ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಐದು ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಿದಂತೆ: ಎಸ್‌.ರವಿ

ಹಗಲು–ರಾತ್ರಿ ಟೆಸ್ಟ್ ಪಂದ್ಯದಲ್ಲಿ ಅಂಪೈರಿಂಗ್ ಅನುಭವ ಬಿಚ್ಚಿಟ್ಟ ಎಸ್. ರವಿ
Last Updated 20 ನವೆಂಬರ್ 2019, 19:38 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಹಗಲು–ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸುವುದು ಎಂದರೆ ಸತತ ಐದು ಏಕದಿನ ಪಂದ್ಯಗಳಲ್ಲಿ ಕೆಲಸ ಮಾಡಿದಂತಾಗುತ್ತದೆ. ಅದಕ್ಕಾಗಿ ನನ್ನ ದೇಹದ ಜೈವಿಕ ಗಡಿಯಾರವನ್ನು ಹೊಂದಾಣಿಕೆ ಮಾಡಲು ವಿಳಂಬವಾಗಿ ಮಲಗಿ, ತಡವಾಗಿ ಏಳುವ ರೂಢಿ ಮಾಡಿಕೊಂಡಿದ್ದೆ’–

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಪ್ಯಾನೆಲ್‌ನಲ್ಲಿರುವ ಭಾರತದ ಏಕೈಕ ಅಂಪೈರ್ ಸುಂದರಂ ರವಿ ಅವರ ಮಾತುಗಳಿವು.

2015ರಲ್ಲಿ ನಡೆದಿದ್ದ ಮೊಟ್ಟಮೊದಲ ಪಿಂಕ್ ಬಾಲ್ ಟೆಸ್ಟ್‌ (ಆಸ್ಟ್ರೇಲಿಯಾ –ನ್ಯೂಜಿಲೆಂಡ್)ನಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಕೋಲ್ಕತ್ತದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಣ ಶುಕ್ರವಾರ ಆರಂಭವಾಗಲಿರುವ ಹೊನಲು ಬೆಳಕಿನ ಟೆಸ್ಟ್‌ ಪಂದ್ಯದ ಸಂದರ್ಭದಲ್ಲಿ ರವಿ ತಮ್ಮ ಅನುಭವವನ್ನು ಹಂಚಿಕೊಂಡರು.

‘ದಿನದಾಟವು ರಾತ್ರಿ 10.30ರ ಸುಮಾರಿಗೆ ಮುಗಿಯುತ್ತಿತ್ತು. ಕ್ರೀಡಾಂಗಣದಿಂದ ಹೋಟೆಲ್ ಕೋಣೆ ತಲುಪುವಷ್ಟರಲ್ಲಿ ತಡವಾಗಿರುತ್ತಿತ್ತು. ಈ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಮಲಗುವ ಸಮಯವನ್ನೇ ಬದಲಿಸಿಕೊಂಡೆ. ತಡವಾಗಿ ಮಲಗಿ, ತಡವಾಗಿ ಏಳುವುದನ್ನು ಆಭ್ಯಾಸ ಮಾಡಿಕೊಂಡೆ ’ ಎಂದು ನೆನಪಿಸಿಕೊಂಡಿದ್ದಾರೆ.

‘ಚೆಂಡಿನ ಬಣ್ಣ ಮತ್ತು ಚಲನೆಯನ್ನುಗುರುತಿಸುವ ರೂಢಿ ಮಾಡಿಕೊಳ್ಳಲು ಐಸಿಸಿಯು ದುಬೈನಲ್ಲಿ ಅಂಪೈರ್‌ಗಳಿಗೆ ಕಾರ್ಯಾಗಾರ ಆಯೋಜಿಸಿತ್ತು. ಹೊನಲು ಬೆಳಕಿನ ಅಂಪೈರಿಂಗ್ ಕಾರ್ಯ ಸವಾಲಿನದ್ದು. ಸಂಜೆಯ ವೇಳೆ ಚೆಂಡು ಬಹಳಷ್ಟು ಸ್ವಿಂಗ್ ಆಗುತ್ತದೆ. ವಿಕೆಟ್‌ಗಳು ಪತನವಾಗುವುದೂ ಹೆಚ್ಚು. ಆದ್ದರಿಂದ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ’ ಎಂದು ಹೇಳಿದರು.

ಕೋಲ್ಕತ್ತದ ಟೆಸ್ಟ್‌ನಲ್ಲಿ ಮರೈಸ್ ಎರಸ್‌ಮಸ್ ಮತ್ತು ರಾಡ್ ಟಕ್ಕರ್ ಅವರು ಕಾರ್ಯನಿರ್ವಹಿಸಲಿದ್ದಾರೆ.

‘ಅವರಿಬ್ಬರಿಗೂ ಹೊನಲು ಬೆಳಕಿನ ಟೆಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಇದೆ. ಸೂರ್ಯಾಸ್ತದ ನಂತರ ಅವರು ತಮ್ಮ ಕನ್ನಡಕವನ್ನು ಬದಲಾಯಿಸಕೊಳ್ಳುತ್ತಾರೆ. ಆದಕ್ಕಿಂತ ಮೊದಲು ಉಳಿದೆಲ್ಲವೂ ಸಾಮಾನ್ಯವಾಗಿರುತ್ತದೆ’ ಎಂದು ರವಿ ಹೇಳಿದರು.

‘ಬಿಸಿಸಿಐ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಹೇಗೆ ನಡೆಯುತ್ತದೆ ಎಂಬ ಕುತೂಹಲ ನನ್ನಲಿದೆ. ಹೆಚ್ಚು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುತ್ತಾರೆಂಬ ನಿರೀಕ್ಷೆ ಇದೆ ’ ಎಂದರು.

ಪಿಚ್ ಸಿದ್ಧತೆ ಪರಿಶೀಲಿಸಿದ ಗಂಗೂಲಿ

ಬಿಸಿಸಿಐ ಆಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ತವರಿನ ಅಂಗಳವಾದ ಈಡನ್ ಗಾರ್ಡನ್‌ ನಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಾಗುವ ಪಿಚ್‌ ನ ಸಿದ್ಧತೆಯನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT