ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ದಸರಾ ಕ್ರೀಡಾಕೂಟದ ಸುತ್ತ...

Last Updated 30 ಸೆಪ್ಟೆಂಬರ್ 2018, 14:40 IST
ಅಕ್ಷರ ಗಾತ್ರ

ಕ್ರೀಡಾಕೂಟ ಇಲ್ಲದ ದಸರಾ ಆಚರಣೆಯನ್ನು ಊಹಿಸಿಕೊಳ್ಳುವುದೂ ಕಷ್ಟ. ದಸರಾ ಕ್ರೀಡಾಕೂಟವೆಂದರೆ ಗ್ರಾಮೀಣ ಪ್ರತಿಭೆಗಳ ಪಾಲಿಗೆ ಅವಕಾಶಗಳ ವೇದಿಕೆ. ಪ್ರತಿಭೆಗಳನ್ನು ಶೋಧಿಸುವ ತಾಣ. ಇದಕ್ಕೆ ಭವ್ಯ ಇತಿಹಾಸವೇ ಇದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹಲವು ಪ್ರತಿಭೆಗಳಿಗೆ ದಾರಿ ದೀಪವಾಗಿದೆ. ನಾಡಹಬ್ಬಕ್ಕೆ ಮೆರುಗು ಲಭಿಸುವುದೇ ಕ್ರೀಡೆಗಳಿಂದ. ಸಾವಿರಾರು ಕ್ರೀಡಾಳುಗಳು ಭಾಗವಹಿಸುವ ಕ್ರೀಡಾ ಉತ್ಸವವಿದು.

ಅದೆಷ್ಟೊ ಪ್ರತಿಭೆಗಳ ಮೊದಲ ಮೆಟ್ಟಿಲು ಎಂಬುದು ವಿಶೇಷ. ಇಲ್ಲಿ ಓಡಿ ಗೆದ್ದವರು ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದಾರೆ. ಬಹಳ ಹಿಂದೆ ದಸರೆಯಲ್ಲಿ ಪಾಲ್ಗೊಂಡವರು, ಪದಕ ಗೆದ್ದವರು, ಸನಿಹದಿಂದ ವೀಕ್ಷಿಸಿದವರು ಈಗಲೂ ಆ ಕ್ಷಣಗಳನ್ನು ರೋಚಕವಾಗಿ ವರ್ಣಿಸುತ್ತಾರೆ. ದಸರಾ ಕ್ರೀಡಾಕೂಟದ ಕಲರವ ಶುರುವಾಗಿದ್ದು 60 ವರ್ಷಗಳ ಹಿಂದೆ. 80ರ ದಶಕದಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಸ್ವರೂಪ ಪಡೆದಿತ್ತು. ಎರಡು ವರ್ಷ ರಾಷ್ಟ್ರಮಟ್ಟದ ಸ್ಪರ್ಧೆಗಳು ಕೂಡ ನಡೆದಿದೆ.

ಈಗ ಮತ್ತೊಂದು ದಸರಾ ಕ್ರೀಡಾಕೂಟ ಬಂದಿದೆ. ಜೊತೆಗೆ ಕೆಲ ಬದಲಾವಣೆಗಳೂ ಆಗಿವೆ. ಅ.10ರಂದು ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದ್ದು, ಈ ಬಾರಿ ‘ದಸರಾ ಸಿ.ಎಂ ಕಪ್‌’ ಎಂದು ನಾಮಕರಣ ಮಾಡಲಾಗಿದೆ. ಕಳೆದ ಬಾರಿಗಿಂತ ಭಿನ್ನ ರೂಪದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕ್ರೀಡಾ ಇಲಾಖೆ, ದಸರಾ ಕ್ರೀಡಾ ಉಪಸಮಿತಿ ಜೊತೆ ಈ ಬಾರಿ ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಕೂಡ ಕೈ ಜೋಡಿಸಿದೆ.

ತಾಲ್ಲೂಕು, ಜಿಲ್ಲಾ, ವಿಭಾಗೀಯ ಮಟ್ಟದ ಸ್ಪರ್ಧೆಗಳು ಇಲ್ಲದೇ ನೇರವಾಗಿ ಕ್ರೀಡಾ ಸಂಸ್ಥೆಗಳ ವತಿಯಿಂದ ಪ್ರತಿ ಕ್ರೀಡಾ ವಿಭಾಗದಲ್ಲಿ ಉತ್ತಮ ಎಂಟು ತಂಡಗಳ ಆಟಗಾರರು, ಎಂಟು ಉತ್ತಮ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ದೇಸಿ ಕ್ರೀಡೆಗಳಿಗೆ ಅವಕಾಶ ಸಿಗುವ ಅನುಮಾನವಿತ್ತು. ಅಲ್ಲದೇ, ಕೆಲ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆ ಗೊಂದಲಗಳಿಗೆ ಕೆಒಎ ತೆರೆ ಎಳೆದಿದೆ.

‘ಎಲ್ಲಾ ಕ್ರೀಡಾ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ದೇಸಿ ಕ್ರೀಡೆಗಳಿಗೆ ಅವಕಾಶ ನೀಡಲಾಗಿದೆ. ದಸರಾ ಕ್ರೀಡಾಕೂಟ ಉತ್ತಮವಾಗಿ ಮೂಡಿಬರಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್‌.

ದಸರಾ ಕ್ರೀಡಾಕೂಟದಲ್ಲಿ ಪಡೆದ ಪ್ರಮಾಣಪತ್ರಗಳಿಗೆ ಹಿಂದೆ ಮಾನ್ಯತೆಯಿರಲಿಲ್ಲ. ಇನ್ನು ಮುಂದೆ ಪ್ರಮಾಣಪತ್ರಗಳಿಗೆ ಮಾನ್ಯತೆ ದೊರೆಯಲಿದ್ದು, ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕ್ರೀಡಾಪಟುಗಳಿಗೆ ನೆರವಾಗಲಿದೆ ಎಂಬುದು ಆಯೋಜಕರ ಭರವಸೆ.

ವರ್ಷದಿಂದ ವರ್ಷಕ್ಕೆ ಹೊಸತನ ಮೈಗೂಡಿಸಿಕೊಂಡು ಬಂದರೂ ಕ್ರೀಡಾಕೂಟ ಮಾತ್ರ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬುದು ಕೆಲವರ ಟೀಕೆ.

ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಕ್ರೀಡಾಕೂಟದ ಸ್ವರೂಪ ಬದಲಾಯಿಸಿರುವುದಕ್ಕೆ ಕ್ರೀಡಾ ಪೋಷಕರು, ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಸಿ ಕ್ರೀಡೆ ಹಾಗೂ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಅವರದ್ದು.

‘ರಾಜರ ಕಾಲದಿಂದಲೂ ದಸರಾ ಕ್ರೀಡಾಕೂಟ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಕ್ರೀಡೆಗಳನ್ನು ಪೋಷಿಸಲಾಗಿದೆ. ಸ್ವರೂಪ ಬದಲಿಸಬಾರದಿತ್ತು’ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಕೃಷ್ಣ.

ಹಿಂದೆ ಅಖಿಲ ಭಾರತ ಆಹ್ವಾನಿತ ಕಬಡ್ಡಿ, ಕೊಕ್ಕೊ, ಬ್ಯಾಡ್ಮಿಂಟನ್‌, ವಾಲಿಬಾಲ್ ಸ್ಪರ್ಧೆಗಳು ನಡೆಯುತ್ತಿದ್ದವು. ಕೆಲ ವರ್ಷಗಳಿಂದ ಇದನ್ನೂ ಕೈಬಿಡಲಾಗಿದೆ.

‘ಇತ್ತೀಚಿನ ವರ್ಷಗಳಲ್ಲಿ ದಸರಾ ಕ್ರೀಡಾಕೂಟ ಗೊಂದಲದ ಗೂಡಾಗುತ್ತಿದೆ. ಸರಿಯಾಗಿ ಸಿದ್ಧತೆ ನಡೆಸದಿರುವುದು ಹಾಗೂ ವಿಳಂಬ ಧೋರಣೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ರಾಜ್ಯಮಟ್ಟದ ಸ್ಪರ್ಧಿಗಳಿಗೆ ಪದೇಪದೇ ಅವಕಾಶ ಸಿಗುತ್ತಿರುತ್ತದೆ. ಗ್ರಾಮೀಣ ಪ್ರತಿಭೆಗಳಿಗೆ ದಸರೆ ನೆಪದಲ್ಲಾದರೂ ವೇದಿಕೆ ಅವಕಾಶ ಮಾಡಿಕೊಡಬೇಕಿತ್ತು’ ಎಂದು ಹೇಳುತ್ತಾರೆ ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಮಾಜಿ ಕೋಚ್‌ ನಟರಾಜ್‌.

ಕ್ರೀಡಾಕೂಟಕ್ಕೆ ಸಿದ್ಧತೆ ಆರಂಭವಾಗುವುದೇ ತಡವಾಗಿ. ಈ ವರ್ಷವೂ ಅದೇ ಸಮಸ್ಯೆ. ಸೌಲಭ್ಯಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. ಚಾಮುಂಡಿವಿಹಾರದ ವಿಶಾಲ ಪ್ರದೇಶದಲ್ಲಿ ಕ್ರೀಡಾ ಇಲಾಖೆಯ ಸುಸಜ್ಜಿತ ಕ್ರೀಡಾಂಗಣವೇ ಇದೆ. ಹಾಕಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಈಜುಕೊಳವಿದೆ.

ದಸರೆಯಲ್ಲಿ ‍ಪಾಲ್ಗೊಳ್ಳುವ ಕ್ರೀಡಾಪಟುಗಳ ಸಂಖ್ಯೆಯೂ ಈಚೆಗೆ ಕುಸಿಯುತ್ತಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕ್ರೀಡಾಪ್ರೇಮಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕ್ರೀಡೆಗೆ ಮೀಸಲಿಡುವ ಅನುದಾನವೂ ತಗ್ಗುತ್ತಿದೆ. ಈ ಬಾರಿ ‘ದಸರಾ ಸಿ.ಎಂ ಕಪ್‌’ ಎಂಬ ಹೆಸರಿನಡಿ ನಡೆಯುತ್ತಿರುವುದರಿಂದ ಏನಾದರೂ ಹೊಸತನ ಇರಲಿದೆ ಎಂಬುದು ಕ್ರೀಡಾ ಪ್ರೇಮಿಗಳ ವಿಶ್ವಾಸ. ಜೊತೆಗೆ ಹೆಚ್ಚಿನ ಅನುದಾನ ಲಭಿಸುವ ಭರವಸೆ ಸಿಕ್ಕಿದೆ. ಪರಿಣತರು ಕ್ರೀಡಾಕೂಟ ನಡೆಸುತ್ತಿದ್ದಾರೆ. ಹೀಗಾಗಿ, ಸಹಜವಾಗಿಯೇ ಕುತೂಹಲ ಹೆಚ್ಚಿದೆ. ಎಲ್ಲರ ಕಣ್ಣು ಕ್ರೀಡಾಕೂಟದತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT