ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL | ಹರ್ಲಿನ್‌ - ಡಂಕ್ಲಿ ಅಬ್ಬರ, ಗುಜರಾತ್‌ಗೆ ಜಯ: ಆರ್‌ಸಿಬಿಗೆ ಒಲಿಯದ ಗೆಲುವು

Last Updated 8 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಮುಂಬೈ: ಸೋಫಿಯಾ ಡಂಕ್ಲಿ ಮತ್ತು ಹರ್ಲಿನ್ ಡಿಯೊಲ್ ಅವರ ಅಬ್ಬರದ ಅರ್ಧಶತಕಗಳ ಬಲದಿಂದ ಗುಜರಾತ್ ಜೈಂಟ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ಸಾಧಿಸಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗುಜರಾತ್‌ 11 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೋಲುಣಿಸಿತು. ಆರ್‌ಸಿಬಿಗೆ ಇದು ಸತತ ಮೂರನೇ ಸೋಲಾಗಿದೆ.

ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 201 ರನ್ ಗಳಿಸಿತು. ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 190 ರನ್ ಗಳಿಸಿತು.

ಸವಾಲಿನ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ನಾಯಕಿ ಸ್ಮೃತಿ ಮಂದಾನ (18) ಮತ್ತು ಸೋಫಿ ಡಿವೈನ್‌ (66, 45ಎ, 4X8, 6X2) ಮೊದಲ ವಿಕೆಟ್‌ ಜೊತೆಯಾಟದಲ್ಲಿ 5.2 ಓವರ್‌ಗಳಲ್ಲಿ 54 ರನ್‌ ಕಲೆಹಾಕಿದರು. ಸ್ಮೃತಿ ಅವರು ಆ್ಯಶ್ಲೆ ಗಾರ್ಡನರ್ (31ಕ್ಕೆ 3) ಅವರಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಎಲಿಸ್ ಪೆರಿ (32) ಅವರಿಗೆ ಜೊತೆಯಾದ ಡಿವೈನ್‌ ಎರಡನೇ ವಿಕೆಟ್‌ಗೆ 41 ರನ್ ಪೇರಿಸಿದರು. ಪೆರಿ ವಿಕೆಟ್‌ ಪತನದ ಬಳಿಕ ರಿಚಾ ಘೋಷ್‌ (10) ಅವರೊಂದಿಗೆ ಬ್ಯಾಟಿಂಗ್ ಮಂದುವರಿಸಿದ ಡಿವೈನ್‌ ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರು. ಅವರು ನಾಲ್ಕನೇ ವಿಕೆಟ್‌ ರೂಪದಲ್ಲಿ ಅನ್ನಾಬೆಲ್ ಸುದರ್ಲೆಂಡ್‌ (56ಕ್ಕೆ2) ಅವರಿಗೆ ವಿಕೆಟ್‌ ಒಪ್ಪಿಸಿದಾಗ ಆರ್‌ಸಿಬಿ ಗೆಲುವಿಗೆ 61 ರನ್‌ ಬೇಕಿತ್ತು.

ಹೀದರ್‌ ನೈಟ್‌ (ಔಟಾಗದೆ 30) ಅವರ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ. ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಜಯಕ್ಕೆ 24 ರನ್ ಬೇಕಿತ್ತು. ಸುದರ್ಲೆಂಡ್‌ ಹಾಕಿದ ಓವರ್‌ನ ಮೊದಲ ಎಸೆತದಲ್ಲಿ ಪೂನಂ ಖೆಮ್ನರ್ (2) ವಿಕೆಟ್‌ ಕಳೆದುಕೊಂಡರು. ಬಳಿಕದ ಎರಡು ಎಸೆತಗಳಲ್ಲಿ ಎರಡು ರನ್‌ಗಳು ಬಂದವು. ಬಳಿಕ ಶ್ರೇಯಾಂಕಾ ಪಾಟೀಲ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಗಳಿಸಿದರೂ ತಂಡದ ಸೋಲು ತಪ್ಪಲಿಲ್ಲ.

ಡಂಕ್ಲಿ, ಹರ್ಲಿನ್ ಅಬ್ಬರ: ಗುಜರಾತ್ ತಂಡದ ಡಂಕ್ಲಿ (65; 28ಎ, 11ಎ, 4X3) ಹಾಗೂ ಹರ್ಲಿನ್ (67; 45ಎ, 4X9, 6X1) ಅವರ ರನ್‌ ಗಳಿಕೆಯು ಶರವೇಗದಲ್ಲಿತ್ತು. 232.14ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಅವರ ಆಟಕ್ಕೆ ಬೌಲರ್‌ಗಳು ಸುಸ್ತಾದರು. ಅವರು ಹೊಡೆದ ಮೂರು ಅಮೋಘ ಸಿಕ್ಸರ್‌ಗಳು ಮನಮೋಹಕವಾಗಿದ್ದವು.

ಹರ್ಲಿನ್ ಅವರು ಡಂಕ್ಲಿ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 60 ರನ್‌ ಸೇರಿಸಿದರು. ನಂತರ ಬಂದ ಬ್ಯಾಟರ್‌ಗಳೂ ರನ್‌ಗಳ ಕಾಣಿಕೆ ನೀಡಿದರು. ಇದರಿಂದಾಗಿ ತಂಡದ ಮೊತ್ತವು ದ್ವಿಶತಕದ ಗಡಿ ತಲುಪಿತು.

ಆರ್‌ಸಿಬಿಯ ಶ್ರೇಯಾಂಕಾ ಮತ್ತು ನೈಟ್ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 201 (ಸೋಫಿಯಾ ಡಂಕ್ಲಿ 65, ಹರ್ಲಿನ್‌ ಡಿಯೊಲ್ 67, ಆ್ಯಷ್ಲೆ ಗಾರ್ಡನರ್ 19; ಶ್ರೇಯಾಂಕಾ ಪಾಟೀಲ 32ಕ್ಕೆ2, ಹೀಥರ್ ನೈಟ್ 17ಕ್ಕೆ2). ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 (ಸ್ಮೃತಿ ಮಂದಾನ 18, ಸೋಫಿ ಡಿವೈನ್‌ 66, ಎಲಿಸ್ ಪೆರಿ 32, ಹೀದರ್ ನೈಟ್‌ ಔಟಾಗದೆ 30; ಆ್ಯಶ್ಲೆ ಗಾರ್ಡನರ್ 31ಕ್ಕೆ 3, ಅನಾಬೆಲ್ ಸುದರ್ಲೆಂಡ್‌ 56ಕ್ಕೆ 2, ಮಾನಸಿ ಜೋಷಿ 9ಕ್ಕೆ 1). ಫಲಿತಾಂಶ: ಗುಜರಾತ್ ಜೈಂಟ್ಸ್‌ಗೆ 11 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT