ಶನಿವಾರ, ಅಕ್ಟೋಬರ್ 31, 2020
26 °C

ಹೈದರಾಬಾದ್ ಬ್ಯಾಟಿಂಗ್‌ಗೆ ವಿಲಿಯಮ್ಸನ್ ಬಲ ಬೇಕು: ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬ್ಯಾಟಿಂಗ್ ವಿಭಾಗ ಶಕ್ತಿಯುತವಾಗಬೇಕಾದರೆ ಕೇನ್ ವಿಲಿಯಮ್ಸನ್ ಅವರನ್ನು ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸಬೇಕು ಎಂದು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.

ಸನ್‌ರೈಸರ್ಸ್‌ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಎರಡೂ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ಆಡಿರಲಿಲ್ಲ.

ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನೀಡಿದ್ದ 164 ರನ್‌ ಗುರಿ ಬೆನ್ನತ್ತುವಲ್ಲಿ ವಿಫಲವಾಗಿದ್ದ ರೈಸರ್ಸ್‌, ಹತ್ತು ರನ್‌ಗಳಿಂದ ಸೋತಿತ್ತು. ಎರಡನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್‌)‌ ಎದುರು ಮೊದಲು ಬ್ಯಾಟ್‌ ಮಾಡಿ ಕೇವಲ 142 ರನ್‌ ಗಳಿಸಿತ್ತು. ಈ ಗುರಿಯನ್ನು ಇನ್ನೂ ಎರಡು ಓವರ್‌ ಬಾಕಿ ಇರುವಂತೆಯೇ ಮುಟ್ಟಿದ್ದ ಕೆಕೆಆರ್‌ ಗೆದ್ದಿತ್ತು.

‘ಈ ಮೊದಲು ಸಣ್ಣ ಗಾಯದ ಸಮಸ್ಯೆಯಾಗಿತ್ತು. ಇದೀಗ ಫಿಟ್‌ ಆಗಿದ್ದೇನೆ. ಮುಂದಿನ ಪಂದ್ಯದಲ್ಲಿ ಆಯ್ಕೆಗೆ ಲಭ್ಯವಿದ್ದೇನೆ’ ಎಂದು ಸ್ಟಾರ್ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಹೇಳಿದ್ದರು.

ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರ ಮಿಚೆಲ್‌ ಮಾರ್ಷ್‌ ಗಾಯಗೊಂಡಿದ್ದರು. ಅವರ ಬದಲು ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿಗೆ ಸ್ಥಾನ ನೀಡಲಾಗಿದೆ. 

‘ಮಿಚೆಲ್‌ ಮಾರ್ಷ್‌ ಬದಲಿಗೆ ನಬಿಗೆ ಅವಕಾಶ ನೀಡಲಾಗಿದೆ. ಪಂದ್ಯದ ವೇಳೆ ನಡೆದ ಸಂದರ್ಶನದಲ್ಲಿ ಮಾತನಾಡಿದ ವಿಲಿಯಮ್ಸನ್‌ ಯಾವುದೇ ಗಾಯದ ಸಮಸ್ಯೆಯನ್ನು ಹೇಳಿಕೊಂಡಿಲ್ಲ. ಹಾಗಾಗಿ ಅವರೂ ಫಿಟ್ ಆಗಿದ್ದಾರೆ. ಅವರು ಫಿಟ್‌ ಆಗಿ ಲಭ್ಯರಿರುವಾಗ ಅವರಿಗೆ ಅವಕಾಶ ನೀಡದಿರುವುದು ಏಕೆ?’ ಎಂದು ತಮ್ಮ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದಾರೆ.

‘ವಿಲಿಯಮ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ವಿಲಿಯಮ್ಸನ್‌ ಇಲ್ಲದೆ ಆ ತಂಡ ಬಲಿಷ್ಠವಾಗಿ ಕಾಣುವುದಿಲ್ಲ. ವಿಲಿಯಮ್ಸನ್‌ಗೆ ಸ್ಥಾನ ನೀಡಲು ಸಾಧ್ಯವಾಗದಿದ್ದರೆ, 180ರ ಬದಲು 140 ರನ್‌ ಗಳಿಸಲಷ್ಟೇ ಸಾಧ್ಯವಾಗುತ್ತದೆ’ ಎಂದಿದ್ದಾರೆ.

‘ಎಸ್‌ಆರ್‌ಎಚ್‌ ಬೌಲಿಂಗ್‌ ವಿಭಾದಲ್ಲಿಯೂ ಸಮಸ್ಯೆಗಳಿವೆ. ಭುವನೇಶ್ವರ್‌ ಕುಮಾರ್, ರಶೀದ್ ಖಾನ್‌  ಅವರಿಗೆ ಬೇರೆಯವರೂ ಅವರಿಗೆ ಸರಿಯಾಗಿ ಬೆಂಬಲ ನೀಡದಿದ್ದರೆ, ದುರ್ಬಲ ತಂಡವಾಗಿ ಮತ್ತು ಅಂಕಪಟ್ಟಿಯಲ್ಲಿ ಕೆಳಗಿನ ನಾಲ್ಕು ತಂಡಗಳಲ್ಲಿ ಒಂದಾದರೂ ಅಚ್ಚರಿಪಡಬೇಕಿಲ್ಲ’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು