ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಸೆನ್‌ಹಾಸ್ ಚೆಸ್ ಚಾಲೆಂಜ್‌: ಘಟಾನುಘಟಿಗಳ ಮಣಿಸಿದ ಗುಕೇಶ್

Published 10 ಫೆಬ್ರುವರಿ 2024, 14:08 IST
Last Updated 10 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ವಾಂಗೆಲ್ಸ್‌ (ಜರ್ಮನಿ): ಭಾರತದ ದೊಮ್ಮರಾಜು ಗುಕೇಶ್ ಅವರು ವೈಸೆನ್‌ಹಾಸ್ ಚೆಸ್ ಚಾಲೆಂಜ್‌ನಲ್ಲಿ ಶನಿವಾರ ಹಿನ್ನಡೆಯೊಡನೆ ಅಭಿಯಾನದ ಆರಂಭಿಸಿದರು ನಂತರ ಮೂವರು ಘಟಾನುಘಟಿ ಆಟಗಾರರನ್ನು– ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್, ಅರ್ಮೆನಿಯಾದ ಲೆವೊನ್ ಅರೋನಿಯನ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ಜು ಸೋಲಿಸಿ ಅತ್ಯಮೋಫ ಪ್ರದರ್ಶನ ನೀಡಿದರು.

‌ಗುಕೇಶ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜಾ ಅವರಿಗೆ ಮಣಿದಿದ್ದರು. ಆದರೆ ನಂತರ ಘಟಾನುಘಟಿ ಆಟಗಾರರ ವಿರುದ್ಧ  ಮೂರು ಗೆಲುವುಗಳೊಡನೆ ಗಮನ ಸೆಳೆದರು. ಭಾರತದ ಆಟಗಾರ ಈಗ ರ‍್ಯಾಪಿಡ್ ವಿಭಾಗದ ನಾಲ್ಕು ಸುತ್ತುಗಳಿಂದ ಮೂರು ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ. 3.5 ಪಾಯಿಂಟ್ಸ್‌ ಸಂಗ್ರಹಿಸಿರುವ ವಿನ್ಸೆಂಟ್ ಕೀಮರ್ ಮೊದಲ ಸ್ಥಾನದಲ್ಲಿದ್ದಾರೆ.

ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೊವ್ ಅವರೂ ಅಜೇಯ ಸಾಧನೆಯೊಡನೆ ಮೂರು ಪಾಯಿಂಟ್ಸ್ ಕಲೆಹಾಕಿ, ಗುಕೇಶ್ ಅವರೊದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ನಾರ್ವೆಯ ಕಾರ್ಲ್‌ಸನ್‌, ಫಿರೋಜಾ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನ ಅವರು ಎರಡು ಪಾಯಿಂಟ್ಸ್ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಲೆವೊನ್ ಅರೋನಿಯನ್ ಅರ್ಧ ಪಾಯಿಂಟ್ಸ್ ಗಳಿಸಿ ಏಳನೇ ಸ್ಥಾನದಲ್ಲಿದ್ದರೆ, ಅಚ್ಚರಿಯೆಂಬಂತೆ ಎಲ್ಲಾ ನಾಲ್ಕೂ ಪಂದ್ಯಗಳನ್ನು ಸೋತ ಚೀನಾದ ಡಿಂಗ್ ಲಿರೆನ್ ಕೊನೆಯ ಸ್ಥಾನದಲ್ಲಿದ್ದಾರೆ. ಲಿರೆನ್‌, ಅಬ್ದುಸತ್ತಾರೊವ್ ಮತ್ತು ಕೀಮರ್ ವಿರುದ್ಧ ಪಂದ್ಯದಲ್ಲೂ ಸೋಲನ್ನು ಕಂಡರು.

ಎಂಟು ಮಂದಿ ಆಟಗಾರರ ಈ ಟೂರ್ನಿಯು ₹1.66 ಕೋಟಿ ಬಹುಮಾನ ಮೊತ್ತ ಹೊಂದಿದೆ.

ಗುಕೇಶ್ ವಿರುದ್ಧ ಕಾರ್ಲ್‌ಸನ್ ಪಂದ್ಯ ದಿನದ ಆಕರ್ಷಣೆಯಾಗಿತ್ತು. ಮಧ್ಯಮ ಹಂತದ ನಂತರ ಯಾರೊಬ್ಬರಿಗೆ ಸ್ಪಷ್ಟ ಮೇಲುಗೈ ಇರಲಿಲ್ಲ. ಕೊನೆಯ ಹಂತದಲ್ಲಿ (ಎಂಡ್‌ ಗೇಮ್) ಕಾರ್ಲ್‌ಸನ್ ಅವರ ಕೆಲವು ನಡೆಗಳು ಕರಾರುವಾಕ್ ಆಗಿರಲಿಲ್ಲ. ಅರೋನಿಯನ್, ಗುಕೇಶ್ ವಿರುದ್ಧ ಪಂದ್ಯದಲ್ಲಿ ಪ್ರಮುಖ ಪಡೆಯೊಂದನ್ನು ಕಳೆದುಕೊಂಡರು. ನಂತರ 39 ನಡೆಗಳಲ್ಲಿ ಪಂದ್ಯ ಸೋತರು.

ವಿಶ್ವ ಚಾಂಪಿಯನ್ ಲಿರೆನ್ ವಿರುದ್ಧ ಗುಕೇಶರ್ 37 ನಡೆಗಳಲ್ಲಿ ಜಯಗಳಿಸಿದರು.

ಮೊದಲ ಪಂದ್ಯದಲ್ಲಿ ಗುಕೇಶ್ ವಿರುದ್ಧ ಜಯಗಳಿಸಿದ್ದ ಇರಾನ್ ಸಂಜಾತ ಫಿರೋಝಾ ನಂತರದ ಮೂರು ‍ಪಂದ್ಯಗಳಲ್ಲಿ ಅಂಥದ್ದೇ ಉತ್ತಮ ಆಟ ಆಡಲಿಲ್ಲ.

ರ‍್ಯಾಪಿಡ್ ವಿಭಾಗದಲ್ಲಿ ಇನ್ನೂ ಮೂರು ಸುತ್ತಿನ ಪಂದ್ಯಗಳಿವೆ. ನಂತರ ಕ್ವಾರ್ಟರ್‌ಫೈನಲ್‌ನಲ್ಲಿ ಯಾರು ಯಾರನ್ನು ಎದುರಿಸುವರು ಎಂಬ ಕುತೂಹಲ ಇರಲಿದೆ. ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಆಟಗಾರರು ಮೊದಲ 40 ನಡೆಗಳಿಗೆ 90 ನಿಮಿಷಗಳ ಕಾಲಮಿತಿ ಹೊಂದಿರುತ್ತಾರೆ. ನಂತರ 30 ನಿಮಿಷಗಳಲ್ಲಿ ಪಂದ್ಯ ಮುಗಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT