ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್‌ಬಾಲ್‌ನ ಶಕ್ತಿ ಕಾರ್ಲಟನ್‌ ಚಾಪ್‌ಮನ್ ಇನ್ನಿಲ್ಲ

Last Updated 12 ಅಕ್ಟೋಬರ್ 2020, 12:23 IST
ಅಕ್ಷರ ಗಾತ್ರ

ನವದೆಹಲಿ: ಭೈಚುಂಗ್ ಬುಟಿಯಾ ಮತ್ತು ಐ.ಎಂ.ವಿಜಯನ್ ಅವರೊಂದಿಗೆ ಮಿಂಚಿದ್ದ, ಭಾರತ ಫುಟ್‌ಬಾಲ್ ತಂಡವನ್ನು ಮುನ್ನಡೆಸಿದ್ದ ಕರ್ನಾಟಕದ ಕಾರ್ಲಟನ್ ಚಾಪ್‌ಮನ್ ಇನ್ನು ನೆನಪು ಮಾತ್ರ. ಬೆಂಗಳೂರಿನಲ್ಲಿ ನೆಲೆಸಿದ್ದ, 49 ವರ್ಷದ ಚಾಪ್‌ಮನ್ ಅವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾದರು.

1990ರ ದಶಕದಲ್ಲಿ ಭಾರತ ತಂಡದ ಮಿಡ್‌ಫೀಲ್ಡ್ ವಿಭಾಗದ ಶಕ್ತಿಯಾಗಿದ್ದ ಚಾಪ್‌ಮನ್ 1995ರಿಂದ 2001ರ ವರೆಗೆ ರಾಷ್ಟ್ರೀಯ ತಂಡದಲ್ಲಿದ್ದರು. 1997ರ ಸಾಫ್‌ ಕಪ್‌ ಪ್ರಶಸ್ತಿ ಗೆದ್ದ ತಂಡವನ್ನು ಅವರು ಮುನ್ನಡೆಸಿದ್ದರು.

19080ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಕೇಂದ್ರ ಸೇರಿದ್ದ ಅವರು ಸದರ್ನ್ ಬ್ಲೂಸ್‌ನಲ್ಲಿ ಕೆಲಕಾಲ ಆಡಿದ ನಂತರ 1990ರಲ್ಲಿ ಟಾಟಾ ಫುಟ್‌ಬಾಲ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿ, 1993ರಲ್ಲಿ ಈಸ್ಟ್ ಬೆಂಗಾಲ್ ತಂಡ ಸೇರಿದರು. ಮೊದಲ ವರ್ಷವೇ ಏಷ್ಯನ್ ಕಪ್‌ ಟೂರ್ನಿಯಲ್ಲಿ ಇರಾಕ್‌ನ ಅಲ್ ಜವ್ರಾ ಎದುರಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿ ತಂಡಕ್ಕೆ 6–2ರ ಜಯ ತಂದುಕೊಟ್ಟಿದ್ದರು.

1995ರಲ್ಲಿ ಪಂಜಾಬ್‌ನ ಜೆಸಿಟಿ ತಂಡ ಸೇರಿದ ನಂತರ ಅವರ ನೈಜ ಸಾಮರ್ಥ್ಯ ಹೊರಬಂತು. 1996ರಲ್ಲಿ ರಾಷ್ಟ್ರೀಯ ಫುಟ್‌ಬಾಲ್ ಲೀಗ್‌ನ ಚೊಚ್ಚಲ ಆವೃತ್ತಿಯ ಪ್ರಶಸ್ತಿ ಸೇರಿದಂತೆ ಜೆಸಿಟಿಗೆ ಒಟ್ಟು 14 ಚಾಂಪಿಯನ್‌ ಪಟ್ಟಗಳನ್ನು ಅವರು ದೊರಕಿಸಿಕೊಟ್ಟರು.

ಎಫ್‌ಸಿ ಕೊಚ್ಚಿ ತಂಡವನ್ನು ಸೇರಿ ಒಂದೇ ವರ್ಷದಲ್ಲಿ ವಾಪಸಾದ ಕಾರ್ಲಟನ್ ನಂತರ ಈಸ್ಟ್ ಬೆಂಗಾಲ್ ತಂಡ ಸೇರಿದರು. ಅವರ ನಾಯಕತ್ವದಲ್ಲಿ ತಂಡ 2001ರಲ್ಲಿ ರಾಷ್ಟ್ರೀಯ ಫುಟ್‌ಬಾಲ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿತು. ಅದೇ ವರ್ಷ ನಿವೃತ್ತಿಯನ್ನೂ ಘೋಷಿಸಿದರು.

ಕೋಚ್ ಆಗಿಯೂ ಹೆಸರು ಮಾಡಿರುವ ಅವರು ಟಾಟಾ ಫುಟ್‌ಬಾಲ್ ಅಕಾಡೆಮಿ, ಶಿಲಾಂಗ್‌ನ ರಾಯಲ್ ವಹಿಂಗ್ಡೊ ಎಫ್‌ಸಿ, ದೆಹಲಿಯ ಸುದೇವ ಮೂನ್‌ಲೈಟ್ ಎಫ್‌ಸಿಗೆ ತರಬೇತಿ ನೀಡಿದ್ದಾರೆ. 2017ರಿಂದ ಕೋಯಿಕ್ಕೋಡ್‌ನ ಕ್ವಾರ್ಟ್ಸ್ ಇಂಟರ್‌ನ್ಯಾಷನಲ್ ಫುಟ್‌ಬಾಲ್ ಅಕಾಡೆಮಿಗೆ ತಾಂತ್ರಿಕ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT