ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹರ್ನಿಶಿ ಅಥ್ಲೆಟಿಕ್ಸ್‌: ಕ್ರೀಡಾಪಟುಗಳ ಅಸಮಾಧಾನ

Published 29 ಡಿಸೆಂಬರ್ 2023, 13:50 IST
Last Updated 29 ಡಿಸೆಂಬರ್ 2023, 13:50 IST
ಅಕ್ಷರ ಗಾತ್ರ

ಮಂಗಳೂರು: ಒಡಿಶಾದಲ್ಲಿ ಶುಕ್ರವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಅಥ್ಲೆಟಿಕ್ ಕೂಟದಲ್ಲಿ ಹಗಲು–ರಾತ್ರಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದು ಪಾಲ್ಗೊಂಡ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೋಚ್‌ಗಳು ದೂರು ದಾಖಲಿಸಲು ಸಜ್ಜಾಗಿದ್ದಾರೆ.

ಭುವನೇಶ್ವರದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ (ಕೆಐಐಟಿ) ಮತ್ತು ಕಳಿಂಗ ಸಮಾಜ ವಿಜ್ಞಾನ ಸಂಸ್ಥೆ (ಕೆಐಎಸ್‌ಎಸ್‌) ಕ್ರೀಡಾಂಗಣದಲ್ಲಿ ಡಿಸೆಂಬರ್ 26ರಿಂದ ಮಹಿಳೆಯರ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು ನಡೆದಿದ್ದವು. ಮುಂಜಾನೆ 6ಕ್ಕೆ ಸ್ಪರ್ಧೆಗಳು ಆರಂಭಗೊಂಡಿದ್ದು ಮೊದಲ ದಿನ ರಾತ್ರಿ 1 ಗಂಟೆ ವರೆಗೆ, 3ನೇ ಮತ್ತು 4ನೇ ದಿನದ ಸ್ಪರ್ಧೆಗಳು ಬೆಳಿಗ್ಗೆ 3.30ರ ವರೆಗೆ ಮುಂದುವರಿದಿವೆ. ಇದರಿಂದ ಕ್ರೀಡಾಪಟುಗಳು ಗಾಯದ ಸಮಸ್ಯೆಯಿಂದ ಬಳಲಿದ್ದು ಸುಸ್ತು ಕೂಡ ಕಾಡಿದೆ. ಸ್ಪರ್ಧೆಗಳಲ್ಲಿ ನೈಜ ಸಾಮರ್ಥ್ಯ ತೋರುವುದಕ್ಕೂ ಸಾಧ್ಯವಾಗಲಿಲ್ಲ ಎಂದು ಕೋಚ್‌ಗಳು ಆರೋಪಿಸಿದ್ದಾರೆ.

ಭುವನೇಶ್ವರದ ಕ್ರೀಡಾ ಹಬ್ ಎಂದೇ ಕರೆಯಲಾಗುವ ಕೆಐಐಟಿ ಮತ್ತು ಕೆಐಎಸ್‌ಎಸ್‌ನಲ್ಲಿ ಏಕಕಾಲದಲ್ಲಿ ಅಂತರ ವಾರ್ಸಿಟಿ ಮಹಿಳೆಯರ ಮತ್ತು ಪೂರ್ವ, ಪಶ್ಚಿಮ, ಉತ್ತರ ವಲಯ ಪುರುಷರ ಅಂತರ ವಿವಿ ಅಥ್ಲೆಟಿಕ್ ಕೂಟ ಆಯೋಜಿಸಲಾಗಿತ್ತು. ಹೀಗಾಗಿ ಸಮಯಕ್ಕೆ ಸರಿಯಾಗಿ ಟ್ರ್ಯಾಕ್ ಮತ್ತು ಫೀಲ್ಡ್‌ ಸಿಗುತ್ತಿರಲಿಲ್ಲ. ಕೆಲವು ಸ್ಪರ್ಧೆಗಳ ಆರಂಭಕ್ಕೆ ಅಥ್ಲೀಟ್‌ಗಳು ತಾಸುಗಟ್ಟಲೆ ಕಾದಿದ್ದಾರೆ. ‘ಸಮಯಕ್ಕೆ ಸರಿಯಾಗಿ ಕರೆದಿದ್ದಾರೆ. ಆದರೆ ಕೆಲವು ಸ್ಪರ್ಧೆಗಳು 5,6,7 ತಾಸುಗಳು ತಡವಾಗಿ ಆರಂಭಗೊಂಡಿವೆ. ತಡರಾತ್ರಿ ವರೆಗೆ ಸ್ಪರ್ಧೆಗಳನ್ನು ಮುಂದುವರಿಸಿದ್ದರಿಂದ ನಿದ್ದೆ, ಊಟ ಯಾವುದೂ ಸರಿಯಾಗಿ ಆಗಲಿಲ್ಲ. ಇದರಿಂದ ಸುಧಾರಿಸಿಕೊಳ್ಳಲು ಹಲವು ದಿನಗಳು ಬೇಕು’ ಎಂದು ಕಳೆದ ಬಾರಿ ಚೀನಾದಲ್ಲಿ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಕೂಟದ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕರ್ನಾಟಕದ ಭವಾನಿ ಜಾದವ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅನೇಕ ಸ್ಪರ್ಧೆಗಳಿಗೆ ಅಥ್ಲೀಟ್ಸ್ ವಾರ್ಮ್ ಅಪ್ ಮಾಡಿದ ನಂತರ 4 ತಾಸುಗಳು ಕಳೆದು ಸ್ಪರ್ಧೆಗಳು ನಡೆದಿದ್ದವು. ಯಾವುದಕ್ಕೂ ಶಿಸ್ತು ಇರಲಿಲ್ಲ. ಬೆಳಿಗ್ಗೆ 10.30ಕ್ಕೆ ನಡೆಯಬೇಕಾಗಿದ್ದ 100 ಮೀಟರ್ಸ್ ಓಟದ ಸ್ಪರ್ಧೆ ಆರಂಭಗೊಂಡದ್ದು ಸಂಜೆ 6.30ಕ್ಕೆ. ಸಂಜೆ 4.30ಕ್ಕೆ ನಡೆಯಬೇಕಾಗಿದ್ದ ಸ್ಪರ್ಧೆಗಳು ತಡರಾತ್ರಿ 2 ಗಂಟೆಗೆ ಆರಂಭಗೊಂಡಿದ್ದವು. ತಡರಾತ್ರಿ 3.30ಕ್ಕೆ ಸ್ಪರ್ಧೆಗಳನ್ನು ಮುಗಿಸಿ ಹೋದವರು ಮುಂಜಾನೆ 6ಕ್ಕೆ ಮತ್ತೆ ಮೈದಾನದಲ್ಲಿ ಇರಬೇಕಾಗಿತ್ತು’ ಎಂದು ಮಂಗಳೂರು ವಿವಿ ಪರವಾಗಿ ತೆರಳಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕೋಚ್ ಅಜಿತ್ ಕುಮಾರ್‌ ತಿಳಿಸಿದರು.

‘ಫಲಿತಾಂಶಗಳನ್ನು ಸಮರ್ಪಕವಾಗಿ ಪ್ರಕಟಿಸಲಿಲ್ಲ. ಶುಕ್ರವಾರ ಮಧ್ಯಾಹ್ನದ ಒಳಗೆ ಸ್ಪರ್ಧೆಗಳು ಮುಕ್ತಾಯಗೊಂಡಿದ್ದರೂ ಫಲಿತಾಂಶಗಳನ್ನು ತಿಳಿಯಲು ಮತ್ತು ಚಾಂಪಿಯನ್‌ಷಿಪ್ ಬಗ್ಗೆ ಮಾಹಿತಿ ಪಡೆಯಲು ಸಂಜೆ ವರೆಗೆ ಕಾಯಬೇಕಾಗಿತ್ತು. ಡೋಪಿಂಗ್ ಪರೀಕ್ಷೆಗೆ ಸೌಕರ್ಯಗಳೇ ಇರಲಿಲ್ಲ’ ಎಂದು ಮಂಗಳೂರು ವಿವಿ ಅಥ್ಲೆಟಿಕ್ ಕೋಚ್ ಅವಿನ್ ಕುಮಾರ್ ತಿಳಿಸಿದರು.

ಸೌಲಭ್ಯಗಳು ಚೆನ್ನಾಗಿದ್ದವು. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮಾನವ ಸಂಪನ್ಮೂಲ ಇರಲಿಲ್ಲ. ತಡರಾತ್ರಿ ವರೆಗೂ ಸ್ಪರ್ಧೆಗಳು ಆಯೋಜಿಸಿದ್ದರಿಂದ ಅಥ್ಲೀಟ್‌ಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.
–ಬಿನು ಜಾರ್ಜ್‌ ಕೇರಳದ ಎಂ.ಜಿ ವಿವಿ ಕ್ರೀಡಾ ನಿರ್ದೇಶಕ
ಜನವರಿ 4ರಿಂದ ನಡೆಯಲಿರುವ ಅಖಿಲ ಭಾರತ ಅಂತರ ವಿವಿ ಪುರುಷರ ಅಥ್ಲೆಟಿಕ್ಸ್‌ಗೆ ಆಯ್ಕೆ ಮಾಡುವ ಒತ್ತಡ ಇತ್ತು. ನಿಗದಿತ ಅವಧಿಯಲ್ಲಿ ಸ್ಪರ್ಧೆ ಮುಗಿಸುವುದಕ್ಕಾಗಿ ತಡರಾತ್ರಿ ವರೆಗೂ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು.
–ಗಗನೇಂದು ದಾಸ್‌ ಕೆಐಐಎಸ್‌ ಕ್ರೀಡಾ ನಿರ್ದೇಶಕ ಮತ್ತು ಕೂಟದ ಆಯೋಜನಾ ಸಮಿತಿ ಕಾರ್ಯದರ್ಶಿ
ಮಂಗಳೂರು ವಿವಿ ಚಾಂಪಿಯನ್‌
ಕೂಟದಲ್ಲಿ 56 ಪಾಯಿಂಟ್ ಗಳಿಸಿದ ಮಂಗಳೂರು ವಿವಿ ಚಾಂಪಿಯನ್ ಆಗಿದೆ. 52 ಪಾಯಿಂಟ್‌ಗಳೊಂದಿಗೆ ಚಂಢೀಗಡ ವಿವಿ ರನ್ನರ್ ಅಪ್ ಆಗಿದ್ದು ಕೇರಳದ ಕ್ಯಾಲಿಕಟ್‌ ವಿವಿ (41 ಪಾಯಿಂಟ್) ಮೂರನೇ ಸ್ಥಾನ ಗಳಿಸಿದೆ. ಜೈನ್ ವಿವಿ 19ನೇ ಸ್ಥಾನ ಮೈಸೂರು ವಿವಿ 30ನೇ ಸ್ಥಾನ ಕರ್ನಾಟಕ ರಾಜ್ಯ ಕಾನೂನು ವಿವಿ 37ನೇ ಸ್ಥಾನ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT