ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಯಟ್‌ ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌: ಅಂತಿಮ ಸುತ್ತು 25ಕ್ಕೆ

Published 21 ಫೆಬ್ರುವರಿ 2024, 16:33 IST
Last Updated 21 ಫೆಬ್ರುವರಿ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ಸಿಯಟ್‌ ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌ (ಐಎಸ್‌ಆರ್‌ಎಲ್‌) ಸೀಸನ್‌ 1ರ ಮೂರನೇ ಹಾಗೂ ಅಂತಿಮ ಸುತ್ತಿನ ಗ್ರ್ಯಾಂಡ್‌ ಫಿನಾಲೆ ಇದೇ 25ರಂದು (ಭಾನುವಾರ) ಬೆಂಗಳೂರಿನ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಚಿಕ್ಕಜಾಲದ ಬಯಲು ಪ್ರದೇಶದಲ್ಲಿ (ಫ್ಲೋಟಿಂಗ್‌ ವಾಲ್ಸ್‌ ಹಿಂಭಾಗ) ಏರ್ಪಡಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಗ್ರ್ಯಾಂಡ್‌ ಫಿನಾಲೆ ಕುರಿತು ಮಾತನಾಡಿದ, ಸಿಯಟ್ ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌ನ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ವೀರಪಟೇಲ್‌, ‘ಈಗಾಗಲೇ ಸೀಸನ್‌ ಒಂದು ಮತ್ತು ಎರಡನ್ನು ಕ್ರಮವಾಗಿ ಪುಣೆ ಹಾಗೂ ಅಹಮದಾಬಾದ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈಗ ಮೂರನೇ ಸುತ್ತನ್ನು ಬೆಂಗಳೂರಲ್ಲಿ ಹಮ್ಮಿಕೊಂಡಿದ್ದು, ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ರೇಸ್ ಆರಂಭವಾಗಲಿದೆ’ ಎಂದು ಹೇಳಿದರು.

ಮೊದಲ ಎರಡು ಲೆಗ್‌ನ ಸ್ಪರ್ಧೆಗಳು ಚಾಲಕರ ಕೌಶಲ ಮತ್ತು ವೇಗದ ಜೊತೆಗೆ ಭಾರತವನ್ನು ಸೂಪರ್‌ಕ್ರಾಸ್‌ನ ಕೇಂದ್ರಸ್ಥಾನವಾಗಿ ಗುರುತಿಸುವಲ್ಲಿ ನೆರವಾಗಿದೆ ಎಂದರು.

ಪ್ರಮುಖ ತಂಡಗಳಾದ ಬಿಗ್‌ರಾಕ್ ಮೋಟಾರ್ ಸ್ಪೋರ್ಟ್ಸ್‌, ಬಿಬಿ ರೇಸಿಂಗ್ ಮತ್ತು ಮೋಹಿತೆಸ್‌ ರೇಸಿಂಗ್ ಟೀಮ್ ಮೊದಲ ಎರಡು ಸುತ್ತುಗಳಲ್ಲಿ ಹೋರಾಟ ನಡೆಸಿದ್ದವು. ಈಗ ನಿರ್ಣಾಯಕ ಸುತ್ತಿನಲ್ಲೂ ಪ್ರಮುಖ ತಂಡಗಳ ನಡುವೆ ಪೈಪೋಟಿ ನಿರೀಕ್ಷಿಸಲಾಗಿದೆ.

450 ಸಿಸಿ ಇಂಟರ್‌ನ್ಯಾಷನಲ್‌ ರೈಡರ್ಸ್‌, 250 ಸಿಸಿ ಇಂಟರ್‌ನ್ಯಾಷನಲ್‌ ರೈಡರ್ಸ್‌, 250 ಸಿಸಿ ಇಂಡಿಯಾ–ಏಷ್ಯಾ ಮಿಕ್ಸ್‌ ಮತ್ತು 85 ಸಿಸಿ ಜ್ಯೂನಿಯರ್‌ ಕ್ಲಾಸ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವೀರಪಟೇಲ್‌, ಈ ಸ್ಪರ್ಧೆಯನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಆದರೆ ಅಲ್ಲಿ ರೈತರ ಪ್ರತಿಭಟನೆ ಕಾರಣ ಬೆಂಗಳೂರಲ್ಲಿ ಆಯೋಜನೆ ಮಾಡಲಾಗಿದೆ ಎಂದರು.

ಇಬ್ಬರು ಮಹಿಳೆಯರು ಸೇರಿದಂತೆ ವಿವಿಧ ದೇಶದ ಒಟ್ಟು 48  ರೈಡರ್‌ಗಳು ಭಾಗವಹಿಸಲಿದ್ದಾರೆ. ಇದರಲ್ಲಿ 14 ಜನ ಭಾರತೀಯರಿದ್ದಾರೆ. ವಿಜೇತ ತಂಡಕ್ಕೆ ₹1 ಕೋಟಿ ಬಹುಮಾನವಿದೆ. ರೇಸ್‌ ವೀಕ್ಷಣೆಯ ಟಿಕೆಟ್‌ ದರ ₹250 ಇದೆ. ಬುಕ್‌ ಮೈ ಷೊ ಅಥವಾ ಸ್ಥಳದಲ್ಲೇ ಖರಿದೀಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT