ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ಬಾರಿಯ ಹಾಕಿ ಟೂರ್ನಿಗೆ ನಾಲ್ಕುನಾಡು ಸಜ್ಜು

ನಾಪೋಕ್ಲುವಿನಲ್ಲಿ ನಡೆಯಲಿದೆ ಕೊಡವ ಕೌಟುಂಬಿಕ ಹಾಕಿ ಟೂರ್ನಿ
ಸಿ.ಎಸ್.ಸುರೇಶ್
Published 27 ಮಾರ್ಚ್ 2024, 5:56 IST
Last Updated 27 ಮಾರ್ಚ್ 2024, 5:56 IST
ಅಕ್ಷರ ಗಾತ್ರ

ನಾಪೋಕ್ಲು: ನಾಲ್ಕು ನಾಡಿನಲ್ಲಿ ಹಾಕಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಕ್ಕಳು, ಹಿರಿಯರು, ಯುವಕರು ಎಲ್ಲರೂ ಒಂದಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸುವ ದಿನಗಳು ಹತ್ತಿರದಲ್ಲಿವೆ. ಇದು ಇಲ್ಲಿ ನಡೆಯುವ 5ನೇ ಹಾಕಿ ಉತ್ಸವವಾಗಿದೆ.

2003ರಲ್ಲಿ ನಾಪೋಕ್ಲುವಿನಲ್ಲಿ ಕಲಿಯಂಡ ಕುಟುಂಬದವರು ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ನಡೆಸುವುದರೊಂದಿಗೆ ನಾಲ್ಕುನಾಡಿನ ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡಿದ್ದರು.

ನಂತರ, 14 ವರ್ಷಗಳ ಬಳಿಕ ಬಿದ್ದಾಟಂಡ ಕುಟುಂಬಸ್ಥರು 2017ರಲ್ಲಿ ಹಾಕಿ ಉತ್ಸವದ ಸಾರಥ್ಯ ವಹಿಸಿದರು. 2018ರಲ್ಲಿ ಕುಲ್ಲೇಟಿರ ಕಪ್ ಸಹ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು. 2023ರಲ್ಲಿ 4ನೇ ಟೂರ್ನಿ ಆಯೋಜಿಸುವ ಜವಾಬ್ಧಾರಿ ಅಪ್ಪಚೆಟ್ಟೋಳಂಡ ಕುಟುಂಬ ವಹಿಸಿಕೊಂಡಿದ್ದರೆ, ಈ ವರ್ಷವೂ ನಾಪೋಕ್ಲುವಿನಲ್ಲಿ ಕುಂಡ್ಯೋಳಂಡ ಕುಟುಂಬದ ನೇತೃತ್ವದಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿ ನಡೆಯಲಿದೆ. ಅತಿ ಹೆಚ್ಚು ಟೂರ್ನಿ ನಡೆಸಿದ ಪೊನ್ನಂಪೇಟೆಯ ದಾಖಲೆಯನ್ನು ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣವೂ ಸರಿಗಟ್ಟಲು ಮುಂದಡಿ ಇಟ್ಟಿದೆ.

ಕೊಡವ ಕುಟುಂಬಗಳ ನಡುವಿನ ಈ ಹಾಕಿ ಪಂದ್ಯಾವಳಿಯು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌’ನಲ್ಲಿ ಸ್ಥಾನ ಪಡೆದಿದೆ. ಇದೀಗ 24ನೇ ವರ್ಷದ ಹಾಕಿ ಉತ್ಸವವನ್ನು ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಡ್ಯೋಳಂಡ ಕುಟುಂಬಸ್ಥರು ಆಯೋಜಿಸಲು ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ. ಮಾರ್ಚ್ 30ರಿಂದ ಟೂರ್ನಿ ಆರಂಭಗೊಳ್ಳಲಿದೆ.

ಮೊದಲ ಟೂರ್ನಿ ನಡೆದಾಗ ಭಾಗವಹಿಸಿದ್ದು ಕೇವಲ 16 ತಂಡಗಳು. ಕರಡ ಗ್ರಾಮದ ಸಹಕಾರದೊಂದಿಗೆ 1997ರಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡಂಡ ಕುಟ್ಟಪ್ಪ ಹಾಗೂ ಶಿಕ್ಷಕರಾಗಿದ್ದ ಸಹೋದರ ಕಾಶಿ ತಮ್ಮ ತಂದೆ ಮುದ್ದಪ್ಪ ಅವರ ನೆನಪಿನಾರ್ಥ ಕೊಡವ ಕುಟುಂಬಗಳ ನಡುವೆ ಹಾಕಿ ಟೂರ್ನಿ ಆರಂಭಿಸಿದರು. ನಂತರ, ಪಕ್ಕದ ಗ್ರಾಮವಾದ ಅರಪಟ್ಟುವಿನಲ್ಲಿ ಕೋಡಿರ ಪ್ರವೀಣ್ ಅವರು ತಮ್ಮ ಕುಟುಂಬದ ಸಹಕಾರದೊಂದಿಗೆ ಎರಡನೇ ವರ್ಷದ ಹಾಕಿ ಟೂರ್ನಿಯನ್ನು ನಡೆಸಿದರು. ಹೀಗೆ, ಪ್ರತಿವರ್ಷ ತಂಡಗಳು ಹೆಚ್ಚುತ್ತಾ ಕೊಡಗಿನ ಪ್ರಮುಖ ಹಬ್ಬವಾಯಿತು.

ಇದುವರೆಗೆ 23 ಕೊಡವ ಹಾಕಿ ಟೂರ್ನಿಗಳನ್ನು ಆಯೋಜಿಸಲಾಗಿದ್ದು, 24ನೇ ಹಾಕಿ ಉತ್ಸವದಲ್ಲಿ ಅತಿ ಹೆಚ್ಚಿನ ಕೊಡವ ಕುಟುಂಬಗಳು ಪಾಲ್ಗೊಳ್ಳುತ್ತಿವೆ. 1997ರಲ್ಲಿ ಕರಡದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಕೊಡವ ಕೌಟುಂಬಿಕ ಹಾಕಿ ಉತ್ಸವ ಪಾಂಡ೦ಡ ಕಪ್‌ನಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಬಳಿಕ, 1998ರಲ್ಲಿ ಕಡಗದಲ್ಲಿ ನಡೆದ ಕೋಡಿರ ಕಪ್‌ನಲ್ಲಿ 116 ತಂಡಗಳು ಪಾಲ್ಗೊಂಡಿದ್ದವು. ನಂತರದ ವರ್ಷದಲ್ಲಿ ಕಾಕೋಟು ಪರಂಬುವಿನಲ್ಲಿ ನಡೆದ ಬಲ್ಲಚಂಡ ಕಪ್‌ನಲ್ಲಿ 140 ತಂಡಗಳು ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರ ಕಪ್‌ನಲ್ಲಿ 170 ತಂಡಗಳು ಪಾಲ್ಗೊಂಡಿದ್ದು, ಕುಲ್ಲೇಟಿರ ಕಪ್‌ನಲ್ಲಿ 320 ತಂಡಗಳು ಪಾಲ್ಗೊಂಡಿದ್ದವು. ಕಳೆದ ವರ್ಷ 336 ತಂಡಗಳು ಭಾಗವಹಿಸಿದ್ದವು.

ಇದುವರೆಗೆ ನಡೆದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಳಂಗಂಡ ತಂಡ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕೊಡವ ಹಾಕಿ ಉತ್ಸವದಲ್ಲಿ ದಾಖಲೆ ನಿರ್ಮಿಸಿದೆ. ಕೂತಂಡ ತಂಡವು 4 ಬಾರಿ ಕಲಿಯಂಡ, ಕುಲ್ಲೇಟಿರ, ನೆಲ್ಲ ಮಕ್ಕಡ ತಂಡಗಳು ಕ್ರಮವಾಗಿ 3 ಬಾರಿ ಅಂಜಪರವಂಡ, ಮಂಡೆಪಂಡ, ಕುಪ್ಪಂಡ (ಕೈಕೇರಿ) ತಂಡಗಳು ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ. ಈ ಬಾರಿಯ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಬಿರುಸಿನ ಸಿದ್ಧತೆಗಳಾಗುತ್ತಿದ್ದು, ಹಾಕಿ ಉತ್ಸವವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕುಂಡ್ಯೋಳಂಡ ಕುಟುಂಬ ಭರದ ಸಿದ್ಧತೆ ನಡೆಸಿದೆ.

ಮೊದಲ ಟೂರ್ನಿ ನಡೆದಾಗ ಭಾಗವಹಿಸಿದ್ದು ಕೇವಲ 16 ತಂಡಗಳು ಈ ಬಾರಿ 360 ತಂಡಗಳ ನೋಂದಣಿ ಭರದಿಂದ ನಡೆದಿದೆ ಸಿದ್ಧತಾ ಕಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT