ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ರ‍್ಯಾಂಕಿಂಗ್: ನಾಲ್ಕನೇ ಸ್ಥಾನಕ್ಕೆ ಇಳಿದ ಭಾರತ ತಂಡ

Published 12 ಮಾರ್ಚ್ 2024, 13:16 IST
Last Updated 12 ಮಾರ್ಚ್ 2024, 13:16 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡ, ಮಂಗಳವಾರ ಪ್ರಕಟವಾದ ಎಫ್‌ಐಎಚ್‌ ಪುರುಷರ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಎಫ್‌ಐಎಚ್‌ ಹಾಕಿ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ತೋರಿದ ಉತ್ತಮ ಸಾಧನೆಯಿಂದ ಜರ್ಮನಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಆಧಾರದಲ್ಲಿ ಭಾರತ ತಂಡ (2761 ಪಾಯಿಂಟ್ಸ್‌) ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಸಂಪಾದಿಸಿದೆ. ಹೀಗಾಗಿ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಆಡುವ ಅಗತ್ಯ ಬಿದ್ದಿರಲಿಲ್ಲ. ಒಮಾನ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಜರ್ಮನಿ ಅಜೇಯ ಸಾಧನೆ ಪ್ರದರ್ಶಿಸಿತ್ತು. ಜೊತೆಗೆ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ತೋರಿದ ಉತ್ತಮ ಸಾಧನೆಯು ಆ ತಂಡಕ್ಕೆ, ಭಾರತ ತಂಡವನ್ನು ಹಿಂದೆಹಾಕಲು ನೆರವಾಗಿದೆ.

ನೆದರ್ಲೆಂಡ್ಸ್‌ (3060) ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಸ್ಪೇನ್‌ನ ವಲೆನ್ಸಿಯಾದಲ್ಲಿ ನಡೆದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಅಮೋಘ ಸಾಧನೆ ತೋರಿದ ಬೆಲ್ಜಿಯಂ (2848) ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.

ಭಾರತದಲ್ಲಿ ನಡೆದ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಆಸ್ಟ್ರೇಲಿಯಾ (2757), ಇಂಗ್ಲೆಂಡ್‌ ತಂಡವನ್ನು (2720) ಹಿಂದೆಹಾಕಿ ಐದನೇ ಸ್ಥಾನಕ್ಕೆ ಜಿಗಿದಿದೆ. ಅರ್ಜೆಂಟೀನಾ (2524) ಮತ್ತು ಸ್ಪೇನ್ (2296) ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನದಲ್ಲಿವೆ. ಫ್ರಾನ್ಸ್ ಮತ್ತು ನ್ಯೂಜಿಲೆಂಡ್ 9 ಮತ್ತು 10ನೇ ಸ್ಥಾನದಲ್ಲಿವೆ.

ಮಹಿಳಾ ತಂಡಕ್ಕೆ 9ನೇ ಸ್ಥಾನ

ಭಾರತ ಮಹಿಳಾ ತಂಡ(2215)  ಕ್ರಮಾಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ. ಈ ವಿಭಾಗದಲ್ಲಿ ನೆದರ್ಲೆಂಡ್ಸ್‌ (3422) ಅಗ್ರಸ್ಥಾನದಲ್ಲಿದೆ. ಪ್ರಬಲ ನೆದರ್ಲೆಂಡ್ಸ್‌ ಈ ಋತುವಿನಲ್ಲಿ ಆಡಿದ ಪ್ರೊ ಲೀಗ್‌ನ ಎಲ್ಲ 12 ಪಂದ್ಯಗಳನ್ನು ಗೆದ್ದುಕೊಂಡು ಉತ್ತಮ ಲಯದಲ್ಲಿದೆ.

ಅರ್ಜೆಂಟೀನಾ (2827) ಮತ್ತು ಜರ್ಮನಿ (2732) ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾವನ್ನು (2678) ಹಿಂದೆಹಾಕಿವೆ. ಒಂದು ಸ್ಥಾನ ಕೆಳಗಿಳಿದ ಬೆಲ್ಜಿಯಂ (2499) ಆರನೇ ಸ್ಥಾನದಲ್ಲಿದೆ. ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಬೆಲ್ಜಿಯಂ ಸತತ  ನಾಲ್ಕು ಪಂದ್ಯಗಳನ್ನು ಸೋತಿತ್ತು.

ಆರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು 9ನೇ ಸ್ಥಾನದಲ್ಲಿರುವ ಭಾರತ ತಂಡಗಳ ಮಧ್ಯೆ ಪಾಯಿಂಟ್‌ ಅಂತರ 100 ಕೂಡ ಇಲ್ಲ. ಇದು ಮಹಿಳಾ ಹಾಕಿ ತಂಡಗಳ ನಡುವೆಯಿರುವ ಪೈಪೋಟಿ ಸೂಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT