ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದ್ದು ಅರೆಯಲು’ ಮುಂದಾದ ಎಎಫ್‌ಐ

ಡೋಪಿಂಗ್‌ ಪ್ರಕರಣ ಸಾಬೀತಾದಲ್ಲಿ ಅಥ್ಲೀಟ್‌ ಜೊತೆ ಕೋಚ್‌ಗೂ ದಂಡ
Published 17 ಮೇ 2024, 19:49 IST
Last Updated 17 ಮೇ 2024, 19:49 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಥ್ಲೀಟುಗಳು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಕೊಂಡರೆ, ಕೋಚ್‌ಗಳನ್ನೂ ಉತ್ತರ ದಾಯಿಗಳಾಗಿ ಮಾಡುವ ಕ್ರಾಂತಿಕಾರಿ ನೀತಿಯನ್ನು ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಜಾರಿಗೊಳಿಸುತ್ತಿದೆ.

ಮದ್ದು ಪರೀಕ್ಷೆ ವಿಶ್ಲೇಷಣೆಯಲ್ಲಿ ತಪ್ಪು ಮಾಡಿದ್ದು ಸಾಬೀತಾದಲ್ಲಿ ಇಬ್ಬರಿಗೂ (ಕೋಚ್‌ ಮತ್ತು ಅವರಿಂದ ತರಬೇತಿ ಪಡೆಯುವ ಅಥ್ಲೀಟ್‌ಗೆ) ಸಮಾನ ಶಿಕ್ಷೆಯಾಗಲಿದೆ ಎಂದು ಫೆಡರೇಷನ್‌ ಶುಕ್ರವಾರ ಪ್ರಕಟಿಸಿದೆ.

ಕ್ರೀಡೆಯನ್ನು ‘ಸ್ವಚ್ಚಗೊಳಿಸುವ’ ನಿಟ್ಟಿನಲ್ಲಿ ಉದ್ದೀಪನ ಮದ್ದು ಸೇವನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ಇದರಿಂದ ಹೋಗಲಿದೆ ಎಂಬ ವಿಶ್ವಾಸವನ್ನು ಎಎಫ್‌ಐ ವ್ಯಕ್ತಪಡಿಸಿದೆ.

ಡೋಪಿಂಗ್‌ ಕೃತ್ಯದಲ್ಲಿ ಭಾಗಿಯಾಗು ವವರನ್ನು ಗುರುತಿಸಿ, ಮಟ್ಟಹಾಕಲು ಇದು ಸೂಕ್ತ ಸಂದರ್ಭ ಎಂದು ಎಎಫ್‌ಐ ಅಧ್ಯಕ್ಷ ಅದಿಲ್‌ ಸುಮರಿವಾಲಾ ಹೇಳಿದರು. ‘ಉದ್ದೀಪನ ಮದ್ದುಸೇವನೆ ಮಾಡಿದ ಅಥ್ಲೀಟ್‌ಗೆ ಶಿಕ್ಷೆಯಾದಲ್ಲಿ, ಆ ಕ್ರೀಡಾಪಟುವಿನ ಕೋಚ್‌ಗೂ ಸಹ ಎಎಫ್‌ಐನಿಂದ ಅಂಥದ್ದೇ ರೀತಿಯ ಶಿಕ್ಷೆಯಾಗಲಿದೆ’ ಎಂದು ಸುಮರಿವಾಲಾ ಎಎಫ್‌ಐ ಕಾರ್ಯಕಾರಿ ಸಮಿತಿ ಸಭೆಯ ನಂತರ ನಡೆದ ಪತ್ರಿಕಾ ಸಂವಾದದಲ್ಲಿ ತಿಳಿಸಿದರು.

‘ಡೋಪಿಂಗ್ ಪಿಡುಗು ಅಂಕೆ ಮೀರುತ್ತಿರುವ ಕಾರಣದಿಂದ ಕೋಚ್‌ ಅವರನ್ನೂ ಹೊಣೆ ಮಾಡಬೇಕಾಗುತ್ತಿದೆ. ತಪ್ಪು ಮಾಡುವ ಇಂಥವರನ್ನು ಪತ್ತೆ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಸಮಯ’ ಎಂದರು.

ಎನ್‌ಐಎಸ್‌ ಡಿಪ್ಲೊಮಾ ಪಡೆದವರೂ ಸೇರಿದಂತೆ ಎಲ್ಲ ಕೋಚ್‌ಗಳೂ ಎಎಫ್‌ಐ ಜೊತೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಡೋಪಿಂಗ್ ಪರೀಕ್ಷೆಗೆ ಸಂಬಂಧಿಸಿ ಅರ್ಜಿ ಸಲ್ಲಿಸುವ ವೇಳೆ ಅಥ್ಲೀಟುಗಳು ತಮ್ಮ ಕೋಚ್‌ಗಳ ಹೆಸರನ್ನೂ ಉಲ್ಲೇಖಿಸ ಬೇಕು. ಹೀಗಾಗಿ ದೋಷಿಯಾಗುವ ಅಥ್ಲೀಟ್‌ನ ಕೋಚ್‌ ಯಾರೆಂಬುದು ಸುಲಭವಾಗಿ ಗೊತ್ತಾಗಲಿದೆ. ಅಥ್ಲೀಟ್‌ ಯಶಸ್ಸು ಪಡೆದ ಸಂದರ್ಭದಲ್ಲಿ ಕೋಚ್‌ಗೆ ನಗದು ಬಹುಮಾನ ನೀಡುವ ವೇಳೆ ಇರುವ ಗೊಂದಲಕ್ಕೂ ಈ ಕ್ರಮದಿಂದ ತಡೆಬೀಳಲಿದೆ’ ಎಂದರು.

ಒಬ್ಬ ಅಥ್ಲೀಟ್‌ ಯಶಸ್ಸು ಪಡೆದರೆ ನಗದು ಬಹುಮಾನ ಪಡೆಯಲು ಕೆಲವು ಸಲ ನಾಲ್ಕೈದು ಮಂದಿ ಮುಂದೆ ಬರುತ್ತಾರೆ ಎಂದು ವಿವರಿಸಿದರು.

ಈ ಹೊಸ ನೀತಿ ಜಾರಿಗೆ ತರಲು ಫೆಡರೇಷನ್‌ 6 ತಿಂಗಳಿಂದ ಯೋಚಿಸಿತ್ತು. ವಿವಿಧ ಸಂಸ್ಥೆಗಳ ಜೊತೆ ಚರ್ಚೆ ನಡೆಸಿತ್ತು. ವಿವಿಧ ಹಂತದಲ್ಲಿ ಭಾಗೀದಾರರ ಜೊತೆ ಸಮಾಲೋಚನೆಯ ನಂತರ ಈ ನಿರ್ಧಾರಕ್ಕೆ ಬರಲಾಯಿತು ಎಂದರು.

ಅಥ್ಲೀಟ್‌ ಸಿಕ್ಕಿಹಾಕಿಕೊಂಡ ಮೇಲೆ, ಅದರಲ್ಲಿ ಕೋಚ್‌ ತಪ್ಪು ಮಾಡಿದ್ದು ಗೊತ್ತಾದಲ್ಲಿ ಅವರಿಗೆ ಕ್ರೀಡಾಂಗಣ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಅವರು ಯಾವುದೇ ತಂಡದ ಜೊತೆ ಸ್ಪರ್ಧೆಗಳಿಗೆ ತೆರಳುವಂತಿಲ್ಲ. ಅವರಿಗೆ ಫೆಡರೇಷನ್‌ ಮಾನ್ಯತೆ ಇರುವುದಿಲ್ಲ ಎಂದರು.

ಅಥ್ಲೀಟುಗಳಿಗೆ ನೀಡುವ ಪ್ರಮಾಣ ಪತ್ರವನ್ನು ಡಿಜಿಟೈಸ್‌ ಮಾಡಲು ಎಎಫ್‌ಐ ನಿರ್ಧರಿಸಿದೆ. ಅವುಗಳನ್ನು ಡಿಜಿ ಲಾಕರ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಕ್ಕೆ ನೀಡುವ ಪ್ರಮಾಣ ಪತ್ರವನ್ನು ಮಾತ್ರ ಫೆಡರೇಷನ್‌ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT