ಯಾರಿಗೆ ಸಿಗಲಿದೆ ಲಂಡನ್ ಟಿಕೆಟ್?

ಶುಕ್ರವಾರ, ಏಪ್ರಿಲ್ 19, 2019
23 °C
ಐಸಿಸಿ ಏಕದಿನ ವಿಶ್ವಕಪ್ ತಂಡದ ಆಯ್ಕೆ ಇಂದು: ದಿನೇಶ್ ಕಾರ್ತಿಕ್, ರಿಷಭ್ ಪಂತ್ ಮೇಲೆ ಎಲ್ಲರ ಗಮನ

ಯಾರಿಗೆ ಸಿಗಲಿದೆ ಲಂಡನ್ ಟಿಕೆಟ್?

Published:
Updated:

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಮಕ್‌–ಧಮಕ್‌ನಲ್ಲಿ ಮುಳುಗಿರುವ ಭಾರತದ ಕ್ರಿಕೆಟಿಗರ ಚಿತ್ತ ಈಗ ದೆಹಲಿಯತ್ತ ಹರಿದಿದೆ. ಆವರ ಕಂಗಳಲ್ಲಿ ಲಂಡನ್ ವಿಮಾನವೇರುವ ಕನಸು ಗರಿಗೆದರಿದೆ.

ಈ ಕುತೂಹಲಕ್ಕೆ ಸೋಮವಾರ ತೆರೆ ಬೀಳಲಿದೆ. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡವನ್ನು ಸೋಮವಾರ ಆಯ್ಕೆ ಮಾಡಲಾಗುತ್ತಿದೆ.

ಆಯ್ಕೆ ಸಮಿತಿಯ ಗಮನ ಸೆಳೆಯಲು ಹೋದ ಮೂರು ವರ್ಷ ಗಳಲ್ಲಿ ಹಲವಾರು ಅನುಭವಿ ಮತ್ತು ಹೊಸ ಆಟಗಾರರು ತಮ್ಮ ಸಾಮರ್ಥ್ಯ ಒರೆಗೆ ಹೆಚ್ಚಿದ್ದಾರೆ. ಅವರೆಲ್ಲರ ಶ್ರಮಕ್ಕೆ ಅದೃಷ್ಟ ಜೊತೆಗೂಡುವುದೇ ಎಂಬುದೇ ಈಗ ಕುತೂಹಲ ಕೆರಳಿಸಿದೆ.

ಐಪಿಎಲ್ ಸಾಧನೆ ಆಟಗಾರರ ಆಯ್ಕೆಗೆ ಮಾನದಂಡವಲ್ಲ ಎಂದು ಈಗಾಗಲೇ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ   ಭಾರತ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಯೇ ವಹಿಸುವುದು ಬಹುತೇಕ ಖಚಿತವಾಗಿದೆ. ಐಪಿಎಲ್‌ನಲ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಏಳು ಪಂದ್ಯಗಳ ಪೈಕಿ ಆರರಲ್ಲಿ ಸೋತಿದೆ. ಅದಕ್ಕೂ ವಿಶ್ವಕಪ್‌ಗೂ ಸಂಬಂಧವಿಲ್ಲ.

14 ಆಟಗಾರರ ತಂಡವು ಬಹುತೇಕ ಸ್ಪಷ್ಟವಾಗಿದೆ. 2011ರ ವಿಶ್ವಕಪ್ ವಿಜೇತ ಭಾರತ ತಂಡದ  ನಾಯಕತ್ವ ವಹಿಸಿದ್ದ ಮಹೇಂದ್ರಸಿಂಗ್ ಧೋನಿ ವಿಕೆಟ್‌ಕೀಪರ್‌ ಆಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇದು ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿ ಆಗಲಿದೆ. ಆದರೆ, ಎರಡನೇ ವಿಕೆಟ್‌ಕೀಪರ್ ಹಾಗೂ 15ನೇ ಆಟಗಾರನಾಗಿ ಜಾಗ ಪಡೆಯಲು ಅನುಭವಿ ದಿನೇಶ್ ಕಾರ್ತಿಕ್ ಮತ್ತು ಯುವ ಆಟಗಾರ ರಿಷಭ್ ಪಂತ್ ನಡುವೆ ಸ್ಪರ್ಧೆ  ಏರ್ಪಟ್ಟಿದೆ.

ತಮಿಳುನಾಡಿನ 33 ವರ್ಷದ ದಿನೇಶ್ 2004ರಿಂದ ಇಲ್ಲಿಯವರೆಗೂ 91 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.  ಒಂಬತ್ತು ಅರ್ಧಶತಕಗಳನ್ನು ಹೊಡೆದಿದ್ದಾರೆ. ವಿಕೆಟ್‌ಕೀಪಿಂಗ್‌ನಲ್ಲಿ  61 ಕ್ಯಾಚ್ ಮತ್ತು ಏಳು ಸ್ಟಂಪಿಂಗ್ ಕೂಡ ಮಾಡಿದ್ದಾರೆ. ಆದರೆ, 21 ವರ್ಷದ ರಿಷಭ್ ಪಂತ್ ಬಗ್ಗೆಯೇ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. ಅವರು ಕೇವಲ ಐದು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ, ಆಸ್ಟ್ರೇಲಿಯಾದ ಐತಿಹಾಸಿಕ ಟೆಸ್ಟ್‌ ಸರಣಿ ಜಯದಲ್ಲಿ ಅವರು ಮಿಂಚಿದ್ದರು. ಅದಕ್ಕೂ ಮುನ್ನ ಇಂಗ್ಲೆಂಡ್‌ನಲ್ಲಿಯೂ ಅವರು ಉತ್ತಮವಾಗಿ ಆಡಿದ್ದರು. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಬಹುದು ಎಂದು ಕೃಷ್ಣಮಾಚಾರಿ ಶ್ರೀಕಾಂತ್, ಕಪಿಲ್ ದೇವ್ ಅವರಂತಹ ದಿಗ್ಗಜರೂ ಈಚೆಗೆ ಅಭಿಪ್ರಾಯಪಟ್ಟಿದ್ದರು.

ಇಂಗ್ಲೆಂಡ್‌ ಪಿಚ್‌ಗಳು ಮಧ್ಯಮವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತವೆ. ಆದ್ದರಿಂದ ‘ಡೆತ್ ಓವರ್’ ಪರಿಣತ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು  ಸ್ವಿಂಗ್ ಪರಿಣಿತ ಭುವನೇಶ್ವರ್ ಕುಮಾರ್ ಅವರು ಸ್ಥಾನ ಪಡೆಯುವುದು ಖಚಿತ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವಿಜಯಶಂಕರ್ ಅವರು ಸ್ಥಾನ ಪಡೆದರೆ ನಾಲ್ಕನೇ ಮಧ್ಯಮವೇಗಿಯಾಗಿಯೂ ನಿರ್ವಹಿಸಬಲ್ಲರು. ಆದರೂ ನಾಲ್ಲನೇ ಪರಿಣಿತ ವೇಗದ ಬೌಲರ್‌ ಆಯ್ಕೆ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಉಮೇಶ್ ಯಾದವ್, ಇಶಾಂತ್ ಶರ್ಮಾ, ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಅವರಲ್ಲಿ ಒಬ್ಬರಿಗೆ ಅವಕಾಶ ಒಲಿಯಬಹುದು. ಒಂದೊಮ್ಮೆ ಇವರಾರನ್ನೂ ಪರಿಗಣಿಸದಿದ್ದರೆ, ನಾಲ್ಕನೇ ಕ್ರಮಾಂಕ ಬ್ಯಾಟ್ಸ್‌ಮನ್‌ಗೆ ಆದ್ಯತೆ ನೀಡಬಹುದು. ಅದಕ್ಕೆ ಅಂಬಟಿ ರಾಯುಡು ಅವರಿಗೆ ಹೆಚ್ಚು ಅವಕಾಶ ಇದೆ ಎನ್ನಲಾಗಿದೆ. ಸ್ಪಿನ್ನರ್‌ಗಳಲ್ಲಿ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. 

ಸಂಭವನೀಯ ಆಟಗಾರರು

14ರ ಬಳಗ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ,  ವಿಜಯಶಂಕರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜ

15ನೇ ಆಟಗಾರ: ದಿನೇಶ್ ಕಾರ್ತಿಕ್/ರಿಷಭ್ ಪಂತ್ (ಎರಡನೇ ವಿಕೆಟ್‌ಕೀಪರ್),  ಅಂಬಟಿ ರಾಯುಡು (ನಾಲ್ಕನೇ ಕ್ರಮಾಂಕ),  ನಾಲ್ಕನೇ ಮಧ್ಯಮವೇಗಿ: ಉಮೇಶ್ ಯಾದವ್/ಖಲೀಲ್ ಅಹಮದ್/ಇಶಾಂತ್ ಶರ್ಮಾ/ನವದೀಪ್ ಸೈನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !