ಜೈಪುರ: ಪತನದತ್ತ ಸಾಗಿದ್ದ ವೆಲೋಸಿಟಿ ತಂಡಕ್ಕೆ ಆರನೇ ಕ್ರಮಾಂಕದ ಸುಷ್ಮಾ ವರ್ಮಾ ಮತ್ತು ಏಳನೇ ಕ್ರಮಾಂಕದ ಅಮೆಲಿ ಕೇರ್ ಆಸರೆಯಾದರು. ಶನಿವಾರ ಇಲ್ಲಿ ನಡೆದ ಮಹಿಳೆಯರ ಚಾಲೆಂಜ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇವರಿಬ್ಬರ ಸಮಯೋಚಿತ ಆಟದ ನೆರವಿನಿಂದ ತಂಡ ಸೂಪರ್‌ನೋವಾ ವಿರುದ್ಧ ಗೌರವಾರ್ಹ ಮೊತ್ತ ಪೇರಿಸಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ತಂಡಕ್ಕೆ ಎದುರಾಳಿ ತಂಡದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ತಂಡ ಖಾತೆ ತೆರೆಯುವ ಮೊದಲೇ ಹೇಲಿ ಮ್ಯಾಥ್ಯೂಸ್ ಅವರನ್ನು ಲೀ ತಹುಹು ವಾಪಸ್ ಕಳುಹಿಸಿದರು.
ತಂಡ ಒಂದು ರನ್ ಗಳಿಸಿದಾಗ ಎರಡನೇ ವಿಕೆಟ್ ಪತನಗೊಂಡಿತು. ಸ್ಫೋಟಕ ಬ್ಯಾಟ್ಸ್‌ವುಮನ್ ಡ್ಯಾನಿಯೆಲಿ ವ್ಯಾಟ್ ಅವರನ್ನು ಅನುಜಾ ಪಾಟೀಲ್ ಔಟ್ ಮಾಡಿದರು. ಶಫಾಲಿ ವರ್ಮಾ ಅವರ ಜೊತೆಗೂಡಿದ ಮಿಥಾಲಿ ರಾಜ್ ಭರವಸೆ ಮೂಡಿಸಿದರು. ಆದರೆ ಶಫಾಲಿಗೆ ತಹುಹು ಅವರು ಡಗ್ ಔಟ್ ಹಾದಿ ತೋರಿಸಿದರು. ವೇದಾ ಕೃಷ್ಣಮೂರ್ತಿ ಬೆನ್ನಲ್ಲೇ ಮಿಥಾಲಿ ಕೂಡ ಔಟಾದರು.
71 ರನ್‌ಗಳ ಜೊತೆಯಾಟ:37 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ಸುಷ್ಮಾ ವರ್ಮಾ (ಅಜೇಯ 40; 32 ಎಸೆತ, 1 ಸಿಕ್ಸರ್, 3 ಬೌಂಡರಿ) ಮತ್ತು ಅಮೆಲಿ ಕೇರ್ (36; 38 ಎ, 4 ಬೌಂ) ಅಮೋಘ ಆಟವಾಡಿದರು. 65 ಎಸೆತಗಳಲ್ಲಿ ಇವರಿಬ್ಬರು 71 ರನ್ ಗಳಿಸಿದರು. ಹೀಗಾಗಿ ತಂಡ ಮೂರಂಕಿ ಮೊತ್ತ ದಾಟಿತು.
19ನೇ ಓವರ್‌ನಲ್ಲಿ ಅಮೆಲಿ ಔಟಾದರು. ಆದರೆ ಸುಷ್ಮಾ ವರ್ಮಾ ಛಲದಿಂದ ಆಡಿ ಎದುರಾಳಿ ಬೌಲರ್‌ಗಳನ್ನು ಕಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.