ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್ ಟೂರ್ನಿ: ಅಲೋಶಿಯಸ್, ಕ್ಷೇಮ ತಂಡಗಳ ಪಾರಮ್ಯ

ಜಿಲ್ಲಾ ಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿ: ಬಾಲಕರ ವಿಭಾಗದಲ್ಲಿ ಜೆಎಸ್ಎಸ್‌ಗೆ ರೋಚಕ ಗೆಲುವು; ಲೂರ್ದ್ಸ್‌ ಜಯಭೇರಿ
Last Updated 26 ಆಗಸ್ಟ್ 2022, 16:36 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಮತ್ತು ನಿಟ್ಟೆಯ ಕ್ಷೇಮ ಕ್ಯಾಂಪಸ್ ತಂಡದವರು ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಆಯೋಜಿಸಿರುವ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಪಾರಮ್ಯ ಮೆರೆದರು.

ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಶುಕ್ರವಾರ ನಡೆದ ಲೀಗ್ ಪಂದ್ಯಗಳಲ್ಲಿ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಸೇಂಟ್ ಅಲೋಶಿಯಸ್ ಪದವಿ ಕಾಲೇಜು ತಂಡವನ್ನು ಮತ್ತು ನಿಟ್ಟೆ ಕ್ಷೇಮ ತಂಡ ಎನ್‌ಐಟಿಕೆ ವಿರುದ್ಧ ಗೆಲುವು ಸಾಧಿಸಿತು.

ಸಂಜೆ ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಅನ್ಯಾ ಮತ್ತು ಪ್ರಾರ್ಥನಾ ಶೆಟ್ಟಿ ಕ್ರಮವಾಗಿ ಗಳಿಸಿದ 11 ಮತ್ತು 6 ಪಾಯಿಂಟ್‌ಗಳ ಬಲದಿಂದ ಕ್ಷೇಮ ತಂಡ 16–12ರಲ್ಲಿ ಎನ್ಐಟಿಕೆ ವಿರುದ್ಧ ಜಯ ಗಳಿಸಿತು. ಮೊದಲಾರ್ಧದಲ್ಲಿ 6–7ರ ಹಿನ್ನಡೆಯಲ್ಲಿದ್ದ ಕ್ಷೇಮ ನಂತರದ ಎರಡು ಕ್ವಾರ್ಟರ್‌ಗಳಲ್ಲಿ ತಿರುಗೇಟು ನೀಡಿತು. ಎನ್‌ಐಟಿಕೆ ಪರ ಸಾಧನಾ (6 ಪಾಯಿಂಟ್) ಮಿಂಚಿದರು.

9 ಪಾಯಿಂಟ್ ಗಳಿಸಿದ ಆ್ಯಶ್ಲಿನ್ ಮತ್ತು 6 ಪಾಯಿಂಟ್ ಕಲೆ ಹಾಕಿದ ಕ್ಯಾರಲ್ ಅವರ ಅಮೋಘ ಆಟದ ನೆರವಿನಿಂದ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಪದವಿ ಕಾಲೇಜು ತಂಡದ ವಿರುದ್ಧ 22–20ರಲ್ಲಿ ಗೆಲುವು ಸಾಧಿಸಿತು. ಆರಂಭದಿಂದಲೇ ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾದ ಪಂದ್ಯದ ಮೊದಲಾರ್ಧದಲ್ಲಿ ಪಿಯು ಕಾಲೇಜು ತಂಡ ಒಂದು ಪಾಯಿಂಟ್‌ (14–13) ಮುನ್ನಡೆ ಸಾಧಿಸಿತ್ತು. 6 ಪಾಯಿಂಟ್ ಗಳಿಸಿದ ವಸುಂಧರಾ ಪದವಿ ಕಾಲೇಜು ಪರವಾಗಿ ಹೋರಾಟಕಾರಿ ಆಟವಾಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಗೋಣಿಕೊಪ್ಪದ ಕಾವೇರಿ ತಂಡ ಪುರುಷರ ವಿಭಾಗದಲ್ಲಿ ಪ್ರೆಸಿಡೆನ್ಸಿ ವಿರುದ್ಧ 48–16ರ ಗೆಲುವು ಸಾಧಿಸಿತು. ವಿಜಯಿ ತಂಡಕ್ಕಾಗಿ ಆಶಿಶ್‌ 16 ಪಾಯಿಂಟ್ ತಂದುಕೊಟ್ಟರು. ಪ್ರೆಸಿಡೆನ್ಸಿಗಾಗಿ ಅಶ್ಮಿತ್ 10 ಪಾಯಿಂಟ್ ಗಳಿಸಿದರು.

ಲೂರ್ದ್ಸ್‌ಗೆ ಭರ್ಜರಿ, ಜೆಎಸ್‌ಎಸ್‌ಗೆ ರೋಚಕ ಜಯ
ಬಾಲಕರ ವಿಭಾಗದಲ್ಲಿ ಸೇಂಟ್ ಅಲೋಶಿಯಸ್ ‘ಎ’ ತಂಡ ಸೇಂಟ್ ಥೆರೆಸಾ ತಂಡವನ್ನು 33–12ರಲ್ಲಿ ಮಣಿಸಿತು. ಅಲೋಶಿಯಸ್‌ ತಂಡಕ್ಕಾಗಿ ಸಾವನ್ 11, ರಿತ್ವಿಕ್ 8, ಥೆರೆಸಾ ತಂಡದ ಪರ ಇಶಾನ್ 6 ಪಾಯಿಂಟ್ ಗಳಿಸಿದರು. ಕೇಂಬ್ರಿಜ್ ವಿರುದ್ಧ ಮೌಂಟ್ ಕಾರ್ಮೆಲ್ 21–17ರಲ್ಲಿ, ಮೌಂಟ್ ಕಾರ್ಮೆಲ್ ವಿರುದ್ಧ ಜೆಎಸ್‌ಎಸ್‌ 18–17ರಲ್ಲಿ ಜಯ ಸಾಧಿಸಿತು.

ಮೊದಲಾರ್ಧದಲ್ಲಿ ಕೇವಲ ಒಂದು ಪಾಯಿಂಟ್ ಬಿಟ್ಟುಕೊಟ್ಟ ಲೂರ್ದ್ಸ್‌ ತಂಡ ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ವಿರುದ್ಧ 14–1ರಲ್ಲಿ ಜಯ ಗಳಿಸಿತು. ಆಶ್ತಾ 12 ಪಾಯಿಂಟ್ ಕಲೆ ಹಾಕಿದರು. ಕೇಂಬ್ರಿಜ್ ವಿರುದ್ಧ ಮೌಂಟ್ ಕಾರ್ಮೆಲ್ 12–2ರಲ್ಲಿ, ಸೇಂಟ್ ಅಲೋಶಿಯಸ್ ‘ಬಿ’ ವಿರುದ್ಧ ಮಣಿಪಾಲ್ 27–9ರಲ್ಲಿ, ಮಣಿಪಾಲ್ ವಿರುದ್ಧ ಮೌಂಟ್ ಕಾರ್ಮೆಲ್ ‘ಬಿ’ 14–6ರಲ್ಲಿ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT