಗಾಗಿ ನಾನು ಏನನ್ನೂ ಮಾಡಿಲ್ಲ. ಹಾಗಾಗಿ, ಈ ಆಟದ ಯಶಸ್ಸು ನನ್ನ ತಂದೆಗೆ ಸೇರಿದ್ದು..’ ಎಂದು ಆಕಾಶ್ ಹೇಳಿದ್ದಾರೆ.

‘ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಆಡುವುದು ಎಲ್ಲ ಕ್ರಿಕೆಟಿಗರ ಕನಸಾಗಿರುತ್ತದೆ. ನನಗೂ ಆ ಕನಸು ಇತ್ತು. ಬಾಲ್ಯದಲ್ಲಿ ನನಗೆ ಕ್ರಿಕೆಟ್ ಗೊತ್ತಿರಲಿಲ್ಲ. ನಾನು ಬೆಳೆದ ಸ್ಥಳದಲ್ಲಿ ಕ್ರಿಕೆಟ್ ಅಷ್ಟು ಪ್ರಚಲಿತದಲ್ಲಿ ಇರಲಿಲ್ಲ. 2007ರ ಬಳಿಕ ನಾನು ಟೆನಿಸ್ ಕ್ರಿಕೆಟ್ ಆಡಲು ಆರಂಭಿಸಿದೆ. 2016ರಿಂದ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದೆ. ಭಾರತದ ಮೊಹಮ್ಮದ್ ಶಮಿ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ ಅವರ ಬೌಲಿಂಗ್ ಶೈಲಿ ಫಾಲೊ ಮಾಡಲು ಆರಂಭಿಸಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT