ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫವಾದ್ ಹಾರ್ಸ್ ಪವರ್‌

Last Updated 5 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ವಿಶ್ವಖ್ಯಾತಿ ಗಳಿಸಿರುವ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದು ತೃಪ್ತಿ ತಂದಿದೆ. ನಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಶ್ರೇಷ್ಠ ವೇದಿಕೆ. ನನ್ನ ಕನಸು ನನಸು ಮಾಡಿಕೊಳ್ಳಲು ಅನುವು ಮಾಡಿದ ಎಂಬೆಸಿ ಅಂತರರಾಷ್ಟ್ರೀಯ ರೈಡಿಂಗ್ ಶಾಲೆಗೆ ಆಭಾರಿಯಾಗಿದ್ದೇನೆ’ -ಕುದುರೆ ರೇಸಿಂಗ್ ಕ್ರೀಡೆಯಲ್ಲಿ ಮಿನುಗುತ್ತಿರುವ ಭಾರತದ ಫವಾದ್ ಮಿರ್ಜಾ ಅವರ ನುಡಿಗಳಿವು. ಇತ್ತೀಚೆಗೆ ನೆದರ್ಲ್ಯಾಂಡ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಎಮೆಲೂರ್ಡ್ ಸಿಐಸಿ 2 ಈಕ್ವೆಸ್ಟ್ರೀಯನ್ ಸ್ಪರ್ಧೆಯಲ್ಲಿ ಚಾಂಪಿಯನ್ ಆದ ನಂತರ ಅವರು ಮಾತನಾಡಿದ್ದರು.

ಹಲವು ರಾಷ್ಟ್ರಗಳಿಂದ ಬಂದಿದ್ದ ಶ್ರೇಷ್ಠ ರೇಸರ್ ಗಳನ್ನು ಹಿಂದಿಕ್ಕಿ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಐದು ವರ್ಷದವರಿದ್ದಾಗಿನಿಂದ ಕುದುರೆ ರೇಸಿಂಗ್ ಮಧ್ಯೆ ಬೆಳೆದ ಫವಾದ್ ಹುಟ್ಟಿದ್ದು ಬೆಂಗಳೂರಿನಲ್ಲಿ. 26 ವರ್ಷದ ಇವರು ಬ್ರಿಟನ್‌ನ ನಾರ್ತಾಂಪ್ಟನ್‌ನಲ್ಲಿರುವ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪದವಿ ಪಡೆದಿದ್ದಾರೆ. ಸದ್ಯ, ಹೆಚ್ಚಿನ ತರಬೇತಿಗಾಗಿ ಅವರು ನೆದರ್ಲ್ಯಾಂಡ್ಸ್‌ನಲ್ಲಿದ್ದಾರೆ. ಬೆಂಗಳೂರಿನ ಎಂಬೆಸಿ ಅಂತರರಾಷ್ಟ್ರೀಯ ರೈಡಿಂಗ್ ಶಾಲೆಯಲ್ಲಿ ಅವರು ತರಬೇತಿ ಪಡೆದಿದ್ದರು.

ಫವಾದ್, ತಮ್ಮ ಎಂಟನೇ ವರ್ಷದಲ್ಲಿ ರೇಸಿಂಗ್ ಸ್ಪರ್ಧೆಯ ಅನುಭವ ಪಡೆದರು. 2000ನೇ ಇಸವಿಯಲ್ಲಿ ನಡೆದ ಸ್ಥಳೀಯ ಹಾರ್ಸ್ ಶೋ ಒಂದರಲ್ಲಿ ಸ್ಪರ್ಧಿಸಿದರು. ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ. 2002ರ ಹೊತ್ತಿಗೆ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಭಾಗಿಯಾದರು.

‘ಎಲ್ ದೊರಾಡೊ, ಪೊಲಿನಾ ಎಂಬ ಹೆಸರಿನ ಕುದುರೆಗಳನ್ನು ನನ್ನ ಮೊದಲ ಕೆಲವು ರೇಸಿಂಗ್ ಸ್ಪರ್ಧೆಗಳಲ್ಲಿ ಬಳಸಿದ್ದೆ. ಈ ರಂಗದಲ್ಲಿರುವ ಎಲ್ಲರಿಗೂ ತಾವು ಬಳಸುವ ಕೆಲವು ಕುದುರೆಗಳ ಬಗ್ಗೆ ವಿಶೇಷ ಒಲವಿರುತ್ತದೆ. ಹಾಗೆಯೇ, ರೇಸಿಂಗ್ ಅಂಗಳದ ಮೊದಲ ಅನುಭವಗಳಲ್ಲಿ ನನ್ನೊಂದಿಗೆ ಭಾಗಿಯಾದ ಆ ಎರಡು ಕುದುರೆಗಳು ನನ್ನ ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ’ ಎಂದು ಫವಾದ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

‘ಎಂಬೆಸಿ ರೈಡಿಂಗ್ ಶಾಲೆಯಲ್ಲಿ ಪಡೆದ ತರಬೇತಿ ನನಗೆ ಭದ್ರ ಬುನಾದಿ ಒದಗಿಸಿತು. ಅಲ್ಲಿ, ಭಾರತದ ಶ್ರೇಷ್ಠ ಕುದುರೆ ರೇಸಿಂಗ್ ಪಟುಗಳಾದ ಅಜಯ್ ಅಪ್ಪಚ್ಚು ಹಾಗೂ ನಾಡಿಯಾ ಹರಿದಾಸ್ ಅವರಿಂದ ಮಾರ್ಗದರ್ಶನ ಪಡೆದೆ. ಈ ಕ್ರೀಡೆಗೆ ಅಗತ್ಯವಾದ ತಂತ್ರಗಾರಿಕೆಯನ್ನು ಕಲಿಯಲು ಅವರ ಸಲಹೆಗಳು ದೊಡ್ಡ ಮಟ್ಟದಲ್ಲಿ ನೆರವು ನೀಡಿವೆ. ಹಾಗೆಯೇ, ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ಬೆಂಗಳೂರು, ನನ್ನ ಸಾಧನೆಗೆ ನೀರೆರೆದು ಪೋಷಿಸಿದೆ ಎಂಬುದು ಸುಳ್ಳಲ್ಲ’ ಎಂದು ಫವಾದ್ ಅದೇ ಸಂದರ್ಶನದಲ್ಲಿ ಹೇಳಿದ್ದರು.

ಫವಾದ್ ಇಲ್ಲಿಯವರೆಗೂ ಸ್ಥಳೀಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ 31 ಚಿನ್ನ, 16 ಬೆಳ್ಳಿ, 22 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

2014ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕಪ್‌ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದರು. ಅದರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಮೊದಲ ಬಾರಿ ಉತ್ತಮ ಸಾಧನೆ ಮಾಡಿದ್ದರು.

ಸದ್ಯ, ಭಾರತದ ಪ್ರಮುಖ ಈಕ್ವೆಸ್ಟ್ರೀಯನ್ ರೇಸಿಂಗ್ ಪಟುವಾಗಿರುವ ಅವರಿಗೆ, ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಇರಾದೆ ಇದೆ. ಆ ಮೂಲಕ ಭಾರತದ ಕುದುರೆ ರೇಸಿಂಗ್ ಜಗತ್ತಿನ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಬೇಕೆಂಬ ಆಕಾಕ್ಷೆ ಹೊಂದಿದ್ದಾರೆ.

ಕ್ರಾಸ್ ಕಂಟ್ರಿಯಲ್ಲಿ ಸಾಧನೆ
ಡ್ರೆಸ್ಸೆಜ್ ಟೆಸ್ಟ್, ಶೋ ಜಂಪಿಂಗ್, ಕ್ರಾಸ್ ಕಂಟ್ರಿ ಎಂಬ ಮೂರು ಹಂತಗಳಲ್ಲಿ ನಡೆದ ಎಮೆಲೂರ್ಡ್ ಸಿಐಸಿ 2 ಈಕ್ವೆಸ್ಟ್ರೀಯನ್ ಸ್ಪರ್ಧೆಯಲ್ಲಿ ಫವಾದ್, 35.20 ಪೆನಾಲ್ಟಿ ಸ್ಕೋರ್ ಗಳಿಸಿದರು. ಎಂಟು ರಾಷ್ಟ್ರಗಳಿಂದ 23 ರೈಡರ್‌ಗಳು ಇದರಲ್ಲಿ ಸ್ಪರ್ಧಿಸಿದ್ದರು. ಮೊದಲ ಎರಡು ಹಂತಗಳಲ್ಲಿ ಹಿನ್ನೆಡೆ ಅನುಭವಿಸಿದ ಭಾರತದ ಪ್ರತಿಭೆ, ಕ್ರಾಸ್ ಕಂಟ್ರಿಯಲ್ಲಿ ಅಮೋಘ ಸಾಧನೆ ಮಾಡಿ ಅಗ್ರಸ್ಥಾನಕ್ಕೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT