ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ | ಏರ್‌ ಪಿಸ್ತೂಲ್‌ ಸ್ಪರ್ಧೆ: ಮನೀಶ್‌ಗೆ ಚಿನ್ನ

Published 14 ಡಿಸೆಂಬರ್ 2023, 16:23 IST
Last Updated 14 ಡಿಸೆಂಬರ್ 2023, 16:23 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಗ್ರ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ನ ಪುರುಷರ ಎಸ್‌ಎಚ್‌–1 ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗುರುವಾರ ಚಿನ್ನಕ್ಕೆ ಗುರಿಯಿಟ್ಟರು.

ಕಳೆದ ತಿಂಗಳು ಹಾಂಗ್‌ಝೌ ನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಎಸ್‌ಎಚ್‌1 ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ 21 ವರ್ಷದ ಮನೀಶ್‌ 240.2 ಅಂಕಗಳೊಂದಿಗೆ ಸಾಧನೆ ಮಾಡಿದರು.  

ಹ್ಯಾಂಗ್‌ಝೌನಲ್ಲಿ ನಡೆದ ಎಚ್‌ಎಚ್‌1 ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಶ್ ಅವರನ್ನು ಹಿಂದಿಕ್ಕಿ ಬೆಳ್ಳಿ ಗೆದ್ದಿದ್ದ ರುದ್ರಾಂಶ್ ಖಂಡೇಲ್ವಾಲ್ ಇಲ್ಲಿ ಎರಡನೇ ಸ್ಥಾನ ಪಡೆದರು.

ತಮಿಳುನಾಡಿನ ಪವರ್ ಲಿಫ್ಟರ್ ಕಸ್ತೂರಿ ರಾಜಮಣಿ 67 ಕೆ.ಜಿ ವಿಭಾಗದಲ್ಲಿ ಮೂರನೇ ಪ್ರಯತ್ನದಲ್ಲಿ 100 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು. ಗುಜರಾತ್‌ನ ಪಾರುಲ್ ಗೋಹಿಲ್‌ (64 ಕೆಜಿ) ಮತ್ತು ಪಂಜಾಬ್‌ನ ಸುಮನ್ ದೀಪ್‌ (57 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು. 

73 ಕೆಜಿ ಎಲೈಟ್ ವಿಭಾಗದಲ್ಲಿ ಗುಜರಾತ್‌ನ ರೇಷ್ಮಾ ಮೊಗಿಲ್ 72 ಕೆಜಿ ಎತ್ತುವ ಮೂಲಕ ಮೊದಲ ಸ್ಥಾನ ಪಡೆದರು. ದೆಹಲಿಯ ಸಾಹಿಸ್ತಾ (58 ಕೆಜಿ) ಬೆಳ್ಳಿ ಗೆದ್ದರೆ, ರಾಜಸ್ಥಾನದ ಮಾಯಾ (57 ಕೆಜಿ) ನಂತರದ ಸ್ಥಾನ ಪಡೆದರು.

ಪುರುಷರ 80 ಕೆ.ಜಿ ವಿಭಾಗದಲ್ಲಿ ಪಂಜಾಬ್‌ನ ಗುರುಸೇವಕ್ ಸಿಂಗ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಒಟ್ಟು 171 ಕೆಜಿ ಭಾರ ಎತ್ತಿ ಬಂಗಾರ ಗೆದ್ದರೆ, ಕೇರಳದ ಅಬ್ದುಲ್ ಸಲಾಂ (155 ಕೆಜಿ) ಬೆಳ್ಳಿ, ದೆಹಲಿಯ ಹನಿ ದಬಾಸ್ (152 ಕೆಜಿ) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಗುಜರಾತ್‌ನ ಭಾವಿನಾ ಪಟೇಲ್, ಮಹಿಳಾ ಕ್ಲಾಸ್ -4 ವಿಭಾಗದ ಆರಂಭಿಕ ಪಂದ್ಯದಲ್ಲಿ ಗುಜರಾತ್‌ನ  ಶಮೀಮ್ ಚಾವ್ಡಾ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿದರು. ಇವರು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಹಾಂಗ್‌ಝೌನಲ್ಲಿ ಕಂಚು ಜಯಸಿದ್ದರು. 

ಗುಜರಾತ್‌ನ ಸೋನಾಲ್ ಪಟೇಲ್ ಮಹಿಳಾ ಕ್ಲಾಸ್ 1-3 ವಿಭಾಗದ ಆರಂಭಿಕ ಪಂದ್ಯದಲ್ಲಿ ತಮಿಳುನಾಡಿನ ಫಾತಿಮಾ ಬೀವಿ ಅವರನ್ನು 3-0 ಅಂತರದಿಂದ ಸೋಲಿಸಿದರು.

ಕರ್ನಾಟಕದ ಸಂದೇಶ್‌ಗೆ ಬಂಗಾರ :

88 ಕೆಜಿ  ಎಲೈಟ್  ವಿಭಾಗದಲ್ಲಿ ಕರ್ನಾಟಕದ ಸಂದೇಶ್‌ ಬಿ.ಜಿ 171 ಕೆಜಿ ಭಾರ ಎತ್ತುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ದೆಹಲಿಯ ಜಗಮೋಹನ್ (145 ಕೆಜಿ) ಎರಡನೇ ಸ್ಥಾನ ಪಡೆದರೆ, ಗುಜರಾತ್ನ ದಿವ್ಯೇಶ್ ಲಡಾನಿ (140 ಕೆಜಿ) ಕಂಚಿನ ಪದಕ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT