ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಫರಾಜ್ ಖಾನ್ ಯಶಸ್ಸಿನ ಕಥೆ: ಸ್ಪಿನ್ ಎದುರಿಸುವ ತಾಲೀಮು, ವ್ಯವಸ್ಥಿತ ತರಬೇತಿ..

Published 19 ಫೆಬ್ರುವರಿ 2024, 21:07 IST
Last Updated 19 ಫೆಬ್ರುವರಿ 2024, 21:07 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್‌ ಸ್ಪಿನ್ನರ್‌ಗಳ ಎದುರು ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಆಕಸ್ಮಿಕವೇನಲ್ಲ. ಇದು ಸುಮಾರು 15 ವರ್ಷಗಳ ಪರಿಶ್ರಮದ ಫಲ.

ತಂದೆ ನೌಶಾದ್ ಖಾನ್ ಅವರ ಹದ್ದುಗಣ್ಣಿನಡಿ ಅವರು ದಿನನಿತ್ಯ 500 ಎಸೆತಗಳನ್ನು ಎದುರಿಸುತ್ತಿದ್ದರು. ರಾಜಕೋಟ್‌ನಲ್ಲಿ ತಮ್ಮ ಮೊದಲ ಟೆಸ್ಟ್‌ನಲ್ಲೇ ಆತ್ಮವಿಶ್ವಾಸದಿಂದ ಆಡಿ ಎರಡು ಅರ್ಧ ಶತಕಗಳನ್ನು ಹೊಡೆದಿರುವ ಅವರು ತಂಡದಲ್ಲಿ ತಾವು ಬೇರೂರಲು ಸಮರ್ಥ ಎಂಬ ಸಂಕೇತ ರವಾನಿಸಿದ್ದಾರೆ. ಹಲವು ವರ್ಷ ಬೆವರು ಹರಿಸಿ ದೇಶೀಯ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡ 26 ವರ್ಷದ ಈ ಆಟಗಾರ, ತಮ್ಮ ತಂದೆಯ ‘ಮ್ಯಾಚೊ ಕ್ರಿಕೆಟ್‌ ಕ್ಲಬ್‌’ನಲ್ಲಿ ಪಳಗಿದವರು.

ಕೆಲವು ವರ್ಷಗಳಿಂದ, ಅದರಲ್ಲೂ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಪಟ್ಟ ಪರಿಶ್ರಮ ಹಾಗೂ ವ್ಯವಸ್ಥಿತ ಯೋಜನೆಗಳ ಪರಿಣಾಮ ಈಗ ಹಾರ್ಟ್ಲಿ, ಜೋ ರೂಟ್‌, ರೆಹಾನ್ ಅಹ್ಮದ್ ಅಂಥ ಬೌಲರ್‌ಗಳನ್ನು ಎದುರಿಸುವಾಗ ಫಲ ನೀಡಿದ್ದು ರಾಜಕೋಟ್‌ನಲ್ಲಿ ಜಾಹೀರಾಗಿದೆ.

‌‘ಮುಂಬೈನ ಓವಲ್, ಕ್ರಾಸ್‌ ಮೈದಾನ ಮತ್ತು ಆಜಾದ್‌ ಮೈದಾನಗಳಲ್ಲಿ ಅವರು ನಿತ್ಯ ಆಫ್‌, ಲೆಗ್‌ ಮತ್ತು ಎಡಗೈ ಸ್ಪಿನ್ನರ್‌ಗಳಿಂದ 500 ಎಸೆತಗಳನ್ನು ಎದುರಿಸುತ್ತಿದ್ದರು’ ಎಂದು ಮುಂಬೈನ ಈ ಆಟಗಾರನನ್ನು ಸಮೀಪದಿಂದ ಬಲ್ಲ ಕೋಚ್‌ ಒಬ್ಬರು ಹೇಳುತ್ತಾರೆ.

‘ಲಾಕ್‌ಡೌನ್ ಸಮಯದಲ್ಲಿ ಅವರು ಕಾರಿನಲ್ಲಿ 1600 ಕಿ.ಮೀ. ಪ್ರಯಾಣಿಸಿದ್ದರು. ಮುಂಬೈನಿಂದ ಉತ್ತರ ಪ್ರದೇಶದ ಅಮ್ರೋಹ, ಮೊರದಾಬಾದ್, ಮೀರಠ್, ಕಾನ್ಪುರ, ಮಥುರಾ ಮತ್ತು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಆಡುತ್ತಿದ್ದರು. ಚೆಂಡಿಗೆ ತುಂಬಾ ತಿರುವು ನೀಡುತ್ತಿದ್ದ ಸ್ಪಿನ್‌ ಸ್ನೇಹಿ ಪಿಚ್‌ಗಳಲ್ಲಿ ಪುಟಿದೇಳುವ, ಕೆಳಮಟ್ಟದಲ್ಲಿ ಬರುವ ಚೆಂಡುಗಳನ್ನು ಎದುರಿಸುವುದನ್ನು ಅಭ್ಯಾಸ ಮಾಡಿದ್ದರು’ ಎಂದು ಈ ಕೋಚ್‌ ವಿವರಿಸುತ್ತಾರೆ. ತಂದೆ ನೌಶಾದ್ ಅವರ ಜೊತೆಗೆ ಇತರ ಕೆಲವು ಕೋಚ್‌ಗಳಿಗೂ ಅವರ ಯಶಸ್ಸಿನ ಹಿಂದೆ ಇದ್ದಾರೆ. ಭುವನೇಶ್ವರ ಕುಮಾರ್ ಅವರ ಕೋಚ್‌ ಸಂಜಯ್ ರಾಸ್ತೋಗಿ, ಮೊಹಮ್ಮದ್ ಶಮಿ ಅವರ ಕೋಚ್‌ ಬದ್ರುದ್ದೀನ್ ಶೇಖ್‌, ಕುಲದೀಪ್ ಯಾದವ್ ಕೋಚ್‌ ಕಪಿಲ್ ದೇವ್ ಪಾಂಡೆ ಮತ್ತು ಭಾರತ ‘ಎ’ ತಂಡದ ನಾಯಕ ಅಭಿಮನ್ಯು ಈಶ್ವರನ್ ತಂದೆ ಆರ್‌.‍ಪಿ.ಈಶ್ವರನ್‌ ಅವರ ಶ್ರಮವನ್ನು ಮರೆಯುವಂತಿಲ್ಲ.

ವಿಶೇಷವಾಗಿ ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ, ಈ ತರಬೇತುದಾರರು ಸರ್ಫರಾಜ್‌ ಅವರಿಗೆ ನೆಟ್‌ ಪ್ರಾಕ್ಟೀಸ್‌ಗೆ ವ್ಯವಸ್ಥೆ ಮಾಡಿದ್ದರು.

‘ನೌಶಾದ್ ಮತ್ತು ನಾನು ಅಜಂಗಢದವರು. ಮುಂಬೈನಲ್ಲಿ ಜೊತೆಗೆ ಕ್ಲಬ್ ಕ್ರಿಕೆಟ್ ಆಡಿದವರು. ಅವರು ತಮ್ಮ ಮಗನಿಗೆ ಅಭ್ಯಾಸಕ್ಕೆ ನೆರವಾಗುವಂತೆ ಕೇಳಿದಾಗ, ಅದನ್ನು ನನ್ನ ಕರ್ತವ್ಯವೆಂದು ಭಾವಿಸಿದೆ’ ಎನ್ನುತ್ತಾರೆ ಕಪಿಲ್ ಪಾಂಡೆ. ಲಾಕ್‌ಡೌನ್ ಸಮಯದಲ್ಲೇ ಸರ್ಫರಾಜ್ ಅವರು ಕುಲದೀಪ್‌ ಯಾದವ್ ಅವರ ಬೌಲಿಂಗ್‌ನಲ್ಲಿ ಸ್ಪಿನ್ ಆಡುವುದನ್ನು ಅಭ್ಯಾಸ ಮಾಡಿದ್ದರು.

‘ಸರ್ಫರಾಜ್‌ಗೆ ಮೊರಾದಾಬಾದಿನಲ್ಲಿ ನೆಟ್ಸ್‌ನಲ್ಲಿ ತರಬೇತಿಗೆ ಏರ್ಪಾಡು ಮಾಡಿದ್ದೆ. ತಂದೆ ಮತ್ತು ಮಗ ಇಬ್ಬರೂ ಪರಿಶ್ರಮ ಹಾಕಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರಿಗೆ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದೆ. ಅಭ್ಯಾಸ ಪಂದ್ಯಗಳಲ್ಲಿ ಆಡಿಸಿದ್ದೆ’ ಎಂದು ಶಮಿ ಅವರ ಕೋಚ್ ಬದ್ರುದ್ದೀನ್ ಹೇಳುತ್ತಾರೆ. ಆಗಿನ ಪರಿಶ್ರಮದ ಫಲವನ್ನು ಈಗ ಸರ್ಫರಾಜ್ ಉಣ್ಣುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT