ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಕೋವಿಡ್ ಕಾರ್ಯಪಡೆಯಲ್ಲಿ ದ್ರಾವಿಡ್

Last Updated 3 ಆಗಸ್ಟ್ 2020, 23:29 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಕಾರ್ಯಪಡೆ ರಚಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದ್ದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಮತ್ತು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಪ್ರತಿನಿಧಿಯಾಗಿ ಸೇರಿಸಿಕೊಳ್ಳಲಾಗಿದೆ.

ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಲ್ಲಿ ಕಾರ್ಯಪಡೆ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು. ಇದಕ್ಕೂ ಮೊದಲು ಪ್ರತಿನಿಧಿಗಳು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು. 60 ವರ್ಷ ದಾಟಿದವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬಾರದು ಎಂದು ಮಂಡಳಿ ಸೂಚಿಸಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುವ ತರಬೇತಿಯಲ್ಲಿ ರಾಹುಲ್ ದ್ರಾವಿಡ್, ಒಬ್ಬರು ಆರೋಗ್ಯಾಧಿಕಾರಿ, ಪೋಷಕ ತಜ್ಞ ಮತ್ತು ಬಿಸಿಸಿಐನ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಇರುವರು. ಕೋವಿಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಕುರಿತು ಆಟಗಾರರಿಗೆ ನಿಖರ ಮತ್ತು ಸ್ಪಷ್ಟ ಮಾಹಿತಿಗಳನ್ನು ನೀಡುವುದು ಮತ್ತು ಕೋವಿಡ್‌ ಬಗೆಗಿನ ಮಾಹಿತಿಗಳನ್ನು ಪ್ರತಿನಿತ್ಯ ಬಿಸಿಸಿಐಗೆ ತಲುಪಿಸುವುದು ಅವರ ಪ್ರಮುಖ ಕರ್ತವ್ಯ ಆಗಿರುತ್ತದೆ.

2019–20ನೇ ಋತುವಿನ ದೇಶಿ ಕ್ರಿಕೆಟ್ ಚಟುವಟಿಕೆ ಮಾರ್ಚ್ ತಿಂಗಳಲ್ಲಿ ಮುಗಿದಿತ್ತು. ಈ ವರ್ಷದ ಚಟುವಟಿಕೆ ಈ ತಿಂಗಳಲ್ಲಿ ಆರಂಭಗೊಳ್ಳಬೇಕಾಗಿತ್ತು. ಆದರೆ ಕೋವಿಡ್–19 ತಂದಿತ್ತಿರುವ ವಿಷಮ ಪರಿಸ್ಥಿತಿ ಇದಕ್ಕೆ ಅಡ್ಡಿಯಾಗಿದೆ.

ಈ ಬಾರಿಯ ತರಬೇತಿ ಶಿಬಿರ ಆರಂಭವಾಗುವುದಕ್ಕೂ ಮೊದಲು ವೈದ್ಯಕೀಯ ತಂಡವು ಆಟಗಾರರ ಪ್ರಯಾಣ ಮಾಹಿತಿ ಮತ್ತು ಆರೋಗ್ಯದ ವಿವರಗಳನ್ನು ಪಡೆದುಕೊಳ್ಳಲಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಳ್ಳಲಿದೆ. ಯಾರಲ್ಲಾದರೂ ಕೋವಿಡ್–19ರ ಲಕ್ಷಣ ಕಂಡುಬಂದರೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮೂರು ದಿನಗಳಲ್ಲಿ ಎರಡು ಬಾರಿ ಪರೀಕ್ಷೆ ಮಾಡಲಾಗುವುದು. ಎರಡೂ ಪರೀಕ್ಷೆಗಳಲ್ಲಿ ನಗೆಟಿವ್ ವರದಿ ಬಂದರೆ ಮಾತ್ರ ತರಬೇತಿಗೆ ಅವಕಾಶ ನೀಡಲಾಗುವುದು. ತರಬೇತಿ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT