ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್ | ಜೋಶ್ ಶತಕ; ಭಾರತಕ್ಕೆ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ

Published 23 ನವೆಂಬರ್ 2023, 15:25 IST
Last Updated 23 ನವೆಂಬರ್ 2023, 15:25 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಮಿಂಚಿನ ಶತಕ ಗಳಿಸಿದ ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಮುಂದೆ ಭಾರತದ ಯುವಬೌಲರ್‌ಗಳು ಬಸವಳಿದರು.

ಗುರುವಾರ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 50 ಎಸೆತಗಳಲ್ಲಿ 110 ರನ್ ಗಳಿಸಿದ ಜೋಶ್ ಆಟದ ಬಲದಿಂದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 208 ರನ್ ಗಳಿಸಿತು.  ಚುಟುಕು ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ಎದುರು ದಾಖಲಿಸಿದ ಗರಿಷ್ಠ ಮೊತ್ತ ಇದು. ಜೋಶ್ ಅವರಿಗೂ ಇದು ಚೊಚ್ಚಲ ಶತಕ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ  ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಲೆಕ್ಕಾಚಾರಕ್ಕೆ ತಕ್ಕಂತೆ ಬೌಲರ್‌ಗಳು ಆಡಲಿಲ್ಲ.

ಇನಿಂಗ್ಸ್ ಆರಂಭಿಸಿದ ಸ್ಟೀವನ್ ಸ್ಮಿತ್ (52; 41ಎ) ಮತ್ತು ಮ್ಯಾಥ್ಯೂ ಶಾರ್ಟ್ (13 ರನ್) ಉತ್ತಮ ಅಡಿಪಾಯ ಹಾಕುವ ಪ್ರಯತ್ನ ಮಾಡಿದರು.  ಐದನೇ ಓವರ್‌ನಲ್ಲಿ ಸ್ಪಿನ್ನರ್ ರವಿ ಬಿಷ್ಣೋಯಿ ಎಸೆತದಲ್ಲಿ ಶಾರ್ಟ್ ಕ್ಲೀನ್ ಬೌಲ್ಡ್ ಆದರು.  ಅದೇ ಓವರ್‌ನಲ್ಲಿ ಸ್ಮಿತ್ ನೇರಕ್ಕೆ ಹೊಡೆದಿದ್ದ ಚೆಂಡನ್ನು ಕ್ಯಾಚ್ ಮಾಡುವ ರವಿ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಕ್ರೀಸ್‌ಗೆ ಬಂದ 28 ವರ್ಷದ ಬಲಗೈ ಬ್ಯಾಟರ್ ಜೋಶ್ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರದ 18 ಎಸೆತಗಳಲ್ಲಿ ಶತಕದ ಗಡಿಯನ್ನೂ ದಾಟಿದರು.

ಅವರು ಸ್ಮಿತ್ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 66 ಎಸೆತಗಳಲ್ಲಿ 130 ರನ್‌ ಸೇರಿಸಿದರು. ಅದರಲ್ಲಿ ಸ್ಮಿತ್ ಪಾಲು 36 ರನ್‌ಗಳು ಮಾತ್ರ. ಉಳಿದದ್ದು ಜೋಶ್ ಅವರ ಕಾಣಿಕೆ.

ಈಚೆಗೆ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸ್ಮಿತ್ ಇಲ್ಲಿ ಲಯ ಕಂಡುಕೊಂಡರು. 16ನೇ ಓವರ್‌ವರೆಗೂ ಅವರು ಕ್ರೀಸ್‌ನಲ್ಲಿದ್ದರು. ಆದರೆ ಅವರ ಆಟದಲ್ಲಿ ಒಂದೂ ಸಿಕ್ಸರ್ ಇರಲಿಲ್ಲ.

ಪ್ರಸಿದ್ಧಕೃಷ್ಣ ಮತ್ತು ಮುಕೇಶ್ ಕುಮಾರ್ ಚುರುಕಾದ ಫೀಲ್ಡಿಂಗ್‌ನಿಂದ ಸ್ಮಿತ್ ರನ್‌ಔಟ್ ಆದರು.

18ನೇ ಓವರ್‌ನಲ್ಲಿ ಪ್ರಸಿದ್ಧಕೃಷ್ಣ ಹಾಕಿದ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಜೋಶ್ ಕ್ಯಾಚ್‌ ಅನ್ನು ಪಡೆದ ಜೈಸ್ವಾಲ್ ಸಂಭ್ರಮಿಸಿದರು.

ಕ್ರೀಸ್‌ಗೆ ಬಂದ ಟಿಮ್ ಡೇವಿಡ್  13 ಎಸೆತಗಳಲ್ಲಿ 19 ರನ್‌ ಗಳಿಸಿ ತಂಡದ ಮೊತ್ತವು ಹೆಚ್ಚುವಂತೆ ನೋಡಿಕೊಂಡರು.

ಭಾರತದ ಬೌಲರ್‌ಗಳು ದುಬಾರಿಯಾದರು. ಮುಕೇಶ್ ಕುಮಾರ್ ಒಬ್ಬರು ಮಾತ್ರ ನಾಲ್ಕು ಓವರ್‌ಗಳಲ್ಲಿ 29 ರನ್‌ ಕೊಟ್ಟರು. ರವಿ ಬಿಷ್ಣೋಯಿ ಹಾಗೂ ಪ್ರಸಿದ್ಧ ಅವರು 50ಕ್ಕಿಂತ ಹೆಚ್ಚು ರನ್‌ ಕೊಟ್ಟರು. ರವಿಯ ಒಂದು ಓವರ್‌ನಲ್ಲಿ 21 ರನ್‌ಗಳೂ ಹರಿದುಬಂದವು. ಅದರಲ್ಲಿ ಇಂಗ್ಲಿಸ್ ಹೊಡೆದ ಮೂರು ಸಿಕ್ಸರ್‌ಗಳಿದ್ದವು.  ಆರ್ಷದೀಪ್ ಸಿಂಗ್ 10.25ರ ಸರಾಸರಿಯಲ್ಲಿ ರನ್‌ ಕೊಟ್ಟರು. ಅವರಿಗೆ  ಒಂದೂ ವಿಕೆಟ್ ಲಭಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT