ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಆಯ್ಕೆ ಟ್ರಯಲ್ಸ್‌; ಡೋಪಿಂಗ್ ಸದ್ದು?

ಶೌಚಾಲಯ, ಸ್ನಾನದ ಕೋಣೆಯಲ್ಲಿ ಸಿರಿಂಜ್‌ಗಳು
Last Updated 15 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಆಗಸ್ಟ್‌ 14, 15ರಂದು ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಡೋಪಿಂಗ್‌ನ ಆರೋಪ ಕೇಳಿಬಂದಿದೆ.

ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಕೆಲವರು ಉದ್ದೀಪನ ಮದ್ದು ತೆಗೆದುಕೊಂಡಿರುವ ಸಂಶಯ ಇದೆ. ಇದಕ್ಕೆ ಪೂರಕವಾಗಿ ಅಲ್ಲಿನ ಶೌಚಾಲಯ ಹಾಗೂ ಸ್ನಾನದ ಕೋಣೆಯಲ್ಲಿ ಸಿರಿಂಜ್‌ಗಳು ಬಿದ್ದಿರುವ ವಿಡಿಯೊ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಕೆಲವರು ‘ಪ್ರಜಾವಾಣಿ’ಗೆ ನೀಡಿದ್ದಾರೆ. ಈ ವೇಳೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ– National Anti Doping Agency)ದ ಪರೀಕ್ಷೆ ನಡೆದಿಲ್ಲ.

‘ಉದ್ದೀಪನ ಮದ್ದು ತೆಗೆದುಕೊಳ್ಳದೇ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗಿಯಾಗುವವರಿಗೆ ಇದರಿಂದ ಅನ್ಯಾಯವಾಗುತ್ತಿದೆ’ ಎಂದು ಕೆಲವು ಕುಸ್ತಿಪಟುಗಳು ಪತ್ರಿಕೆ ಎದುರು ಅಳಲು ತೋಡಿಕೊಂಡರು.

ಒತ್ತಡದಲ್ಲಿ ಗಮನ ಹರಿಸಿಲ್ಲ: ‘ನಾವು ಆಯ್ಕೆಟ್ರಯಲ್ಸ್ ಆಯೋಜಿಸಿದ್ದೆವು. ಆಯ್ಕೆ ಪ್ರಕ್ರಿಯೆಯ ಒತ್ತಡದಲ್ಲಿದ್ದೆವು. ಹೀಗಾಗಿ ಆ ಬಗ್ಗೆ ಗಮನ ಹರಿಸಿಲ್ಲ. ಶೀಘ್ರವೇ ಮೈಸೂರಿನಲ್ಲಿ ನಡೆಯಲಿರುವ 15 ವರ್ಷದೊಳಗಿನವರ ದಸರಾ ಕುಸ್ತಿ ಪಂದ್ಯಾವಳಿ ವೇಳೆ ಕಟ್ಟುನಿಟ್ಟಿನ ನಿಗಾ ವಹಿಸಲಿದ್ದೇವೆ’ ಎಂದು ಆಯ್ಕೆ ಟ್ರಯಲ್ಸ್‌ನ ಸಂಘಟಕರೂ ಆದ ಹಿರಿಯ ಕುಸ್ತಿ ಕೋಚ್, ದಾವಣಗೆರೆಯ ವಿನೋದ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ, ಅವಕಾಶ: ‘ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ಇಲ್ಲವೇ ರಾಜ್ಯ ಮಟ್ಟದಲ್ಲಿ ಪದಕ ಗಳಿಸಿದರೆ ಇಲಾಖೆಯಿಂದ ಪ್ರತಿಭಾ ಪುರಸ್ಕಾರದ ರೂಪದಲ್ಲಿ ಲಕ್ಷಗಟ್ಟಲೇ ಹಣ ದೊರೆಯುತ್ತದೆ. ಜೊತೆಗೆ ಹೆಸರು ಗಳಿಸಲು ಅವಕಾಶ. ಇನ್ನು ಖೇಲೋ ಇಂಡಿಯಾಗೆ ಆಯ್ಕೆಯಾದರೆ ವಾರ್ಷಿಕ ₹ 6 ಲಕ್ಷ ನಗದು ಸಿಗುತ್ತದೆ. ಹೀಗಾಗಿ ಕೆಲವರು ಅಡ್ಡದಾರಿ ಹಿಡಿಯುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಯುವಜನ ಸೇವೆ, ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಕುಸ್ತಿ ಮಾತ್ರವಲ್ಲ ಪವರ್‌ ಲಿಫ್ಟಿಂಗ್, ಜೂಡೊ, ಅಥ್ಲೆಟಿಕ್ಸ್‌ನಲ್ಲೂ ಉದ್ದೀಪನ ಮದ್ದು ಸೇವನೆ ನಡೆಯುತ್ತಿದೆ. ಕೊಠಡಿಯಲ್ಲೇ ಚುಚ್ಚುಮದ್ದು ಚುಚ್ಚಿಕೊಂಡು ಬರುತ್ತಾರೆ. ಕೆಳಹಂತದಲ್ಲಿ ಪರೀಕ್ಷೆ ನಡೆಯದ ಕಾರಣ ಡೋಪಿಂಗ್ ಮಾಡಿಕೊಂಡವರು ಸಿಕ್ಕಿಬೀಳುವುದಿಲ್ಲ’ ಎಂದು ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಅಪ್ಪಣ್ಣ ಗಸ್ತಿ ಹೇಳುತ್ತಾರೆ.

ಟೆಸ್ಟಿಂಗ್ ದುಬಾರಿ; ವಿನೋದ್‌ಕುಮಾರ್

‘ಉದ್ದೀಪನ ಮದ್ದು ಪರೀಕ್ಷೆ ನಡೆಸಲು ಒಬ್ಬ ಸ್ಪರ್ಧಿಗೆ ಅಂದಾಜು ₹ 23,000 ಖರ್ಚಾಗುತ್ತದೆ. ಅಷ್ಟು ಹಣ ಭರಿಸುವ ಶಕ್ತಿ ಕ್ರೀಡಾಕೂಟದ ಆಯೋಜಕರಿಗೆ ಇರುವುದಿಲ್ಲ. ಎಲ್ಲ ಕೂಟಗಳಿಗೂ ನಾಡಾದವರನ್ನು ಕರೆಸಲು ಆಗದು ಎಂದು ವಿನೋದ್‌ಕುಮಾರ್ ತಿಳಿಸಿದರು.

‘ಉದ್ದೀಪನ ಮದ್ದು ತೆಗೆದುಕೊಳ್ಳುವವರು, ಅದನ್ನು ಬೆಂಬಲಿಸುವವರಿಗೆ ನಮ್ಮಂತವರು ಇಷ್ಟವಾಗುವುದಿಲ್ಲ. ಕ್ರೀಡೆಯಿಂದ ಜೀವನ ಕಟ್ಟಿಕೊಳ್ಳಲು ಬಂದ ವ್ಯಕ್ತಿ ಉದ್ದೀಪನ ಮದ್ದು ಸೇವನೆ ಆರಂಭಿಸಿದರೆ ಬದುಕನ್ನು ಕಳೆದುಕೊಳ್ಳಲು ಆರಂಭಿಸುತ್ತಾನೆ ಎಂಬುದು ಅರ್ಥವಾಗುವುದಿಲ್ಲ. ಹೇಳಲು ಹೋದರೆ ನಾವು ಕೆಟ್ಟವರಾಗುತ್ತೇವೆ. ನಾವು ಅಸಹಾಯಕರು. ಬಹಳಷ್ಟು ಕಡೆ ಟೂರ್ನಿಗಳಲ್ಲಿ ಸಂಘಟಕರಿಗೆ ಅದನ್ನೆಲ್ಲ ನೋಡಲು ಆಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಈ ಹಂತದಲ್ಲಿ ಉದ್ದೀಪನ ಮದ್ದು ಸೇವನೆ ಪಿಡುಗು ತಡೆಗೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ನಾಡಾ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರೀಡಾಪಟುಗಳಿಗೆ ನಿರಂತರವಾಗಿ ಜಾಗೃತಿ ಶಿಬಿರ ಆಯೋಜಿಸಲು ಮನವಿ ಕೂಡ ಮಾಡಿದ್ದೇನೆ’ ಎಂದು ಅವರು ಹೇಳಿದರು.

ನಾಡಾಗೆ ಹಣ ಕೊಡುವ ಅಗತ್ಯವಿಲ್ಲ: ಡಾ.ಕಿರಣ್ ಕುಲಕರ್ಣಿ

‘ಸ್ಪರ್ಧೆ ಆಯೋಜಿಸುತ್ತಿದ್ದೇವೆ ಎಂದು ನಾಡಾಗೆ ಆಯಾ ರಾಜ್ಯದ ಸಂಬಂಧಿಸಿದ ಕ್ರೀಡಾ ಸಂಘಟನೆಯಿಂದ ಪತ್ರ ಬರೆದರೆ ಅವರೇ ಬಂದು ಪರೀಕ್ಷೆ ಮಾಡುತ್ತಾರೆ. ಹಣ ಕೊಡುವ ಅಗತ್ಯವಿಲ್ಲ’ ಎಂದು ಫಿಫಾ–ಎಎಫ್‌ಸಿ ಮೆಡಿಕಲ್ ಅಂಡ್ ಡೋಪಿಂಗ್ ಕಂಟ್ರೋಲ್‌ ಆಫಿಸರ್‌ ಡಾ.ಕಿರಣ್‌ ಕುಲಕರ್ಣಿ ತಿಳಿಸಿದರು.

‘ಡೋಪಿಂಗ್ ಇಂದು ನಮ್ಮ ಕ್ರೀಡಾಕ್ಷೇತ್ರದಲ್ಲಿನ ದೊಡ್ಡ ಪಿಡುಗು. ಶಕ್ತಿಧಾತುವಾಗಿ ಸ್ಟಿರಾಯ್ಡ್ಸ್, ಸ್ಟಿಮ್ಯುಲೆಂಟ್ಸ್ (ಉದ್ದೀಪಕ), ತೂಕ ಇಳಿಸಲು ದೇಹದಲ್ಲಿನ ನೀರಿನ ಅಂಶ ತೆಗೆದುಹಾಕಲು ಡೈಯುರೆಟಿಕ್ಸ್ (diuretics) ತೆಗೆದುಕೊಳ್ಳುತ್ತಾರೆ. ಇದರಿಂದ ಮುಂದೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT