ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಸ್ತು, ಪರಿಶ್ರಮದಿಂದ ಕ್ರಿಕೆಟ್‌ನಲ್ಲಿ ಯಶಸ್ಸು: ಬಿನ್ನಿ

ಟೈಗರ್ ಕಪ್ ಪ್ರದಾನ, ಅರಣ್ಯ ಸಂರಕ್ಷಕರಿಗೆ ಸೇವಾ ಪುರಸ್ಕಾರ
Published 6 ಜನವರಿ 2024, 16:31 IST
Last Updated 6 ಜನವರಿ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸ್ತುತ ಡಿಜಿಟಲ್ ತಂತ್ರಜ್ಞಾನ ಬೆಳೆದಿದೆ. ಅತ್ಯಾಧುನಿಕ ಉಪಕರಣಗಳು ಬಂದಿವೆ. ಆದರೂ ದೊಡ್ಡ ಕ್ರಿಕೆಟಿಗನಾಗಿ ಬೆಳೆಯುವ ಆಕಾಂಕ್ಷೆ ಇದ್ದರೆ ಪ್ರತಿದಿನ ನಡೆಸುವ ಅಭ್ಯಾಸ ಮತ್ತು ಚಟುವಟಿಕೆಗಳನ್ನು ಒಂದು ಡೈರಿಯಲ್ಲಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ  ರೋಜರ್ ಬಿನ್ನಿ ಅವರು ಉದಯೋನ್ಮುಖ ಕ್ರಿಕೆಟಿಗರಿಗೆ ಸಲಹೆ ನೀಡಿದರು.

ಶನಿವಾರ ಕೆಎಸ್‌ಸಿಎ ಸಭಾಭವನದಲ್ಲಿ (ಚಿನ್ನಸ್ವಾಮಿ ಕ್ರೀಡಾಂಗಣ) ನಡೆದ ಕಾರ್ಯಕ್ರಮದಲ್ಲಿ ಟೈಗರ್ ಕಪ್ ಕ್ರಿಕೆಟ್ ಟೂರ್ನಿಯ ವಿಜೇತರಿಗೆ ಟ್ರೋಫಿ ವಿತರಿಸಿದ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಗಾರ್ಡ್‌ಗಳಾದ ಡಿ. ಸಿದ್ಧೇಶ್ (ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ರೇಂಜ್‌ ) ಮತ್ತು ತಿರುಪತಿ ಪೂಜಾರ (ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ರೇಂಜ್) ಅವರಿಗೆ ಅರಣ್ಯ ಸೇವಾ ಪುರಸ್ಕಾರ ನೀಡಿ ಗೌರವಿಸಿದರು. ವನ್ಯಜೀವಿ ಸಂರಕ್ಷಣೆಯಲ್ಲಿ ಎನ್‌ಜಿಒಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಮೀರಾ ಚಂದ್ರನ್ ಮತ್ತು ರಾಜಕುಮಾರ್ ಡಿ ಅರಸ್ ಅವರನ್ನೂ ಸನ್ಮಾನಿಸಲಾಯಿತು. 

‘ನಿಮ್ಮ ಸಂಪರ್ಕಕ್ಕೆ ಬರುವ ಹಿರಿಯ ಮತ್ತು ಅನುಭವಿ ಕ್ರಿಕೆಟಿಗರ ಸಲಹೆಗಳನ್ನು ಪಡೆಯಿರಿ. ಆ ಸಲಹೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ನಿಮ್ಮ ಜೀವನದ ಒಂದಿಲ್ಲೊಂದು ಹಂತದಲ್ಲಿ ಅವುಗಳು ಉಪಯುಕ್ತವಾಗುತ್ತವೆ. ಕ್ರಿಕೆಟ್ ಜೊತೆಗೆ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ. ಪರಿಸರ ಕಾಳಜಿ ಮತ್ತು ಸಂರಕ್ಷಣೆಗೂ ಕೈಜೋಡಿಸಿ’ ಎಂದು 1983ರ ವಿಶ್ವಕಪ್ ವಿಜೇತ ತಂಡದ ಆಟಗಾರ ಬಿನ್ನಿ ಹೇಳಿದರು.

ಈ ಸಂದರ್ಭದಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಪ್ಲೇ ಸ್ಮಾರ್ಟ್ (ವಿಜೇತ), ಕೆಸಿಸಿ ಗುರುಕುಲ್ (ರನ್ನರ್ಸ್ ಅಪ್), 14 ವರ್ಷದೊಳಗಿನ ವಿಭಾಗದಲ್ಲಿ  ಡಿಪಿಎಸ್ ಈಸ್ಟ್ (ವಿಜೇತ),  ಸಿಕ್ಸ್‌ ಕ್ರಿಕೆಟ್ ಅಕಾಡೆಮಿ (ರನ್ನರ್ಸ್ ಅಪ್), 16 ವರ್ಷದೊಳಗಿಗವರ ವಿಭಾಗದಲ್ಲಿ ಸಿಲಿಕಾನ್ ಕ್ರಿಕೆಟ್ ಅಕಾಡೆಮಿ (ವಿಜೇತರು) ಹಾಗೂ ಮ್ಯಾಕ್ಸ್‌ ಮುಲ್ಲರ್ (ರನ್ನರ್ಸ್ ಅಪ್) ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ  ಸೈಕಲ್ ಬ್ರ್ಯಾಂಡ್ ಅಗರಬತ್ತಿ ಸಂಸ್ಥೆಯ ಕಿರಣ ರಂಗಾ, ನಿಪ್ಪೊ ಪೇಂಟ್ಸ್‌ನ ಆರ್. ಜಯಸಿಂಹ, ಸಿಡ್ವಿನ್ ಸಂಸ್ಥೆಯ ಆಶಾ, ಡೆಕ್ಕನ್ ಹೆರಾಲ್ಡ್‌ ಕ್ರೀಡಾ ಸಂಪಾದಕ ಮಧುಕೇಶ್ವರ ಜವಳಿ, ಮಾಜಿ ಕ್ರಿಕೆಟಿಗ ಶಿವಪ್ರಸಾದ್ ಹಾಜರಿದ್ದರು. ‌

ಟೈಗರ್‌ ಕಪ್ ಕ್ರಿಕೆಟ್ ಟೂರ್ನಿ ಮತ್ತು ಹುಲಿ ಸಂರಕ್ಷಣಾ ಸೇವಾ ಪ್ರಶಸ್ತಿಗೆ ‘ಪ್ರಜಾವಾಣಿ‘ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಗಳು ಮಾಧ್ಯಮ ಸಹಭಾಗಿತ್ವ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT