ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿದೇಳುವ ನಿರೀಕ್ಷೆಯಲ್ಲಿ ಬೆಂಗಳೂರು ಎಫ್‌ಸಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಜೆಮ್ಶೆಡ್‌ಪುರ ಎಫ್‌ಸಿಗೆ ಹೈದರಾಬಾದ್ ಎಫ್‌ಸಿ ಸವಾಲು
Last Updated 23 ಜನವರಿ 2021, 13:56 IST
ಅಕ್ಷರ ಗಾತ್ರ

ಫತೋರ್ಡ, ಗೋವಾ: ಸೋಲು ಮತ್ತು ಡ್ರಾಗಳಿಂದಾಗಿ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ನಿರಾಸೆಯ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಭಾನುವಾರ ಒಡಿಶಾ ಎಫ್‌ಸಿಯನ್ನು ಎದುರಿಸಲಿದೆ. ಪಾಯಿಂಟ್ ಪಟ್ಟಿಯ ಕೊನೆಯಲ್ಲಿರುವ ಒಡಿಶಾ ಎದುರು ಗೆದ್ದು ಟೂರ್ನಿಯಲ್ಲಿ ಪುಟಿದೇಳುವ ನಿರೀಕ್ಷೆಯೊಂದಿಗೆ ಸುನಿಲ್ ಚೆಟ್ರಿ ಬಳಗ ಈ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ.

ಬೆಂಗಳೂರು ಎಫ್‌ಸಿಯ ಕಳೆದ ಆರು ಪಂದ್ಯಗಳಲ್ಲಿ ಜಯ ಕಾಣಲಿಲ್ಲ. ಈ ಪೈಕಿ ಐದರಲ್ಲಿ ಸೋತಿದೆ. ನೀರಸ ಪ್ರದರ್ಶನ ನೀಡಿದ್ದರಿಂದ ಕೋಚ್ ಕಾರ್ಲಸ್‌ ಕ್ವದ್ರತ್ ತಂಡವನ್ನು ತೊರೆದಿದ್ದರು. ಹಂಗಾಮಿ ಕೋಚ್ ನೌಶಾದ್ ಮೂಸಾ ಬಂದ ಮೇಲೆಯೂ ಪರಿಸ್ಥಿತಿ ಬದಲಾಗಲಿಲ್ಲ. ಸತತ ನಾಲ್ಕು ಸೋಲುಗಳ ನಂತರ ಒಂದನ್ನು ಡ್ರಾ ಮಾಡಿಕೊಂಡಿದ್ದ ತಂಡ ಕಳೆದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಗೋಲು ಬಿಟ್ಟುಕೊಟ್ಟು ಕೇರಳ ಬ್ಲಾಸ್ಟರ್ಸ್‌ಗೆ ಮಣಿದಿತ್ತು.

ತಂಡ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಜಯದ ಲಯಕ್ಕೆ ಮರಳಿದರೆ ಇನ್ನೂ ನಾಕ್‌ಔಟ್ ಹಂತಕ್ಕೆ ಲಗ್ಗೆ ಇರಿಸಲು ಅವಕಾಶವಿದೆ. ಈ ಕುರಿತು ನೌಶಾದ್ ಮೂಸಾ ಕೂಡ ಭರವಸೆಯ ನುಡಿಗಳನ್ನಾಡಿದ್ದಾರೆ. ‘ಒಂದು ಜಯವು ನಮಗೆ ಮೂರು ಪಾಯಿಂಟ್‌ಗಳನ್ನು ತಂದುಕೊಡಲಿದೆ. ಅದು, ಪಾಯಿಂಟ್‌ ಪಟ್ಟಿಯಲ್ಲಿ ಏರಿಕೆ ಕಾಣಲು ನೆರವಾಗಲಿದೆ. ಆದ್ದರಿಂದ ಒಂದು ಜಯವು ಲೀಗ್‌ನಲ್ಲಿ ತಂಡದ ಭವಿಷ್ಯವನ್ನೇ ಬದಲಿಸಲಿದೆ. ಆ ಜಯಕ್ಕಾಗಿ ಕಾತರರಾಗಿದ್ದೇವೆ’ ಎಂದು ಅವರು ಹೇಳಿದರು.

ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಬಿಎಫ್‌ಸಿ ಅತ್ಯುತ್ತಮ ಆಟವಾಡಿತ್ತು. ಆದರೆ ಅದೃಷ್ಟ ಒಲಿಯಲಿಲ್ಲ. ಹೀಗಾಗಿ ಒಡಿಶಾವನ್ನು ಸುಲಭವಾಗಿ ಮಣಿಸುವ ನಿರೀಕ್ಷೆಯಲ್ಲಿದೆ ತಂಡ. ಒಡಿಶಾ ಈ ವರೆಗೆ ಆಡಿರುವ 12 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದ್ದರಿಂದ ಜಯಕ್ಕಾಗಿ ಆ ತಂಡವೂ ಕಠಿಣ ಪ್ರಯತ್ನ ನಡೆಸಲಿದೆ. ‘ಕಠಿಣ ಸವಾಲೊಡ್ಡುವ ತಂಡಗಳನ್ನು ಸೋಲಿಸುವ ಸಾಮರ್ಥ್ಯ ನಮ್ಮ ತಂಡಕ್ಕಿದೆ. ಎದುರಾಳಿಗಳಿಗೆ ಆಕ್ರಮಣಕಾರಿ ಆಟವಾಡಲು ಅವಕಾಶ ನೀಡದೇ ಇರುವುದೊಂದೇ ಈಗ ತಂಡದ ಮುಂದೆ ಇರುವ ಗುರಿ’ ಎಂದು ಒಡಿಶಾ ಕೋಚ್ ಸ್ಟುವರ್ಟ್‌ ಬಾಕ್ಸ್‌ಟರ್‌ ಹೇಳಿದರು.

ಜೆಮ್ಶೆಡ್‌ಪುರಕ್ಕೆ ಹೈದರಾಬಾದ್ ಸವಾಲು

ತಿಲಕ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜೆಮ್ಶೆಡ್‌ಪುರ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಸೆಣಸಲಿವೆ. ಮೂರು ಸೋಲುಗಳಿಂದ ಕಂಗೆಟ್ಟಿರುವ ಜೆಮ್ಶೆಡ್‌ಪುರಕ್ಕೆ ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಜಯ ಅನಿವಾರ್ಯ. ಸೈಮಿನ್ಲೆನ್ ಡಂಗಲ್ ಮತ್ತು ಫಾರೂಕ್ ಚೌಧರಿ ತಂಡಕ್ಕೆ ಸೇರ್ಪಡೆಯಾಗಿರುವುದು ಬಲ ತುಂಬಿದ್ದು ಈ ಇಬ್ಬರೂ ಭಾನುವಾರ ಕಣಕ್ಕೆ ಇಳಿಯಲಿದ್ದಾರೆ. ಹೈದರಾಬಾದ್ ಎಫ್‌ಸಿ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋತಿಲ್ಲ. ಜೆಮ್ಶೆಡ್‌ಪುರದ ಡಿಫೆನ್ಸ್ ವಿಭಾಗ ಇತ್ತೀಚೆಗೆ ದುರ್ಬಲಗೊಂಡಿದ್ದು ಹಿಂದಿನ ಮೂರು ಪಂದ್ಯಗಳಲ್ಲಿ ಒಂಬತ್ತು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಹೈದರಾಬಾದ್ ಉತ್ಸುಕವಾಗಿದೆ. ಈ ಹಿಂದೆ ಮೂರು ಬಾರಿ ಮುಖಾಮುಖಿಯಾದಾಗ ಹೈದರಾಬಾದ್ ತಂಡವನ್ನು ಜೆಮ್ಶೆಡ್‌ಪುರ ಮಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT