ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಬಿಎಫ್‌ಸಿ ಜಯದ ಜಪ

ಇಂದು ಒಡಿಶಾ ಎದುರು ಪೈಪೋಟಿ
Last Updated 3 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಪುಣೆ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಸೋಲರಿಯದೆ ಸಾಗುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ.

ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆಯುವ ಪೈಪೋಟಿಯಲ್ಲಿ ಸುನಿಲ್‌ ಚೆಟ್ರಿ ಬಳಗವು ಒಡಿಶಾ ಎಫ್‌ಸಿ ಎದುರು ಹೋರಾಡಲಿದೆ.

ಬೆಂಗಳೂರಿನ ತಂಡವು ಈ ಬಾರಿ ಒಟ್ಟು ಆರು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದಿರುವ ಚೆಟ್ರಿ ಪಡೆ ನಾಲ್ಕು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ. ಒಟ್ಟು 10 ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಎಫ್‌ಸಿಗೆ ಈಗ ಅಗ್ರಪಟ್ಟಕ್ಕೇರುವ ಅವಕಾಶವಿದ್ದು ಇದಕ್ಕಾಗಿ ಒಡಿಶಾ ವಿರುದ್ಧ ಗೆಲ್ಲಬೇಕಿದೆ.

ಹಾಲಿ ಚಾಂಪಿಯನ್‌ ಬಿಎಫ್‌ಸಿ ತಂಡವು ನಾಯಕ ಚೆಟ್ರಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೋದ ತಿಂಗಳ 23ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಕೇರಳ ಬ್ಲಾಸ್ಟರ್ಸ್‌ ವಿರುದ್ಧದ ಹೋರಾಟದಲ್ಲಿ ಏಕೈಕ ಗೋಲು ಹೊಡೆದು ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದ್ದ ಚೆಟ್ರಿ, ಹೈದರಾಬಾದ್‌ ವಿರುದ್ಧದ ಹಿಂದಿನ ಪಂದ್ಯದಲ್ಲೂ ಕಾಲ್ಚಳಕ ತೋರಿದ್ದರು.

ಆರು ಪಂದ್ಯಗಳಿಂದ ಮೂರು ಗೋಲು ಹೊಡೆದಿರುವ ಭಾರತದ ‘ಫುಟ್‌ಬಾಲ್‌ ಮಾಂತ್ರಿಕ’ ಚೆಟ್ರಿ, ಒಡಿಶಾ ತಂಡಕ್ಕೂ ತಲೆನೋವಾಗಬಲ್ಲರು. ಅವರಿಗೆ ಎರಿಕ್‌ ಪಾರ್ಟಲು ಮತ್ತು ಉದಾಂತ ಸಿಂಗ್‌ ಅವರಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ಗಾಯದಿಂದ ಚೇತರಿಸಿಕೊಂಡಿರುವ ಮೈಕಲ್‌ ಒನ್ವು ಮತ್ತು ಆಶಿಕ್‌ ಕುರುಣಿಯನ್‌ ಅವರು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇದು ನಾಯಕನ ಚಿಂತೆಗೆ ಕಾರಣವಾಗಿದೆ.

ಬೆಂಗಳೂರಿನ ತಂಡ ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಈ ಬಾರಿ ಎದುರಾಳಿಗಳಿಗೆ ಮೂರು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟಿರುವುದು ಇದಕ್ಕೆ ಸಾಕ್ಷಿ. ನಿಗದಿತ 90 ನಿಮಿಷಗಳ ಅವಧಿಯಲ್ಲಿ ಅಮೋಘ ಆಟ ಆಡಿ ಮುನ್ನಡೆ ಪಡೆಯುವ ಚೆಟ್ರಿ ಪಡೆ, ಹೆಚ್ಚುವರಿ ಅವಧಿಯಲ್ಲಿ ಎದುರಾಳಿಗಳಿಗೆ ಗೋಲುಬಿಟ್ಟುಕೊಡುವ ಮೂಲಕ ಗೆಲುವಿನ ಅವಕಾಶ ಕೈಚೆಲ್ಲುತ್ತಿದೆ. ಈ ತಪ್ಪು ಮರುಕಳಿಸದಂತೆ ಆಟಗಾರರು ಎಚ್ಚರವಹಿಸಬೇಕಿದೆ.

ಹಿಂದಿನ ಮೂರು ಪಂದ್ಯಗಳಲ್ಲೂ ಡ್ರಾ ಮಾಡಿಕೊಂಡಿರುವ ಒಡಿಶಾ ತಂಡ ಕೂಡ ಗೆಲುವಿನ ಕನಸು ಕಾಣುತ್ತಿದೆ.

ಈ ಬಾರಿ ಆಡಿರುವ ಆರು ಪಂದ್ಯಗಳ ಪೈಕಿ ಒಂದರಲ್ಲಷ್ಟೇ ಗೆದ್ದಿರುವ ಈ ತಂಡ ಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿದೆ.

ಕ್ಸಿಸ್ಕೊ ಹರ್ನಾಂಡೇಸ್‌, ಡೇನಿಯಲ್‌ ಲಾಲಿಂಪುಯಿಯಾ, ಕಾರ್ಲೊಸ್‌ ಡೆಲ್ಗಾಡೊ, ರೋಮಿಯೊ ಫರ್ನಾಂಡೀಸ್‌ ಈ ತಂಡದ ಬೆನ್ನೆಲುಬಾಗಿದ್ದು, ಬಿಎಫ್‌ಸಿ ತಂಡಕ್ಕೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT