ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಜಯ

Last Updated 26 ಜುಲೈ 2018, 14:17 IST
ಅಕ್ಷರ ಗಾತ್ರ

ನವದೆಹಲಿ: ರೋಹಿತ್‌ ದಾನು ಹಾಗೂ ಗಿವ್ಸನ್‌ ಸಿಂಗ್‌ ಅವರು ಗಳಿಸಿದ ತಲಾ ಒಂದು ಗೋಲುಗಳ ಬಲದಿಂದ ಭಾರತದ 16 ವರ್ಷದೊಳಗಿನವರ ಫುಟ್‌ಬಾಲ್‌ ತಂಡವು ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 2–1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿತು.

ಪಂದ್ಯದ ಆರಂಭದಿಂದಲೂ ಸಂಘಟಿತ ಹೋರಾಟಕ್ಕೆ ಅಣಿಯಾದ ಭಾರತ ತಂಡವು ಮೊದಲಾರ್ಧದಲ್ಲೇ ಮುನ್ನಡೆ ಸಾಧಿಸಿತು. 21ನೇ ನಿಮಿಷದಲ್ಲಿ ರೋಹಿತ್‌ ದಾನು ಅವರು ಗೋಲು ಗಳಿಸಿ ತಂಡ ಖಾತೆ ತೆರೆಯಲು ನೆರವಾದರು. 31ನೇ ನಿಮಿಷದಲ್ಲಿ ಗಿವ್ಸನ್‌ ಸಿಂಗ್‌ ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಈ ವೇಳೆ ಎದುರಾಳಿ ತಂಡವು ಗೋಲು ದಾಖಲಿಸಲು ಅನೇಕ ಬಾರಿ ಪ್ರಯತ್ನಿಸಿತು. ಆದರೆ, ಭಾರತದ ರಕ್ಷಣಾ ಕೋಟೆಯನ್ನು ಭೇಧಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಮೊದಲಾರ್ಧದ ಅಂತ್ಯಕ್ಕೆ ರೋಹಿತ್‌ ಅವರು ಇನ್ನೊಂದು ಗೋಲು ಗಳಿಸಲು ಮುಂದಾದರು. ಆದರೆ, ಮಲೇಷ್ಯಾ ತಂಡದ ರಕ್ಷಣಾ ವಿಭಾಗದ ಆಟಗಾರರು ಅದಕ್ಕೆ ಅವಕಾಶ ನೀಡಲಿಲ್ಲ.

ದ್ವಿತೀಯಾರ್ಧದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕಿಳಿಯಿತು. ಇದರಿಂದಾಗಿ ಎದುರಾಳಿ ತಂಡವು ಒತ್ತಡಕ್ಕೆ ಸಿಲುಕಿತು. ಇದೇ ವೇಳೆ ರೋಹಿತ್‌, ಚೆಂಡನ್ನು ಡ್ರಿಬಲ್‌ ಮಾಡುತ್ತ ಗುರಿಯತ್ತ ಒದ್ದರು. ಆದರೆ, ಮಲೇಷ್ಯಾದ ಗೋಲ್‌ಕೀಪರ್‌ ಅದನ್ನು ತಡೆದರು.

ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಮಲೇಷ್ಯಾ ಗೋಲು ಗಳಿಸಿತು. 94ನೇ ನಿಮಿಷದಲ್ಲಿ ಬಂದ ಈ ಗೋಲು ಮುನ್ನಡೆಯನ್ನು 2–1ಕ್ಕೆ ತಗ್ಗಿಸಿತು.

ಚೀನಾ, ಥಾಯ್ಲೆಂಡ್‌ ತಂಡಗಳ ವಿರುದ್ಧವೂ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡವು ಉತ್ತಮ ಸಾಮರ್ಥ್ಯ ತೋರಲು ವಿಫಲವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT