ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಸ್ಮ್ಯಾಷರ್ಸ್‌ಗೆ ಎಲೆನಾ ಟಿಮಿನಾ ಕೋಚ್‌

Published 3 ಜೂನ್ 2024, 16:16 IST
Last Updated 3 ಜೂನ್ 2024, 16:16 IST
ಅಕ್ಷರ ಗಾತ್ರ

ಮುಂಬೈ: ನಾಲ್ಕು ಬಾರಿಯ ಒಲಿಂಪಿಯನ್ ಎಲೆನಾ ಟಿಮಿನಾ ಅವರು ಯುಟಿಟಿ (ಅಲ್ಟಿಮೇಟ್ ಟೇಬಲ್ ಟೆನಿಸ್‌) ಐದನೇ ಆವೃತ್ತಿಯಲ್ಲಿ ಬೆಂಗಳೂರು ಸ್ಮ್ಯಾಷರ್ಸ್‌ ತಂಡಕ್ಕೆ ಮಾರ್ಗದರ್ಶನ ನೀಡುವರು.

ನೆದರ್ಲೆಂಡ್ಸ್‌ನ ಟಿಮಿನಾ ಅವರು ಕಳೆದ ಆವೃತ್ತಿಯಲ್ಲಿ ಗೋವಾ ಚಾಲೆಂಜರ್ಸ್‌ನ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದು, ಆ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಎಂಟು ಫ್ರಾಂಚೈಸಿಗಳು ಸೋಮವಾರ ಇಲ್ಲಿ ಕೋಚ್‌ಗಳ ಡ್ರಾಫ್ಟ್ ಈವೆಂಟ್‌ನಲ್ಲಿ ತಲಾ ಒಂದೊಂದು ವಿದೇಶಿ ಮತ್ತು ಭಾರತೀಯ ಕೋಚ್‌ಗಳನ್ನು ಆಯ್ಕೆ ಮಾಡಿಕೊಂಡವು. ಅನುಭವಿ ಫ್ರಾನ್ಸಿಸ್ಕೊ ​​ಸ್ಯಾಂಟೋಸ್ ಅವರನ್ನು ಅಹಮದಾಬಾದ್ ಎಸ್.ಜಿ. ಪೈಪರ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದು ಫ್ರಾನ್ಸಿಸ್ಕೊ ಅವರಿಗೆ ಐದನೇ ಯುಟಿಟಿ ಆವೃತ್ತಿಯಾಗಿದೆ.

ಯು ಮುಂಬಾ ತಂಡವು ಅನ್ಶುಲ್ ಗಾರ್ಗ್ (ಭಾರತೀಯ ಕೋಚ್‌) ಅವರನ್ನು ಉಳಿಸಿಕೊಂಡು, ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಜಾನ್ ಮರ್ಫಿ ಅವರನ್ನು ಆಯ್ಕೆ ಮಾಡಿಕೊಂಡಿತು.

ಗೋವಾ ಚಾಲೆಂಜರ್ಸ್ ತಂಡವು ಹಂಗೇರಿಯ ಮಹಿಳಾ ತಂಡದ ಕೋಚ್ ಝೋಲ್ಟಾನ್ ಬರ್ಟೋಫಿ ಅವರನ್ನು ಆಯ್ಕೆ ಮಾಡಿದರೆ, ಚೆನ್ನೈ ಲಯನ್ಸ್ ತಂಡವು ಸ್ವೀಡನ್‌ನ ರಾಷ್ಟ್ರೀಯ ತಂಡದ ಮುಖ್ಯ ಕೋಚ್‌ ಟೋಬಿಯಾಸ್ ಬರ್ಗ್‌ಮನ್ ಅವರನ್ನು ತೆಕ್ಕೆಗೆ ಹಾಕಿಕೊಂಡಿತು.

ಸಚಿನ್ ಶೆಟ್ಟಿ ಮತ್ತು ಸೋಮನಾಥ್ ಘೋಷ್ ಅವರು ಕ್ರಮವಾಗಿ ದಬಾಂಗ್ ಡೆಲ್ಲಿ ಟಿಟಿಸಿ ಮತ್ತು ಜೈಪುರ ಪೇಟ್ರಿಯಾಟ್ಸ್ ತಂಡಗಳಿಗೆ ಭಾರತೀಯ ಕೋಚ್‌ಗಳಾಗಿ ಆಯ್ಕೆಯಾದರು.

ನಾಲ್ವರು ಭಾರತೀಯ ಕೋಚ್‌ಗಳು ಈ ಆವೃತ್ತಿಯಲ್ಲಿ ಯುಟಿಟಿಗೆ ಪದಾರ್ಪಣೆ ಮಾಡುವರು. ಜೇ ಮೋದಕ್ ಅವರು ಅಹಮದಾಬಾದ್ ತಂಡಕ್ಕೆ, ಅನ್ಷುಮನ್ ರಾಯ್ ಅವರು ಬೆಂಗಳೂರು ತಂಡಕ್ಕೆ, ರಾಷ್ಟ್ರೀಯ ಮಾಚಿ ಚಾಂಪಿಯನ್ ಶುಭಜಿತ್ ಸಹಾ ಅವರು ಗೋವಾ ಚಾಲೆಂಜರ್ಸ್‌ ತಂಡಕ್ಕೆ ಮತ್ತು ಸುಬಿನ್ ಕುಮಾರ್ ಅವರು ಚೆನ್ನೈ ಲಯನ್ಸ್‌ ತಂಡಕ್ಕೆ ಮಾರ್ಗದರ್ಶನ ನೀಡುವರು.

ಐದನೇ ಆವೃತ್ತಿಯು ಆ.22ರಿಂದ ಸೆ.7 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ಲೀಗ್‌ನಲ್ಲಿ ಮೊದಲ ಬಾರಿಗೆ ಆರು ತಂಡಗಳು ಸೆಣಸಾಟ ನಡೆಸಲಿವೆ. ಈ ಹಿಂದೆ 6 ತಂಡಗಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT