ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಲಿಗಲ್ಲಿನ ಪಂದ್ಯದಲ್ಲಿ ಬುಲ್ಸ್‌ಗೆ ನಿರಾಸೆ

ಪ್ರೊ ಕಬಡ್ಡಿ: ವಾರಿಯರ್ಸ್‌ಗೆ ಗೆಲುವು
Published 15 ಜನವರಿ 2024, 16:17 IST
Last Updated 15 ಜನವರಿ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಸಾವಿರನೇ ಪಂದ್ಯ ಬೆಂಗಳೂರು ಬುಲ್ಸ್‌ ಪಾಲಿಗೆ ಸ್ಮರಣೀಯವಾಗಲಿಲ್ಲ. ವಿರಾಮಕ್ಕೆ ಮೊದಲು ಮತ್ತು ನಂತರ ಒಟ್ಟು ಎರಡು ಬಾರಿ ಮುನ್ನಡೆ ಪಡೆದರೂ ಬೆಂಗಳೂರು ತಂಡ ಸೋಮವಾರ ನಡೆದ ಈ ಮೈಲಿಗಲ್ಲು ಪಂದ್ಯದಲ್ಲಿ 29–35ರಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆರು ಪಾಯಿಂಟ್‌ಗಳಿಂದ ಮಣಿಯಿತು.

ಸವಾಯಿ ಮಾನ್‌ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬೆಂಗಳೂರು ತಂಡ ಸ್ಥಿರತೆ ಕಾಯ್ದುಕೊಳ್ಳಲಿಲ್ಲ. ರೈಡಿಂಗ್‌ನಲ್ಲಿ ನೆಚ್ಚಿಕೊಂಡಿದ್ದ ಭರತ್‌ (10 ಪಾಯಿಂಟ್‌) ಮೊದಲಾರ್ಧದಲ್ಲಿ ಮಿಂಚಿದರೂ, ನಂತರ ಮಂಕಾದರು. ಉಳಿದ ರೈಡರ್‌ಗಳೂ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ರಕ್ಷಣಾ ವಿಭಾಗದಲ್ಲಿ ಸುರ್ಜಿತ್ ಮೊದಲಾರ್ಧದಲ್ಲಿ ವಿಫಲರಾಗಿದ್ದರು. ಒಟ್ಟಾರೆ ಸಾಂಘಿಕ ಪ್ರದರ್ಶನ ಕಂಡುಬರಲಿಲ್ಲ. ಬೆಂಗಳೂರಿನ ತಂಡ ಎರಡು ಬಾರಿ ಆಲೌಟ್‌ ಆಯಿತು. ವಾರಿಯರ್ಸ್‌ ದ್ವಿತೀಯಾರ್ಧದಲ್ಲಿ ಒಮ್ಮೆ ಆಲೌಟ್‌ ಆಯಿತು.

ಭರತ್ ಅವರ ಉತ್ತಮ ರೈಡಿಂಗ್ ನೆರವಿನಿಂದ ಬುಲ್ಸ್ ಆರಂಭದಲ್ಲಿ 9–5ರಿಂದ ಮುಂದಿತ್ತು. ಆದರೆ ಮಣಿಂದರ್ ಮತ್ತು ನಿತಿನ್ ಅವರ ರೈಡಿಂಗ್ ಮತ್ತು ರೈಟ್‌ ಕಾರ್ನರ್‌ ಡಿಫೆಂಡರ್ ಶುಭಂ ಶಿಂದೆ (8 ಪಾಯಿಂಟ್‌) ಅವರು ವಾರಿಯರ್ಸ್‌ ನೆರವಿಗೆ ಬಂದು ತಂಡ 11–10ರಲ್ಲಿ ಮುನ್ನಡೆಯಿತು. 16ನೇ ನಿಮಿಷ ಮೊದಲ ಬಾರಿ ಬುಲ್ಸ್‌ ಆಲೌಟ್‌ ಆಯಿತು. ಈ ಮುನ್ನಡೆಯನ್ನು ವಿರಾಮದ ವೇಳೆಗೆ ಬೆಂಗಾಲ್‌ ತಂಡ 19–12ಕ್ಕೆ ಹೆಚ್ಚಿಸಿತು.

ಉತ್ತರಾರ್ಧದಲ್ಲಿ ಸಬ್‌ಸ್ಟಿಟ್ಯೂಟ್ ವಿಕಾಸ್‌ ಕಂಡೊಲಾ ಮತ್ತು ನೀರಜ್ ರೈಡಿಂಗ್, ಸುರ್ಜಿತ್ ಅವರ ಮೂರು ಟ್ಯಾಕಲ್ ಬಲದಿಂದ ಬುಲ್ಸ್ ತಂಡ ಚೇತರಿಸಿತು. ಎಂಟನೇ ನಿಮಿಷ ಎದುರಾಳಿಯನ್ನು ಆಲೌಟ್‌ ಮಾಡಿ 21–19ರಲ್ಲಿ ಮುನ್ನಡೆಯಿತು. ಆದರೆ ನಂತರ ಅದೇ ತಪ್ಪುಗಳು. ರೈಡಿಂಗ್‌ನಲ್ಲಿ ಭರತ್, ಕಂಡೊಲಾ ಎಡವಿದರು. ರಕ್ಷಣೆ ವಿಫಲವಾಯಿತು. 16ನೇ ನಿಮಿಷ ಬೆಂಗಳೂರು ಆಲೌಟ್‌ ಆಯಿತು. ನಾಯಕ ಮಣಿಂದರ್ ಆರಂಭದಲ್ಲಿ ಎಡವಿದರೂ ನಂತರ ಒಟ್ಟು 9 ಪಾಯಿಂಟ್ಸ್‌ ಗಳಿಸಿದರು.

ಬುಲ್ಸ್ ತಂಡಕ್ಕೆ 13 ಪಂದ್ಯಗಳಲ್ಲಿ ಇದು ಎಂಟನೇ ಸೋಲು. ಐದು ಗೆದ್ದು 32 ಪಾಯಿಂಟ್‌ಗಳೊಂದಿಗೆ 9ನೇ ಸ್ಥಾನದಲ್ಲಿದೆ. ವಾರಿಯರ್ಸ್‌ 13 ಪಂದ್ಯದಲ್ಲಿ ಆರನೇ ಗೆಲುವಿನೊಡನೆ ಆರನೇ ಸ್ಥಾನಕ್ಕೇರಿತು. ಅದು ಎರಡು ಪಂದ್ಯ ಟೈ ಮಾಡಿಕೊಂಡಿದೆ.

ಸನ್ಮಾನ: ಪ್ರೊ ಕಬಡ್ಡಿ ಲೀಗ್‌ನ ಹಿರಿಯ ಆಟಗಾರರಾದ ಅನೂಪ್ ಕುಮಾರ್, ಮಂಜಿತ್‌ ಚಿಲ್ಲರ್‌, ಅಜಯ್ ಠಾಕೂರ್‌, ಧರ್ಮರಾಜ್ ಚೇರುಲತಾನ್ ಮತ್ತು ರಿಷಾಂಕ್ ದೇವಾಡಿಗ (ಕರ್ನಾಟಕದವರು) ಅವರಿಗೆ ಚಿನ್ನದ ನಾಣ್ಯದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT