ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ನೆನಪಿನಲ್ಲಿ ಹೊಸ ಹುರುಪು

ಶಿವಮೊಗ್ಗದ ನವುಲೆಯಲ್ಲಿ ಇಂದಿನಿಂದ ಕರ್ನಾಟಕ ಮತ್ತು ಮಧ್ಯಪ್ರದೇಶ ನಡುವೆ ರಣಜಿ ಕ್ರಿಕೆಟ್ ಪಂದ್ಯ
Last Updated 3 ಫೆಬ್ರುವರಿ 2020, 19:51 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷ್ಣಪ್ಪ ಗೌತಮ್ ಎಂಬ ಇಂಧನ ಒಂದು ಕಡೆ. ವೇಗವರ್ಧಕ ರೋನಿತ್ ಮೋರೆ ಇನ್ನೊಂದು ಕಡೆ. ಕರ್ನಾಟಕ ತಂಡ ರಣಜಿ ಟೂರ್ನಿಯಲ್ಲಿ ನಾಕೌಟ್ ಹಂತ ಪ್ರವೇಶಿಸುವ ಕನಸು ಹರಳುಗಟ್ಟಿರುವ ಹೊತ್ತಿನಲ್ಲಿ ಇವರಿಬ್ಬರ ಹೆಸರುಗಳು ಮುಖ್ಯವಾಗಿವೆ.

ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಶುರು ವಾಗಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಆತಿಥೇಯರಿಗೆ ಎದುರಾಳಿ.

ರೈಲ್ವೇಸ್‌ ವಿರುದ್ಧ ದೆಹಲಿಯಲ್ಲಿ ಕಳೆದ ವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಆತ್ಮವಿಶ್ವಾಸವನ್ನು ಮರಳಿ ಪಡೆದಿದೆ. ಅಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬರೀ 11 ಓವರ್‌ಗಳಲ್ಲಿ 6 ವಿಕೆಟ್ ಗಳಿಸಿದ ರೋನಿತ್‌ ಇಲ್ಲಿಯೂ ಯಶಸ್ಸಿನ ನೆನಪನ್ನು ಪಡೆದವರು.

ಕಳೆದ ರಣಜಿ ಋತುವಿನಲ್ಲಿ ಇದೇ ಮೈದಾನದಲ್ಲಿ ರೈಲ್ವೇಸ್‌ ವಿರುದ್ಧ ನಡೆದಿದ್ದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರೋನಿತ್ 5 ವಿಕೆಟ್ ಕಿತ್ತಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಗೌತಮ್ 6 ವಿಕೆಟ್‌ ಪಡೆದು, ಕೈಚಳಕ ತೋರಿಸಿದ್ದರು. ಹೀಗಾಗಿ ಇಬ್ಬ ರಿಗೂ ಇದು ಮೆಚ್ಚಿನ ನೆಲ.

2017ರಲ್ಲಿ ಹೈದರಾಬಾದ್ ಎದುರು ಇದೇ ಮೈದಾನದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಕೂಡ ಕರ್ನಾಟಕ ಜಯಭೇರಿ ಬಾರಿಸಿತ್ತು.

ಆಗ ಕರುಣ್ ನಾಯರ್ ಶತಕ ಗಳಿಸಿ ಪಂದ್ಯದ ಪುರುಷೋತ್ತಮ ಗೌರವಕ್ಕೆ ಭಾಜನರಾಗಿದ್ದರು. ಸೋಲನ್ನೇ ಕಾಣದ ಮೈದಾನದಲ್ಲಿ ಕರ್ನಾಟಕ ಹುರುಪಿನಿಂದ ಕಣಕ್ಕಿಳಿಯುವುದು ಸ್ಪಷ್ಟ.

ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಪ್ರಸಿದ್ಧ ಕೃಷ್ಣ ತರಹದ ಪ್ರಮುಖರ ಅನುಪಸ್ಥಿತಿಯಲ್ಲೂ ಆಡಿ, ಕರ್ನಾಟಕ 24 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯದ ಗೆಲುವು ಮುಂದಿನ ಹಂತ ತಲುಪುವ ಗುರಿಯನ್ನು ನಿಕ್ಕಿ ಮಾಡಲಿಕ್ಕೂ ಸಾಕು.

ಒಂದೂ ಗೆಲುವು ಕಾಣದ ಮಧ್ಯಪ್ರದೇಶ ಎಂಟು ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಅಡಿಯಿಂದ ಎರಡನೇ ಸ್ಥಾನದಲ್ಲಿದೆ. ಆ ತಂಡದ ನಾಯಕ ನಮನ್ ಓಝಾ ವಿಶ್ರಾಂತಿ ಪಡೆದಿದ್ದು, ಶುಭಂ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಉತ್ತರ ಪ್ರದೇಶದ ಎದುರು ತಮ್ಮ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್‌ ಗಳಿಸಿದ ಎಡಗೈ ಮಧ್ಯಮ ವೇಗದ ಬೌಲರ್ ರವಿ ಯಾದವ್ ಮೇಲೆ ಬೆರಗುಗಣ್ಣಿದೆ.

ಮೊದಲ ಒಂದೆರಡು ತಾಸು ಈ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಟಾಸ್‌ ಗೆಲ್ಲುವ ನಾಯಕ ಫೀಲ್ಡಿಂಗ್ ಆಯ್ದುಕೊಳ್ಳುವ ಸಂಭವವೇ ಹೆಚ್ಚು.

ಮಧ್ಯಪ್ರದೇಶವು ರಮೀಜ್ ಖಾನ್ ಹಾಗೂ ಯಶ್ ದುಬೆ ತರಹದ ಗಟ್ಟಿ ಬ್ಯಾಟ್ಸ್‌ಮನ್‌ಗಳನ್ನು ನೆಚ್ಚಿಕೊಂಡಿದೆ. ಕರ್ನಾಟಕ ಕಳೆದ ಪಂದ್ಯದಲ್ಲಿ ಆಡಿದ ಹನ್ನೊಂದು ಮಂದಿಯನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ.

ಪ್ರತೀಕ್ ಜೈನ್–ಗೌತಮ್ ಸ್ಪಿನ್ನರ್‌ ಜೋಡಿ, ಮಿಥುನ್–ರೋನಿತ್ ವೇಗದ ಮೋಡಿ, ದೇವದತ್ತ ಪಡಿಕ್ಕಲ್–ಗೌತಮ್–ರೋಹನ್ ಕದಂ ಬ್ಯಾಟಿಂಗ್ ಫಾರ್ಮ್... ಎಲ್ಲವುಗಳ ನೆನಪಿನೊಂದಿಗೆ ನವುಲೆಯ ಮೇಲಿನ್ನು ಕುತೂಹಲದ ನೋಟ.

ತಂಡಗಳು ಇಂತಿವೆ

ಕರ್ನಾಟಕ: ಕರುಣ್ ನಾಯರ್ (ನಾಯಕ), ಶರತ್ ಬಿ.ಆರ್. (ವಿಕೆಟ್ ಕೀಪರ್), ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಸಮರ್ಥ್ ಆರ್, ರೋಹನ್ ಕದಂ, ದೇವದತ್ತ ಪಡಿಕ್ಕಳ್, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಮಿಥುನ್ ಎ., ರೋನಿತ್ ಮೋರೆ, ಕೌಶಿಕ್ ವಿ., ಪ್ರತೀಕ್ ಜೈನ್, ಸಿದ್ಧಾರ್ಥ್‌ ವಿ.ಕೆ, ಪ್ರವೀಣ್ ದುಬೆ, ಗೌತಮ್ ಕೆ.

ಮಧ್ಯಪ್ರದೇಶ: ಶುಭಂ ಶರ್ಮ (ನಾಯಕ), ಅಜಯ್ ರೋಹೆರಾ (ವಿಕೆಟ್‌ ಕೀಪರ್), ಹಿಮಾಂಶು ಮಂತ್ರಿ (ವಿಕೆಟ್‌ ಕೀಪರ್), ಯಶ್‌ ದುಬೆ, ರಮೀಜ್‌ ಖಾನ್, ಗೌತಮ್ ರಘುವಂಶಿ, ಆನಂದ್‌ ಸಿಂಗ್‌ ಬೈಸ್‌, ರಜತ್‌ ಪಾಟಿದಾರ್, ಆದಿತ್ಯ ಶ್ರೀವಾಸ್ತವ, ಕುಮಾರ್‌ ಕಾರ್ತಿಕೇಯ ಸಿಂಗ್, ಮಿಹಿರ್ ಹಿರ್ವಾನಿ, ಗೌರವ್ ಯಾದವ್, ರವಿ ಯಾದವ್, ವೆಂಕಟೇಶ್ ಅಯ್ಯರ್, ಕುಲದೀಪ್ ಸೇನ್.

ಪಂದ್ಯ ಪ್ರಾರಂಭ: ಬೆಳಿಗ್ಗೆ 9.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT