ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ನೋವು –ನಲಿವು ಕಂಡ ಆಕಾಶ್ ದೀಪ್: ಸಂಕಷ್ಟದಿಂದ ಸ್ವಂತ ಮನೆಯವರೆಗೆ...

Published 23 ಫೆಬ್ರುವರಿ 2024, 13:16 IST
Last Updated 23 ಫೆಬ್ರುವರಿ 2024, 13:16 IST
ಅಕ್ಷರ ಗಾತ್ರ

ರಾಂಚಿ: ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ದಿ ಗ್ರಾಮದಲ್ಲಿ ಲದುಮಾ ದೇವಿ ತಮ್ಮ ಕುಟುಂಬದ ಮನೆ ನಿರ್ಮಾಣದ ಕೆಲಸ ನೋಡಿಕೊಳ್ಳುತ್ತಿದ್ದರು. ಆಗ ಅವರಿಗೆ ಮಗ ಆಕಾಶ್ ದೀಪನಿಂದ ಕರೆ ಬಂತು ‘ಅಮ್ಮಾ, ನಾನು ನಾಳೆ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ. ನೀನು ಬರಲೇಬೇಕು....’

300 ಕಿ.ಮೀ. ದೂರ ರಸ್ತೆ ಮೂಲಕ ಕ್ರಮಿಸಿ, ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣ ತಲುಪಿದ ಅವರಿಗೆ ಪುತ್ರ ಆಕಾಶ್‌, ಭಾರತ ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಅವರಿಂದ ‘ಟೆಸ್ಟ್ ಕ್ಯಾಪ್‌’ ಪಡೆದಾಗ ಹೆಮ್ಮೆ, ಅಭಿಮಾನದಿಂದ ಕಣ್ಣಾಲಿಗಳು ತುಂಬಿಬಂದಿದ್ದವು. ನಾಲ್ಕನೇ ಟೆಸ್ಟ್‌ನ ಮೊದಲ ಅವಧಿಯಲ್ಲೇ ಮೂರು ವಿಕೆಟ್‌ ಪಡೆದ 27ರ ಹರೆಯದ ಆಕಾಶ್‌ ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದರು.

ಆಕಾಶ್ ದೀಪ್ ಅವರ ಮೂವರು ಸೋದರಸಂಬಂಧಿಗಳು ಈ ಭಾವನಾತ್ಮಕ ಗಳಿಗೆಯಲ್ಲಿ ಅವರ ಬೆನ್ನಿಗಿದ್ದರು.

‘ತಂದೆಗೆ ಮಗ ಸರ್ಕಾರಿ ಅಧಿಕಾರಿಯಾಗಬೇಕೆಂಬ ಉತ್ಕಟ ಬಯಕೆಯಿತ್ತು. ಆದರೆ ಮಗನಿಗೆ ಕ್ರಿಕೆಟ್‌ ಕಡೆಗೇ ಒಲವು ಇತ್ತು. ಮಗನನ್ನು ಕ್ರಿಕೆಟಿಗ ಮಾಡುವ ‘ಅಪರಾಧ’ದಲ್ಲಿ ನಾನೂ ಪಾಲುದಾರಳಾಗಿದ್ದೆ. ಯಾರಿಗೂ ತಿಳಿಯದಂತೆ ಅವನನ್ನು ಆಡಲು ಕಳಿಸುತ್ತಿದ್ದೆ. ಕನಸು ಸಾಕಾರಗೊಳಿಸಲು ನೆರವಾಗಿದ್ದೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

‘ಮಗ ಕ್ರಿಕೆಟ್‌ ಆಡುವುದನ್ನು ಯಾರಾದರೂ ನೋಡಿದಾಗ – ಅವನು ಹಾದಿತಪಿದ್ದಾನೆ. ಪುಂಡನಾಗುತ್ತಾನೆ’ ಎಂದೆಲ್ಲಾ ಹೇಳುತ್ತಿದ್ದರು. ಕುಟುಂಬಕ್ಕೆ ಎರಗಿದ ಕಷ್ಟಗಳ ನಡುವೆಯೂ ಅವನ (ಆಕಾಶ್‌) ಬೆಂಬಲಕ್ಕೆ ನಿಂತಿದ್ದೆ’ ಎಂದು ನಡುಗುವ ಧ್ವನಿಯಲ್ಲಿ ನೆನಪಿಸುವಾಗ ಅವರ ಮುಖದಲ್ಲಿ ನೋವಿನ ಗೆರೆಗಳೆದ್ದವು.

ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಆಕಾಶ್ ತಂದೆ ರಾಮ್‌ಜಿ ಸಿಂಗ್ ಅವರಿಗೆ ಮಗ ಕ್ರಿಕೆಟರ್‌ ಆಗುವುದು ಸುತಾರಂ ಇಷ್ಟವಿರಲಿಲ್ಲ. ನಿವೃತ್ತಿ ನಂತರ ಪಾರ್ಶ್ವವಾಯುವಿಗೆ ಒಳಗಾದ ಅವರು 2015ರ ಫೆಬ್ರುವರಿಯಲ್ಲಿ ಅಸುನೀಗಿದ್ದರು. ಅದೇ ವರ್ಷದ ಅಕ್ಟೋಬರ್‌ನಲ್ಲಿ ಅವರ ಹಿರಿಯ ಮಗ ಧೀರಜ್ ಕಾಯಿಲೆಯಿಂದ ಮೃತಪಟ್ಟರು. ಹೀಗಾಗಿ ತಾಯಿ ಮತ್ತು ಇಬ್ಬರು ಸಹೋದರಿಯನ್ನು ನೋಡಿಕೊಳ್ಳುವ ಹೊಣೆ ಆಕಾಶ್‌ ಹೆಗಲಿಗೆ ಬಿತ್ತು.

‘ಅವರಿಬ್ಬರೂ ಬದುಕಿರುತ್ತಿದ್ದಿದ್ದರೆ ತುಂಬಾ ಖುಷಿಪಡುತ್ತಿದ್ದರು. ಇದು ನನ್ನ ಜೀವನದ ಸ್ಮರಣೀಯ ದಿನ. ನಾನು ಈ ಭುವಿಯಲ್ಲಿ ಅತ್ಯಂತ ಹೆಮ್ಮೆಯ ತಾಯಿ’ ಎಂದು ಭಾವೊದ್ವೇಗದಿಂದ ಹೇಳಿದರು.

ಆಕಾಶ್ ಅವರ ದೊಡ್ಡಪ್ಪ ದುರ್ಗಾಪುರ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅಲ್ಲಿ ತರಬೇತಿ ಪಡೆಯಲು ಅವಕಾಶವಾಯಿತು. ‘ಅವರದು ದೈವದತ್ತ ಪ್ರತಿಭೆ ಎಂಬುದು ಮನವರಿಕೆಯಾಗಿತ್ತು’ ಎಂದು ಅವರ ದೊಡ್ಡಪ್ಪನ ಮಗ ವೈಭವ್ ನೆನಪಿಸುತ್ತಾರೆ.

ಕ್ರಿಕೆಟ್‌ ಭವಿಷ್ಯ ಅರಸಿ ಕೋಲ್ಕತ್ತಕ್ಕೆ ಹೋದ ಅವರನ್ನು ಮೂರು ಕ್ಲಬ್‌ಗಳು ತಿರಸ್ಕರಿಸಿದ್ದವು. ಆದರೆ ಇವುಗಳಲ್ಲಿ ಒಂದು ಕ್ಲಬ್‌– ಯುನೈಟೆಡ್‌ ಸಿಸಿ ಅವರಿಗೆ ನಂತರ ಅವಕಾಶ ನೀಡಿತು. ಮೊದಲ (2017–18) ಋತುವಿನಲ್ಲೇ 42 ವಿಕೆಟ್‌ ಪಡೆದಿದ್ದರು. ಸಿ.ಕೆ.ನಾಯ್ಡು ಟ್ರೋಫಿಯಲ್ಲಿ ಬಂಗಾಳ ತಂಡಕ್ಕೆ ಆಯ್ಕೆಯಾದರು. ಆ ವರ್ಷ ತಂಡ ಚಾಂಪಿಯನ್ ಆಯಿತು. ಐಪಿಎಲ್‌ನಲ್ಲಿ ಮೊದಲು ರಾಜಸ್ಥಾನ  ತಂಡದ ನೆಟ್‌ ಬೌಲರ್ ಆಗಿದ್ದ ಆಕಾಶ್‌, ನಂತರ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಐಪಿಎಲ್‌ನಲ್ಲಿ ಆಡಿದ ನಂತರ ಅವರ ಹಣಕಾಸು ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತು. ಈಗ ಮೂರು ಮಹಡಿಗಳ ಮನೆ ನಿರ್ಮಿಸುತ್ತಿದ್ದು ತಾಯಿಯೇ ಅದರ ಮೇಲ್ವಿಚಾರಣೆ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT