ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ವಿದ್ವತ್, ವೆಂಕಟೇಶ್ ಮಿಂಚು

ಎಂಟರ ಘಟ್ಟದಲ್ಲಿ ಕರ್ನಾಟಕಕ್ಕೆ ಪಂಜಾಬ್ ಸವಾಲು
Last Updated 26 ನವೆಂಬರ್ 2022, 18:47 IST
ಅಕ್ಷರ ಗಾತ್ರ

ಅಹಮದಾಬಾದ್‌:ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ಜಾರ್ಖಂಡ್ ಎದುರು 5 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಮಯಂಕ್‌ ಭರವಸೆಯನ್ನು ಉಳಿಸಿಕೊಂಡ ಬೌಲರ್‌ಗಳು ಜಾರ್ಖಂಡ್ ತಂಡವನ್ನು47.1 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಮಾಡಿದರು.

ಮಧ್ಯಮವೇಗಿಗಳಾದ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಹಾಗೂ ಎಂ. ವೆಂಕಟೇಶ್ ತಲಾ ಮೂರು ವಿಕೆಟ್ ಗಳಿಸಿದರು. ಇದರಿಂದಾಗಿ ಜಾರ್ಖಂಡ್ ತಂಡದ ಮೇಲಿನ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು. ಕೇವಲ 40 ರನ್‌ಗಳಿಗೆ ಐದು ವಿಕೆಟ್‌ಗಳು ಪತನವಾದವು.ಈ ಹಂತದಲ್ಲಿ ಜೊತೆಗೂಡಿದ ಕುಶಾಗ್ರ (74; 80ಎ, 4X8, 6X2) ಹಾಗೂ ಅನುಕೂಲ್ ರಾಯ್ (57; 97ಎ, 4X4) ಐದನೇ ವಿಕೆಟ್ ಜೊತೆಯಾಟದಲ್ಲಿ 115 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದು ತಪ್ಪಿತು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ನಾಯಕ ಮಯಂಕ್ ಕೇವಲ 12 ರನ್‌ ಗಳಿಸಿ ಔಟಾದರು.

ಇನ್ನೊಂದು ಬದಿಯಲ್ಲಿದ್ದ ಸಮರ್ಥ್ (53; 60ಎ, 4X7) ಅರ್ಧಶತಕ ಗಳಿಸಿದರು. ಅವರೊಂದಿಗೆ ಚೆಂದದ ಜೊತೆಯಾಟವಾಡಿದ ನಿಕಿನ್ ಜೋಸ್ (ಔಟಾಗದೆ 63; 93ಎ, 4X5) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕರ್ನಾಟಕ 40.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 188 ರನ್ ಗಳಿಸಿತು.

ಇದೇ 28ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ಪಂಜಾಬ್ ತಂಡವನ್ನು ಎದುರಿಸಲಿದೆ.

ಇನ್ನುಳಿದ ಕ್ವಾರ್ಟರ್‌ಫೈನಲ್‌ಗಳಲ್ಲಿ ಜಮ್ಮು ಕಾಶ್ಮೀರ –ಅಸ್ಸಾಂ, ತಮಿಳುನಾಡು–ಸೌರಾಷ್ಟ್ರ, ಮಹಾರಾಷ್ಟ್ರ–ಉತ್ತರಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ.

ಸಂಕ್ಷಿಪ್ತ ಸ್ಕೋರು: ಜಾರ್ಖಂಡ್: 47.1 ಓವರ್‌ಗಳಲ್ಲಿ 187 (ಶಹಬಾಜ್ ನದೀಂ 22, ಕುಮಾರ್ ಕುಶಾಗ್ರ 74, ಅನುಕೂಲ್ ರಾಯ್ 57, ವಿದ್ವತ್ ಕಾವೇರಪ್ಪ 20ಕ್ಕೆ3, ರೋನಿತ್ ಮೋರೆ 31ಕ್ಕೆ3, ಎಂ. ವೆಂಕಟೇಶ್ 51ಕ್ಕೆ3, ಮನೋಜ್ ಬಾಂಡಗೆ 26ಕ್ಕೆ1) ಕರ್ನಾಟಕ: 40.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 188 (ಆರ್. ಸಮರ್ಥ್ 53, ನಿಕಿನ್ ಜೋಸ್ 63, ಮನೀಷ್ ಪಾಂಡೆ 18, ಮನೋಜ್ ಬಾಂಡಗೆ ಔಟಾಗದೆ 18, ರಾಹುಲ್ ಶುಕ್ಲಾ 44ಕ್ಕೆ2) ಫಲಿತಾಂಶ: ಕರ್ನಾಟಕ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT