ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಬ್ಯಾಡ್ಮಿಂಟನ್‌ ಟೀಮ್‌ ಸ್ಪರ್ಧೆ: ಭಾರತ ಮಹಿಳೆಯರ ಐತಿಹಾಸಿಕ ಸಾಧನೆ

ಪುರುಷರ ತಂಡಕ್ಕೆ ನಿರಾಸೆ; ಸೆಮಿಫೈನಲ್‌ಗೆ ಸಿಂಧು ಪಡೆ
Published 16 ಫೆಬ್ರುವರಿ 2024, 15:58 IST
Last Updated 16 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ಶಾ ಆಲಂ (ಮಲೇಷ್ಯಾ): ಭಾರತ ಮಹಿಳಾ ತಂಡವು ಶುಕ್ರವಾರ ಬ್ಯಾಡ್ಮಿಂಟನ್ ಏಷ್ಯಾ ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ಹಾಂಗ್‌ಕಾಂಗ್‌ ವಿರುದ್ಧ 3–0ಯಿಂದ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿತು. ಈ ಮೂಲಕ ಇತಿಹಾಸದಲ್ಲೇ ಮೊಟ್ಟಮೊದಲ ಪದಕ ಜಯವನ್ನು ಖಚಿತಪಡಿಸಿಕೊಂಡಿತು. ಆದರೆ, ಪುರುಷರ ತಂಡವು ರೋಚಕ  ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಮುಗ್ಗರಿಸಿತು.

ಗುಂಪು ಹಂತದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಚೀನಾಕ್ಕೆ ಆಘಾತ ನೀಡಿದ್ದ ಭಾರತದ ಆಟಗಾರ್ತಿಯರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ ಅಮೋಘ ಆಟವಾಡಿದರು. ಎರಡು ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಮುಂದಾಳತ್ವದಲ್ಲಿ ಅಶ್ಮಿತಾ ಚಲಿಹಾ, ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಹಾಂಗ್‌ಕಾಂಗ್‌ ಆಟಗಾರ್ತಿಯರನ್ನು ಸದೆಬಡಿದರು.

ಸಿಂಗಲ್ಸ್‌ನಲ್ಲಿ ಸಿಂಧು 21-7, 16-21, 21-12ರಿಂದ ಲೊ ಸಿನ್ ಯಾನ್ ಹ್ಯಾಪಿ ವಿರುದ್ಧ, ಅಶ್ಮಿತಾ 21-12, 21-13 ರಿಂದ ಯೂಂಗ್ ಸಮ್ ಯೀ ವಿರುದ್ಧ ಜಯಿಸಿದರು.  ಡಬಲ್ಸ್‌ನಲ್ಲಿ ಅಶ್ವಿನಿ– ತನಿಶಾ 21-10, 21-14ರಿಂದ ಯೆಂಗ್ ನ್ಗಾ ಟಿಂಗ್ ಮತ್ತು ಯೆಂಗ್‌ ಪುಯಿ ಲ್ಯಾಮ್ ಅವರನ್ನು ಹಿಮ್ಮೆಟ್ಟಿಸಿದರು.

ಸೆಮಿಫೈನಲ್‌ನಲ್ಲಿ ಭಾರತ ತಂಡವು ಬಲಿಷ್ಠ ಜಪಾನ್‌ ತಂಡವನ್ನು ಎದುರಿಸಲಿದೆ. ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ ತಂಡವು 3–2ರಿಂದ ಚೀನಾವನ್ನು ಮಣಿಸಿತು. 2016 ಮತ್ತು 2020ರ ಆವೃತ್ತಿಗಳಲ್ಲಿ ಭಾರತ ಪುರುಷರ ತಂಡವು ಕಂಚಿನ ಪದಕ ಜಯಿಸಿತ್ತು. ಇದೇ ಮೊದಲ ಬಾರಿ ಮಹಿಳಾ ತಂಡ ಪದಕವನ್ನು ಖಚಿತಪಡಿಸಿಕೊಂಡಿದೆ.

ಪುರುಷರಿಗೆ ಸೋಲು:

ಇದೇ ವೇಳೆ ಭಾರತದ ಪುರುಷರ ತಂಡವು 2–3ರಿಂದ ಜಪಾನ್‌ ತಂಡಕ್ಕೆ ಮಣಿಯಿತು. ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ 21-19, 22-20 ರಿಂದ ಕೊಕೊ ವಟನಾಬೆ ವಿರುದ್ಧ ಜಯ ಪಡೆದರೆ, ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿಯು 21-15, 21-17ರಿಂದ ಕೆನ್ಯಾ ಮಿತ್ಸುಹಾಶಿ ಮತ್ತು ಹಿರೋಕಿ ಒಕಮುರಾ ಜಯಭೇರಿ ಸಾಧಿಸಿತು.

ಆದರೆ, ಇತರ ಸಿಂಗಲ್ಸ್‌ ಹಣಾಹಣಿಯಲ್ಲಿ ಕಿದಂಬಿ ಶ್ರೀಕಾಂತ್‌ 21–17, 9–21, 20–22ರಿಂದ ಕೆಂಟೊ ಮೊಮೊಟಾ ಅವರಿಗೆ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು 16–21, 24–26ರಿಂದ ಕೆಂಟೊ ನಿಶಿಮೊಟೊ ಅವರಿಗೆ ಶರಣಾದರು.

ಗೆಲುವಿನ ಸಂಭ್ರಮದಲ್ಲಿ ಪಿ.ವಿ. ಸಿಂಧು –ಎಕ್ಸ್‌ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಪಿ.ವಿ. ಸಿಂಧು –ಎಕ್ಸ್‌ ಚಿತ್ರ

ಡಬಲ್ಸ್‌ನಲ್ಲಿ ಎಂ.ಆರ್‌. ಅರ್ಜುನ್‌ ಮತ್ತು ಧ್ರುವ ಕಪಿಲಾ ಜೋಡಿಯು 17–21, 15–21ರಿಂದ ಅಕಿರಾ ಕೋಗಾ ಮತ್ತು ಕಝುಕಿ ಶಿಬಾಟಾ ವಿರುದ್ಧ ಮುಗ್ಗರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT