ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರ್ಡಲ್ಸ್: ಒಲಿಂಪಿಕ್ಸ್‌ಗೆ ಜ್ಯೋತಿ ಯರ್ರಾಜಿ

ರ‍್ಯಾಂಕಿಂಗ್‌ನಲ್ಲಿ ಕೋಟಾ ಪಡೆದ ಷಾಟ್‌ಪಟ್‌ ಸ್ಪರ್ಧಿ ಅಭಾ ಖತುವಾ
Published 3 ಜುಲೈ 2024, 16:04 IST
Last Updated 3 ಜುಲೈ 2024, 16:04 IST
ಅಕ್ಷರ ಗಾತ್ರ

ನವದೆಹಲಿ: ಸ್ಪ್ರಿಂಟ್‌ ತಾರೆ ಜ್ಯೋತಿ ಯರ್ರಾಜಿ ಅವರು ವಿಶ್ವ ರ‍್ಯಾಂಕಿಂಗ್‌ ಆಧಾರದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ‍ಗಳಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಭಾರತದ ಮೊದಲ 100 ಮೀಟರ್‌ ಹರ್ಡಲ್ಸ್ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಅಚ್ಚರಿ ಎಂಬಂತೆ ಭಾರತದ ಷಾಟ್‌ಪಟ್‌ ಸ್ಪರ್ಧಿ ಅಭಾ ಖತುವಾ ಅವರೂ ರ‍್ಯಾಂಕಿಂಗ್‌ ಆಧಾರದಲ್ಲಿ ಪ್ಯಾರಿಸ್‌ ಟಿಕೆಟ್‌ ಪಡೆದಿದ್ದಾರೆ. ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸಿರುವ ಮತ್ತು ವಿಶ್ವ ಕ್ರಮಾಂಕದ ಕೋಟಾದ ಮೂಲಕ ಪ್ರವೇಶ ಪಡೆದ ಅಥ್ಲೀಟ್‌ಗಳ ಪಟ್ಟಿಯನ್ನು ವಿಶ್ವ ಅಥ್ಲೆಟಿಕ್ಸ್‌ ಮಂಗಳವಾರ ಪ್ರಕಟಿಸಿದೆ.

ಒಲಿಂಪಿಕ್ಸ್‌ ಕೋಟಾ ಪಡೆದವರನ್ನು ಆಯ್ಕೆ ಮಾಡುವ ಅಂತಿಮ ಅಧಿಕಾರ ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಹೊಂದಿದೆ. ಒಂದು ವೇಳೆ ಕೋಟಾ ನಿರಾಕರಿಸುವುದಾದರೆ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು ಜುಲೈ 4ರೊಳಗೆ ವಿಶ್ವ ಅಥ್ಲೆಟಿಕ್ಸ್‌ಗೆ ತಿಳಿಸಬೇಕು. ರ‍್ಯಾಂಕಿಂಗ್‌ನಲ್ಲಿ ನಂತರದ ಅತ್ಯುತ್ತಮ ಸ್ಥಾನ ಹೊಂದಿರುವ ಅಥ್ಲೀಟ್‌ಗಳಿಗೆ ಕೋಟಾವನ್ನು ಮರುಹಂಚಿಕೆ ಮಾಡುತ್ತದೆ. ಜುಲೈ 7ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. 

ಯರ್ರಾಜಿ ಅವರು ಮೇ ತಿಂಗಳಿನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 12.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಅಲ್ಲಿ ಕೇವಲ ಒಂದು ಸೆಕೆಂಡ್‌ ಅಂತರದಲ್ಲಿ (12.77 ಸೆಕೆಂಡ್‌) ಪ್ಯಾರಿಸ್‌ಗೆ ನೇರ ಅರ್ಹತೆ ಪಡೆಯುವ ಅವಕಾಶ ತಪ್ಪಿಸಿಕೊಂಡಿದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರು 34ನೇ ಸ್ಥಾನವನ್ನು ಹೊಂದಿದ್ದಾರೆ. ಪ್ಯಾರಿಸ್‌ ಕೂಟದ 100 ಮೀಟರ್‌ ಹರ್ಡಲ್ಸ್‌ನಲ್ಲಿ ಒಟ್ಟು 40 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ.

ಫೆಡರೇಷನ್ ಕಪ್‌ನಲ್ಲಿ ರಾಷ್ಟ್ರೀಯ ದಾಖಲೆ (18.41 ಮೀ) ನಿರ್ಮಿಸಿದ್ದ ಖತುವಾ, ವಿಶ್ವ ರ‍್ಯಾಂಕಿಂಗ್ ಕೋಟಾದಿಂದ ಹೊರಗಿದ್ದರು. ಆದರೆ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನ ಷಾಟ್‌ಪಟ್‌ ಸ್ಪರ್ಧೆಯಲ್ಲಿ 17.63 ಮೀಟರ್‌ ಸಾಧನೆಯೊಂದಿಗೆ ಚಿನ್ನ ಗೆದ್ದ ಅವರು, ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನಕ್ಕೆ ಏರಿದ್ದರು. 

ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನ ಹೈಜಂಪ್‌ ಸ್ಪರ್ಧೆಯಲ್ಲಿ 2.25 ಮೀಟರ್‌ ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದ ಸರ್ವೇಶ್‌ ಅನಿಲ್‌ ಕುಶಾರೆ ಕೂಡ ಪ್ಯಾರಿಸ್‌ಗೆ ಅರ್ಹತೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT