ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌: ಸುಂಟೋರಿ ಸನ್‌ಬರ್ಡ್ಸ್‌ ಶುಭಾರಂಭ

Published 6 ಡಿಸೆಂಬರ್ 2023, 16:38 IST
Last Updated 6 ಡಿಸೆಂಬರ್ 2023, 16:38 IST
ಅಕ್ಷರ ಗಾತ್ರ

ಬೆಂಗಳೂರು: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್‌ ತಂಡ, ಪುರುಷರ ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ನೇರ ಸೆಟ್‌ಗಳ ಗೆಲುವಿನೊಡನೆ ಶುಭಾರಂಭ ಮಾಡಿತು. ಸನ್‌ಬರ್ಡ್ಸ್‌ ತಂಡ ‘ಬಿ’ ಗುಂಪಿನ ಈ ಪಂದ್ಯದಲ್ಲಿ ಟರ್ಕಿಯ ಹಾಕ್‌ಬ್ಯಾಂಕ್‌ ಸ್ಫೋರ್ಟ್‌ ಕುಲುಬು ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿತು.

ಸನ್‌ಬರ್ಡ್ಸ್ ತಂಡ, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಉದ್ಘಾಟನಾ ಪಂದ್ಯದಲ್ಲಿ 25–23, 25–23, 25–16 ರಲ್ಲಿ ಟರ್ಕಿಯ ತಂಡದ ವಿರುದ್ಧ ಜಯಗಳಿಸಿ ಪೂರ್ಣ ಮೂರು ಪಾಯಿಂಟ್‌ಗಳನ್ನು ಪಡೆಯಿತು.

ಭಾರತದಲ್ಲಿ ಈ ಮಟ್ಟದ ವಾಲಿಬಾಲ್‌ ಟೂರ್ನಿ ಮೊದಲ ಬಾರಿಗೆ ಆಯೋಜನೆಗೊಂಡಿದ್ದು, ವಿಶ್ವದ ಕೆಲವು ಶ್ರೇಷ್ಠ ಆಟಗಾರರು ವಿವಿಧ ಕ್ಲಬ್‌ಗಳಲ್ಲಿ ಕಾಣಿಸಿಕೊಂಡಿದ್ದು ಐದು ದಿನಗಳ ಕಾಲ ಆಡಲಿದ್ದಾರೆ. ಆರು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ನಾಕ್‌ಔಟ್ ತಲುಪಲು ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ.

ಟೂರ್ನಿ ನಿಯಮಗಳ ಪ್ರಕಾರ ವಿಜೇತ ತಂಡ ಒಂದು ಸೆಟ್‌ ಮಾತ್ರ ಕಳೆದುಕೊಂಡು ಅಥವಾ ಸೆಟ್‌ ಕಳೆದುಕೊಳ್ಳದೇ ಗೆದ್ದರಷ್ಟೇ ಮೂರು ಪಾಯಿಂಟ್‌ ಪಡೆಯುತ್ತದೆ. ಹೀಗಾಗಿ ಜಪಾನ್‌ ತಂಡದ ಸೆಮಿಫೈನಲ್ ಹಾದಿಗೆ ಉಜ್ವಲಗೊಂಡಿದೆ.

ಮೊದಲ ಸೆಟ್‌ನ ಆರಂಭ ನೋಡಿದಾಗ ಪಂದ್ಯ ನೇರ ಸೆಟ್‌ಗಳಲ್ಲಿ ಇತ್ಯರ್ಥವಾಗುವಂತೆ ಕಂಡಿರಲಿಲ್ಲ. ಫ್ರಾನ್ಸ್‌ನ ಎರ್ವಿನ್‌ ಗಪೆತ್‌, ನೆದರ್ಲೆಂಡ್ಸ್‌ನ ನಿಮಿರ್‌ ಅಬ್ದೆಲ್‌ ಅಝೀಜ್ ಅವರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಒಂದು ಹಂತದಲ್ಲಿ ಹಾಕ್‌ಬ್ಯಾಂಕ್ ತಂಡ ಹಿಡಿತ ಸಾಧಿಸಿ 18–14ರಲ್ಲಿ ಮುಂದಿತ್ತು. ಆದರೆ ಈ ಹಂತದಲ್ಲಿ ಜಪಾನ್‌ನ ಕ್ಲಬ್ ತಿರುಗೇಟು ನೀಡಿ ಲೀಡ್‌ ಪಡೆಯಿತು. ಕೆಲವು ಪ್ರಬಲ ಬ್ಲಾಕ್‌ ಮತ್ತು ಪರಿಣಾಮಕಾರಿ ದಾಳಿಯಿಂದ ಇದು ಸಾಧ್ಯವಾಯಿತು. ರಷ್ಯಾದ ದಿಮಿಟ್ರಿ ಮುಸೆರ್ಸ್‌ಕಿ ಮತ್ತು ಕ್ಯೂಬಾದ ಡಿ ಅರ್ಮಾನಸ್‌ ಬೆರಿಯೊ ಅಲೇನ್‌ ಜೂನಿಯರ್ ಅವರು ಬ್ಲಾಕಿಂಗ್‌, ಸ್ಮ್ಯಾಶ್‌ಗಳಲ್ಲಿ ಮಿಂಚಿದರು. ಮುಸೆರ್ಸ್‌ಕಿ 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ರಷ್ಯಾ ತಂಡದಲ್ಲಿದ್ದರು. ಬೆರಿಯೊ ಜಾಣ್ಮೆಯಿಂದ ಎದುರಾಳಿ ಬ್ಲಾಕರ್‌ಗಳ ದಿಕ್ಕುತಪ್ಪಿಸಿದರು.

ಮೊದಲ ಸೆಟ್‌ನ ಗೆಲುವಿನಿಂದ ಜಪಾನ್‌ನ ಕ್ಲಬ್‌ ಎರಡನೇ ಸೆಟ್‌ನಲ್ಲಿ ವಿಶ್ವಾಸದಿಂದ ಆಡಿತು. ಸಾಲದೆಂಬಂತೆ ಟರ್ಕಿಯ ತಂಡ ಸಾಕಷ್ಟು  ತಪ್ಪುಗಳನ್ನೂ ಎಸಗಿತು. ಸರ್ವಿಸ್‌ ವೇಳೆ 17 ತಪ್ಪುಗಳನ್ನು ಮಾಡಿದ್ದು ದುಬಾರಿಯಾಯಿತು. ನಾಯಕ ನಿಮಿರ್‌ ಮೂರು ಸೆಟ್‌ಗಳ 13 ಸರ್ವ್‌ಗಳಲ್ಲಿ ಐದು ಸಲ ತಪ್ಪು ಮಾಡಿದರು. ಮೂರನೇ ಸೆಟ್‌ನಲ್ಲಿ ಟರ್ಕಿಯ ರಕ್ಷಣೆ ಇನ್ನಷ್ಟು ಶಿಥಿಲಗೊಂಡಿತು. ಸನ್‌ಬರ್ಡ್ಸ್‌ ತಂಡ ಈ ಸೆಟ್‌ನಲ್ಲಿ ಎಂಟು ಬ್ಲಾಕ್‌ ಪಾಯಿಂಟ್ಸ್‌ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT