ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಲಿಂಪಿಕ್ಸ್‌ ಉದ್ಘಾಟನೆ ಸಮಾರಂಭ: 3 ಲಕ್ಷ ಮಂದಿಗೆ ಅವಕಾಶ ಸಾಧ್ಯ’

ಮೂಲ ಯೋಜನೆಯ ಅರ್ಧದಷ್ಟು ಕಡಿಮೆ
Published 31 ಜನವರಿ 2024, 13:36 IST
Last Updated 31 ಜನವರಿ 2024, 13:36 IST
ಅಕ್ಷರ ಗಾತ್ರ

ಪ್ಯಾರಿಸ್ (ಎಪಿ): ಪ್ಯಾರಿಸ್‌ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಸುಮಾರು ಮೂರು ಲಕ್ಷ ಮಂದಿ ಪ್ರೇಕ್ಷಕರಿಗೆ ಹಾಜರಾಗಲು ಅವಕಾಶವಾಗಬಹುದು ಎಂದು ಫ್ರಾನ್ಸ್‌ನ ಗೃಹ ಸಚಿವ ಜೆರಾಲ್ಡ್‌ ಡರ್ಮಾನಿನ್ ಅವರು ಹೇಳಿದ್ದಾರೆ. ಇದು ಮೊದಲು ಹಮ್ಮಿಕೊಂಡ ಯೋಜನೆಯ ಪ್ರಮಾಣದ ಸುಮಾರು ಅರ್ಧದಷ್ಟು ಕಡಿಮೆ.

ಸಾಮಾನ್ಯವಾಗಿ ಕ್ರೀಡಾಂಗಣದೊಳಗೆ ನಡೆಯುವ ಉದ್ಘಾಟನಾ ಸಮಾರಂಭ ಸಂಪ್ರದಾಯವನ್ನು ಈ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಮುರಿಯಲಾಗುತ್ತಿದ್ದು, ಸೀನ್ ನದಿಯ ದಂಡೆಯಲ್ಲಿ ಜುಲೈ 26ರಂದು ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭಕ್ಕೆ ಭಾರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾವಿರಾರು ಪೊಲೀಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿದೆ.

ಫ್ರಾನ್ಸ್‌ ರಾಜಧಾನಿಯ ಹೃದಯಭಾಗದಲ್ಲಿರುವ ಸೀನ್ ನದಿಯ ದೋಣಿಗಳಲ್ಲಿ ಅಥ್ಲೀಟುಗಳು ಪಥಸಂಚಲನ ನಡೆಸಲಿದ್ದಾರೆ. ನದಿಯ ಎರಡೂ ದಡಗಳಲ್ಲಿ ಪ್ರೇಕ್ಷಕರಿಗೆ ವೀಕ್ಷಣೆ ವ್ಯವಸ್ಥೆ ಮಾಡಲಾಗಿದ್ದು, ಹಲವು ಹಂತಗಳ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಟಿಕೆಟ್‌ ಖರೀದಿಸಿದ ಒಂದು ಲಕ್ಷ ಮಂದಿಗೆ ನದಿಯ ನೇರ ನೋಟ ಲಭ್ಯವಾಗುವಂತೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ 2,20,000 ಮಂದಿಗೆ ಎತ್ತರಿಸಿದ ಕಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡರ್ಮಾನಿನ್ ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

ಸಂಘಟಕರು ಮೊದಲು, ಉದ್ಘಾಟನಾ ಸಮಾರಂಭಕ್ಕೆ ಆರು ಲಕ್ಷ ಪ್ರೇಕ್ಷಕರಿಗೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದರು. ಆದರೆ ಸಂಖ್ಯೆ ಮೊಟಕುಗೊಳಿಸಿರುವುದಕ್ಕೆ ಕಾರಣ ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT