ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ಅಮೆರಿಕದ ವಿರುದ್ಧ ಆಘಾತಕಾರಿ ಸೋಲು: ಪಾಕ್‌ ಮಾಜಿ ಕ್ರಿಕೆಟಿಗರ ಆಕ್ರೋಶ

Published 7 ಜೂನ್ 2024, 23:31 IST
Last Updated 7 ಜೂನ್ 2024, 23:31 IST
ಅಕ್ಷರ ಗಾತ್ರ

ಕರಾಚಿ: ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಅಮೆರಿಕ ತಂಡದ ವಿರುದ್ಧ ಪಾಕಿಸ್ತಾನ ತಂಡ ಗುರುವಾರ ನಡೆದ ಪಂದ್ಯದಲ್ಲಿ  ಆಘಾತಕಾರಿ ಸೋಲು ಅನುಭವಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕ್ರಿಕೆಟ್ ಸಮುದಾಯ ಇದು ‘ಕರಾಳ ದಿನ’ ಎಂದು ಕರೆದಿದೆ. ತಂಡದ ಕಳಪೆ ನಿರ್ವಹಣೆಗೆ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕ ಸೂಪರ್‌ ಓವರ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಎರಡನೇ ಗೆಲುವು ದಾಖಲಿಸಿತ್ತು.

‘ಪಾಕಿಸ್ತಾನ ತಂಡವು ನಿರ್ಣಾಯಕ ಘಟ್ಟದಲ್ಲಿ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮಾದಗಳನ್ನು ಎಸಗಿದೆ. ಸೂಪರ್ ಓವರ್‌ನಲ್ಲಿ ಎಡಗೈ ವೇಗಿ ಸೌರಭ್ ಅವರ ಮೊದಲ ಎಸೆತವನ್ನು ಫಖರ್ ಜಮಾನ್ ಎದುರಿಸಬೇಕಿತ್ತು. ಬಾಬರ್ ಆಜಂ ಮತ್ತು ಇತರ ಆಟಗಾರರು ಈಗ ಪ್ರತಿ ಪಂದ್ಯವನ್ನು ಮಾಡು ಇಲ್ಲವೇ ಮಡಿ ಆಟವೆಂದು ಪರಿಗಣಿಸುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಮಾಜಿ ನಾಯಕ ಯೂನಿಸ್ ಖಾನ್ ಹೇಳಿದ್ದಾರೆ.

ಇನ್ನೊಬ್ಬ ಮಾಜಿ ಆಟಗಾರ ಮೊಹ್ಸಿನ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘ಇದು ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ. ಆಟಗಾರರ ಹೋರಾಟದ ಮನೋಭಾವ ಎಲ್ಲಿಗೆ ಹೋಯಿತು’ ಎಂದು ಕ್ರಿಕೆಟ್ ವಿಶ್ಲೇಷಕ ಒಮೈರ್ ಅಲ್ವಿ   ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಕೋಚ್‌ ಮೊಹಮ್ಮದ್ ಹಫೀಝ್ ಕೂಡ ತಂಡದ ಕಳಪೆ ಪ್ರದರ್ಶನವನ್ನು ಟೀಕಿಸಿದ್ದಾರೆ. ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಆರಂಭ ಆಟಗಾರರಾಗಿ ಮುಂದುವರಿಸುವುದು ಒಂದು ಹೆಜ್ಜೆ ಹಿಂದೆಯಿಟ್ಟಂತೆ ಎಂದಿದ್ದಾರೆ.

ಅಕ್ರಂ ಆಕ್ರೋಶ:ಪಾಕಿಸ್ತಾನ ತಂಡದ ಶೋಚನೀಯ ಪ್ರದರ್ಶನ ಟೀಕಿಸಿರುವ ಮಾಜಿ ವೇಗಿ ವಾಸಿಂ ಅಕ್ರಮ್ ಅವರು ಬಾಬರ್‌ ಅಜಂ ಬಳಗಕ್ಕೆ ನಾಕೌಟ್‌ ಹಾದಿ ಕಠಿಣವಾಗಲಿದೆ ಎಂದೂ ಹೇಳಿದ್ದಾರೆ.

‘ಪಾಕಿಸ್ತಾನದ್ದು ನಿರಾಶಾದಾಯಕ ಪ್ರದರ್ಶನ. ಸೋಲು– ಗೆಲುವು ಆಟದ ಭಾಗ. ಆದರೆ ಕೊನೆಯ ಎಸೆತದವರೆಗೆ ಹೋರಾಟ ನೀಡಬೇಕಿತ್ತು. ಪಾಕಿಸ್ತಾನ ಕ್ರಿಕೆಟ್‌ಗೆ ಇದು ಕೆಟ್ಟ ದಿನ’ ಎಂದು ಡಲ್ಲಾಸ್‌ನಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಪಾಕ್ ತಂಡದ ಹಾದಿ ಇನ್ನು ಮುಂದೆ ಕಠಿಣವಾಗಲಿದೆ. ಆ ತಂಡವು ಭಾರತ ವಿರುದ್ಧ (ಜೂ. 9) ಆಡಬೇಕಾಗಿದೆ. ನಂತರ ಇನ್ನೆರಡು ಉತ್ತಮ ತಂಡಗಳ (ಐರ್ಲೆಂಡ್‌, ಕೆನಡಾ) ಜೊತೆಯೂ ಸೆಣಸಬೇಕಿದೆ ಎಂದರು.

‘ಅಮೆರಿಕವು, ಪಾಕಿಸ್ತಾನದ ವಿಕೆಟ್‌ಗಳನ್ನು ಆರಂಭದಲ್ಲೇ ಗಳಿಸಿದ್ದು ಪಂದ್ಯಕ್ಕೆ ತಿರುವು ನೀಡಿತು. ಬಾಬರ್‌ ಮತ್ತು ಶದಾಬ್ ನಡುವೆ ಜೊತೆಯಾಟ ಬಂದರೂ, ಆಮೇಲೆ ಯಾರೂ ಸರಿಯಾಗಿ ಆಡಲಿಲ್ಲ. ಫೀಲ್ಡಿಂಗ್‌ ಕಳಪೆಯಾಗಿತ್ತು. ಒಟ್ಟಾರೆ ಆಡಿದ ರೀತಿಯೇ ನಿರಾಶಾದಾಯಕವಾಗಿತ್ತು’ ಎಂದು ಹೇಳಿದರು.‌ ಅಮೆರಿಕದ ಪ್ರದರ್ಶನವನ್ನು ಅವರು ಶ್ಲಾಘಿಸಿದರು.

ರವೂಫ್ ವಿರುದ್ಧ ಚೆಂಡು ತಿದ್ದಿದ ಆರೋಪ
ಡಲ್ಲಾಸ್‌: ಪಾಕಿಸ್ತಾನ ವೇಗಿ ಹ್ಯಾರಿಸ್‌ ರವೂಫ್ ಅವರು ತಮ್ಮ ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಿದ್ದರು ಎಂದು ಅಮೆರಿಕದ ಬೌಲರ್ ರಸ್ಟಿ ತೆರಾನ್ ಆರೋಪಿಸಿದ್ದಾರೆ. ಎರಡು ಓವರ್‌ಗಳಷ್ಟೇ ಆದ ಚೆಂಡಿನ ಮೇಲೆ ಹೆಬ್ಬೆರಳಿನ ಉಗುರಿನಿಂದ ಗೀರುತ್ತಿದ್ದರು. ಹಾಗಾಗಿ ಅದು ರಿವರ್ಸ್‌ಸ್ವಿಂಗ್ ಆಗುತಿತ್ತು ಎಂದಿದ್ದಾರೆ. 38 ವರ್ಷದ ತೆರಾನ್ ನಿನ್ನೆಯ ಪಂದ್ಯದಲ್ಲಿ ಅಮೆರಿಕ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಹಿಂದೆ ಅವರು ದಕ್ಷಿಣ ಆಫ್ರಿಕಕ್ಕೆ ಆಡುತ್ತಿದ್ದರು. ‘ಎರಡು ಓವರ್‌ಗಳಷ್ಟೇ ಆದ ಪಂದ್ಯದಲ್ಲಿ ಚೆಂಡನ್ನು ಹಾಗೆ ಸ್ವಿಂಗ್ ಮಾಡಲು ಹೇಗೆ ಸಾಧ್ಯ. ಬೌಲಿಂಗ್‌ ಮಾರ್ಕ್‌ಗೆ ತೆರಳುವಾಗ ಅವರು ಹೊಸ ಚೆಂಡನ್ನು ಉಗುರಿನಿಂದ ಕೆರೆದಿದ್ದನ್ನು ಕಾಣಬಹುದಿತ್ತು’ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ರವೂಫ್ ದುಬಾರಿ ಎನಿಸಿ 4 ಓವರುಗಳಲ್ಲಿ 37 ರನ್ ತೆತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT