ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಚೆಸ್ ಚಾಂಪಿಯನ್‌ಷಿಪ್‌: ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ದೆಹಲಿ

ಗುಕೇಶ್‌– ಲಿರೆನ್ ಪಂದ್ಯ
Published 1 ಜೂನ್ 2024, 16:18 IST
Last Updated 1 ಜೂನ್ 2024, 16:18 IST
ಅಕ್ಷರ ಗಾತ್ರ

ನವದೆಹಲಿ: ಹದಿಹರೆಯದ ಚೆಸ್‌ ತಾರೆ ಭಾರತದ ಡಿ.ಗುಕೇಶ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ನಡುವಣ ನಡೆಯಲಿರುವ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಆತಿಥ್ಯಕ್ಕೆ ದೆಹಲಿ ಬಿಡ್ ಸಲ್ಲಿಸಿದೆ. ಚೆನ್ನೈ ಮತ್ತು ಸಿಂಗಪುರ ಈಗಾಗಲೇ ಬಿಡ್ ಸಲ್ಲಿಸಿವೆ.

ಅಖಿಲ ಭಾರತ ಚೆಸ್ ಫೆಡರೇಷನ್ ದೆಹಲಿ ಬಿಡ್‌ ಅನ್ನು ಬೆಂಬಲಿಸಿದೆ.‌ 

‘ಮೂರು ನಗರಗಳು ತಮ್ಮ ಬಿಡ್‌ಗಳನ್ನು ಸಲ್ಲಿಸಿವೆ ಮತ್ತು ಮಾನದಂಡಗಳನ್ನು ಪೂರೈಸಿವೆ. ಈ ವರ್ಷದ ನವೆಂಬರ್‌– ಡಿಸೆಂಬರ್‌ನಲ್ಲಿ ನಡೆಯುವ ಚಾಂಪಿಯನ್‌ಷಿಪ್‌ಗೆ ಚೆನ್ನೈ ಮೊದಲು ಬಿಡ್ ಸಲ್ಲಿಸಿದ್ದು, ದೆಹಲಿ ಕೊನೆಯದಾಗಿ ಬಿಡ್‌ ಸಲ್ಲಿಸಿದೆ’  ಎಂದು ವಿಶ್ವ ಚೆಸ್‌ನ ಅಧಿಕೃತ ಸಂಸ್ಥೆಯಾದ ಫಿಡೆ ಸಿಇಒ ಎಮಿಲ್ ಸುತೋವ್‌ಸ್ಕಿ ಶನಿವಾರ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ಮುಂದಿನ ವಾರ ಫಿಡೆ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ವಿವರಗಳನ್ನು ಹಂಚಿಕೊಳ್ಳಲು ಬಿಡ್‌ದಾರರ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಜೂನ್‌ನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸುಟೋವ್ಸ್ಕಿ ಹೇಳಿದರು.

ಚೆನ್ನೈ ಬಿಡ್ ಅನ್ನು ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ, ಅಖಿಲ ಭಾರತ ಚೆಸ್ ಫೆಡರೇಶನ್ ನವದೆಹಲಿಗೆ ಬಿಡ್ ಮಾಡಿದೆ.

 ‘ರಾಷ್ಟ್ರೀಯ ಚೆಸ್ ಫೆಡರೇಷನ್, ನವದೆಹಲಿ ಅನ್ನು ಟೂರ್ನಿಯ ಸ್ಥಳವಾಗಿ ಬಿಡ್ ಮಾಡಿದೆ ಮತ್ತು ಕೇಂದ್ರ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ತೆಗೆದುಕೊಳ್ಳಲಾಗಿದೆ’ ಎಂದು ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ತಿಳಿಸಿದ್ದಾರೆ.

‘ಫಿಡೆಗೆ ಬಿಡ್ ಕಳುಹಿಸುವ ಮೊದಲು ತಮಿಳುನಾಡು ಸರ್ಕಾರ ಎಐಸಿಎಫ್ ಅನ್ನು ಸಂಪರ್ಕಿಸಿಲ್ಲ ಅಥವಾ ಅದರ ಬಗ್ಗೆ (ಚೆನ್ನೈ ಟೂರ್ನಿಯ ಸ್ಥಳವಾಗಿ) ನಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ’ ಎಂದರು.  

ಏಪ್ರಿಲ್‌ನಲ್ಲಿ ಕೆನಡಾದಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಟೂರ್ನಿಯನ್ನು ಗೆಲ್ಲುವ ಮೂಲಕ ಚೆನ್ನೈನ 17 ವರ್ಷದ ಗುಕೇಶ್‌, ವಿಶ್ವ ಚೆಸ್ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್ ಎನಿಸಿದ್ದರು. 

ಎಐಸಿಎಫ್‌ ಬಿಡ್‌ ಗೆದ್ದಲ್ಲಿ, ಸುಮಾರು ₹71 ಕೋಟಿ ರೂಪಾಯಿ ನೀಡಬೇಕಾಗುತ್ತದೆ. ಟೂರ್ನಿಯ ಅವಧಿ 25 ದಿನಗಳದ್ದು. ನಿಯಮಗಳನ್ನು ಜುಲೈ 1ರೊಳಗೆ ಪೂರ್ಣಗೊಳಿಸಲಾಗುತ್ತದೆ.‌ 

ಒಟ್ಟು ಬಹುಮಾನ ನಿಧಿ ₹20 ಕೋಟಿಗೂ ಅಧಿಕ ಇರಲಿದೆ. ಇದು 2023ರ ಚಾಂಪಿಯನ್‌ಷಿಪ್‌ಗಿಂತ (ಆಗ ₹17 ಕೋಟಿ) ಅಧಿಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT