ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ನಾಯಕತ್ವ ವಹಿಸಲಿ: ಇರ್ಫಾನ್‌ ಪಠಾಣ್‌

Last Updated 9 ನವೆಂಬರ್ 2020, 15:11 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದ ಉಪನಾಯಕನ ಜವಾಬ್ದಾರಿಯನ್ನು ಅಜಿಂಕ್ಯಾ ರಹಾನೆ ಅವರಿಗೆ ವಹಿಸಲಾಗಿದೆ. ಆದರೆ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವವನ್ನು ರಹಾನೆ ಬದಲಿಗೆ ಅನುಭವಿ ಆಟಗಾರ ರೋಹಿತ್‌ ಶರ್ಮಾ ಅವರಿಗೆ ನೀಡಬೇಕೆಂದು ಭಾರತ ತಂಡದ ಮಾಜಿ ವೇಗದ ಬೌಲರ್‌ ಇರ್ಫಾನ್‌ ಪಠಾಣ್‌ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ನಾಯಕ ವಿರಾಟ್ ಕೊಹ್ಲಿ ತಾಯ್ನಾಡಿಗೆ ವಾಪಸಾಗಲಿದ್ದಾರೆ. ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ರಜೆ ಅವಕಾಶ ನೀಡಿದೆ. ಹೀಗಾಗಿ ಪರಿಷ್ಕೃತ ತಂಡಗಳನ್ನು ಭಾನುವಾರ ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ಸ್ಥಾನ ಪಡೆದಿದ್ದರೂ, ಅಜಿಂಕ್ಯಾ ರಹಾನೆ ಅವರನ್ನು ಉಪನಾಯಕನ ಪಟ್ಟದಲ್ಲೇ ಉಳಿಸಲಾಗಿದೆ.

‘ವಿರಾಟ್‌ ಕೊಹ್ಲಿ ಅನುಪಸ್ಥಿತಿಯು ತಂಡದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಆದರೆ ಅವರ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ. ಕ್ರಿಕೆಟ್‌ನಿಂದಾಚೆ ಇರುವ ಜೀವನವನ್ನು ಒಪ್ಪಿಕೊಳ್ಳಬೇಕು. ಕುಟುಂಬವೂ ಬಹಳ ಮುಖ್ಯ‘ ಎಂದು ಪಠಾಣ್‌ ಹೇಳಿದ್ದಾರೆ.

ರೋಹಿತ್‌ ಅವರು ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರು ಹಂಗಾಮಿ ನಾಯಕರಾಗಿದ್ದ ಅವಧಿಯಲ್ಲಿ ಭಾರತ ತಂಡ ನಿಧಾಸ್‌ ಟ್ರೋಫಿ ಹಾಗೂ ಏಷ್ಯಾ ಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

‘ನಾನು ರಹಾನೆ ವಿರುದ್ಧವಾಗಿ ಮಾತನಾಡುತ್ತಿಲ್ಲ. ಆದರೆ ರೋಹಿತ್‌ ನಾಯಕನಾಗಬೇಕು. ಅವರು ಆ ಸ್ಥಾನಕ್ಕೆ ಅರ್ಹರು ಹಾಗೂ ನಾಯಕತ್ವಕ್ಕೆ ಬೇಕಾದ ಅನುಭವ ಅವರಿಗಿದೆ‘ ಎಂದು ಇರ್ಫಾನ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT