ಬೋಲ್ಟ್‌ ಫುಟ್‌ಬಾಲ್‌ ಪಂದ್ಯ ನಾಳೆ

7

ಬೋಲ್ಟ್‌ ಫುಟ್‌ಬಾಲ್‌ ಪಂದ್ಯ ನಾಳೆ

Published:
Updated:
Deccan Herald

ಸಿಡ್ನಿ: ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ಇದೇ ಶುಕ್ರವಾರ ವೃತ್ತಿಪರ ಫುಟ್‌ಬಾಲ್‌ನ ಮೊದಲ ಪಂದ್ಯ ಆಡಲಿದ್ದಾರೆ.

ಸೆಂಟ್ರಲ್ ಕೋಸ್ಟ್ ಮರೈನ್ಸ್‌ ತಂಡದ ಪರವಾಗಿ ಅವರು ಆಡಲಿದ್ದು ಮಕಾರ್ಥರ್ ಸೌತ್ ವೆಸ್ಟ್ ತಂಡದ ಎದುರಿನ ಸೌಹಾರ್ದ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಖಚಿತವಾಗಿದೆ.

‘ಫಟ್‌ಬಾಲ್‌ ಆಡಬೇಕೆಂಬುದು ನಾನು ಬಾಲ್ಯದಲ್ಲೇ ಕಂಡ ಕನಸು. ಅದು ನನಸಾಗುವ ಕಾಲ ಈಗ ಸಮೀಪಿಸಿದೆ. ಪಂದ್ಯದಲ್ಲಿ ಕಣಕ್ಕೆ ಇಳಿಸುವುದಾಗಿ ಕೋಚ್‌ ಮೈಕ್‌ ಮಲ್ವೆ ಭರವಸೆ ನೀಡಿದ್ದಾರೆ’ ಎಂದು ಬೋಲ್ಟ್ ತಿಳಿಸಿದ್ದಾರೆ.

‘ನನ್ನ ಫಿಟ್‌ನೆಸ್‌ ಬಗ್ಗೆ ಕೋಚ್‌ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಇದು ಸಂತಸದ ವಿಷಯ. ಪಂದ್ಯದಲ್ಲಿ ಭರವಸೆಯಿಂದ ಆಡಲು ಇದು ನೆರವಾಗಲಿದೆ’ ಎಂದು ಬೋಲ್ಟ್‌ ತಿಳಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಾಂಪಿಯನ್‌ ಆಗಿರುವ ಬೋಲ್ಟ್‌, ಆಗಸ್ಟ್‌ನಲ್ಲಿ ನಡೆದಿದ್ದ ಫುಟ್‌ಬಾಲ್‌ ಪಂದ್ಯವೊಂದರಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದಿದ್ದರು. ಕೇವಲ 20 ನಿಮಿಷ ಆಡಿದ್ದ ಅವರು ಗೋಲು ಗಳಿಸುವ ಸಾಧ್ತತೆ ಇತ್ತು. ಆದರೆ ಬೇಗನೇ ಬಳಲಿ ವಾಪಸಾಗಿದ್ದರು.

‘ಆ ಪಂದ್ಯದ ನಂತರ ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ನೀಡಿದ್ದೇನೆ. ಅದಕ್ಕೆ ಫಲ ಸಿಕ್ಕಿದೆ. ಈಗ ನನ್ನ ಫಿಟ್‌ನೆಸ್ ತುಂಬಾ ಹೆಚ್ಚಿದೆ. ಆದ್ದರಿಂದ ಅಂಗಣದಲ್ಲಿ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಲಿದೆ ಎಂಬ ಭರವಸೆ ಇದೆ’ ಎಂದು ಅವರು ವಿವರಿಸಿದರು.

‘ದೇಹದ ಚಲನೆಯ ಮೇಲೆ ಗಮನ ಇರಿಸುವುದು ಮತ್ತು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಈಗ ಸಾಕಷ್ಟು ತರಬೇತಿ ಪಡೆದುಕೊಂಡಿದ್ದೇನೆ. ಅದನ್ನು ಅಂಗಣದಲ್ಲಿ ತೋರಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಅವರು ನುಡಿದರು.

100 ಮೀಟರ್ಸ್ ಓಟದಲ್ಲಿ ಬೋಲ್ಟ್‌ ವಿಶ್ವ ದಾಖಲೆ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !