ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲಿಬಾಲ್ | ಫೈನಲ್‌ಗೆ ಇಟಲಿಯ ಪೆರುಗಿಯಾ

ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌
Published 9 ಡಿಸೆಂಬರ್ 2023, 16:35 IST
Last Updated 9 ಡಿಸೆಂಬರ್ 2023, 16:35 IST
ಅಕ್ಷರ ಗಾತ್ರ

ಬೆಂಗಳೂರು: ಹಾಲಿ ಚಾಂಪಿಯನ್ ಇಟಲಿಯ ಸರ್ ಸಿಕೋಮಾ ಪೆರುಗಿಯಾ ತಂಡ ಸೆಮಿಫೈನಲ್‌ನಲ್ಲಿ 3-0 ನೇರ ಸೆಟ್‌ಗಳಿಂದ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬು (ಕ್ಲಬ್‌) ವಿರುದ್ಧ ಜಯಗಳಿಸಿ ವಾಲಿಬಾಲ್ ಪುರುಷರ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಇಟಲಿಯ ಕ್ಲಬ್‌ 25-14, 25-16, 31-29 ರಿಂದ ಟರ್ಕಿಯ ಕ್ಲಬ್‌ ಮೇಲೆ ಜಯಗಳಿಸಿತು. ಈ ಪಂದ್ಯಾವಳಿಯಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದ ಮೂರನೇ ತಂಡವಾಗುವ ಗುರಿಯತ್ತ ಹೆಜ್ಜೆಯಿಟ್ಟಿರುವ ಇಟಲಿಯ ಕ್ಲಬ್‌ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದೂ ಸೆಟ್‌ ಕಳೆದುಕೊಂಡಿಲ್ಲ.

ಸಿಮೋನ್ ಗಿಯಾನೆಲ್ಲಿ, ಫ್ಲೇವಿಯೊ ರೆಸೆಂಡೆ ಮತ್ತು ಸೆಬಾಸ್ಟಿಯನ್ ಸೋಲ್ ಅವರಂತಹ ಆಟಗಾರರನ್ನು ಹೊಂದಿರುವ ಪೆರುಗಿಯಾ ತಂಡ ಆರಂಭದಿಂದಲೇ ಮುನ್ನಡೆ ಪಡೆಯಿತು.  ಮೊದಲ ಸೆಟ್‌ಅನ್ನು ಕೇವಲ 22 ನಿಮಿಷಗಳಲ್ಲಿ ಪಡೆಯಿತು. ಎರಡನೇ ಸೆಟ್‌ನಲ್ಲಿ ನಿಮಿರ್ ಅಬ್ದೆಲ್-ಅಜೀಜ್ ಮತ್ತು ಎರ್ವಿನ್ ಎನ್ಗಪೆತ್ ಅವರ ಬ್ಯಾಕ್-ಕೋರ್ಟ್ ಸ್ಪೈಕ್‌ಗಳಿಂದ ಇಟಲಿ ಮೇಲುಗೈ ಸಾಧಿಸಿತು.

ಮೂರನೇ ಸೆಟ್ ನ ಆರಂಭದಲ್ಲಿ ಪೆರುಗಿಯಾದ ಆಟದ ಮಟ್ಟ ಸ್ವಲ್ಪ ಕುಸಿಯಿತು. ಇದು ಹಾಲಿ ಚಾಂಪಿಯನ್ ಮೇಲೆ ಒತ್ತಡ ಹೇರಲು ಹಾಲ್ಕ್ ಬ್ಯಾಂಕ್ ಕ್ಲಬ್‌ಗೆ ಅವಕಾಶ ಮಾಡಿಕೊಟ್ಟಿತು. ಟರ್ಕಿಯ ತಂಡವು ನಾಲ್ಕು ಸೆಟ್ ಪಾಯಿಂಟ್ ಗಳನ್ನು ಗಳಿಸಿತು ಆದರೆ ಅವುಗಳನ್ನು ಪರಿವರ್ತಿಸಲು ವಿಫಲವಾಯಿತು. ಹೋರಾಟದ ನಂತರ ಇಟಲಿ ನಿರ್ಣಾಯಕ ಸೆಟ್‌ ಮತ್ತು ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಪೆರುಗಿಯಾ ಪರ ಸೆಮೆನಿಕ್ 15 ಅಂಕಗಳನ್ನು ಗಳಿಸಿದರೆ, ಹೆರೆರಾ 13 ಅಂಕಗಳೊಂದಿಗೆ ಉತ್ತಮ ಬೆಂಬಲ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT