ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Federation Cup: ತವರು ನೆಲದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ

Published 15 ಮೇ 2024, 15:25 IST
Last Updated 15 ಮೇ 2024, 15:25 IST
ಅಕ್ಷರ ಗಾತ್ರ

ಭುವನೇಶ್ವರ: ಒಲಿಂಪಿಕ್ ಜಾವೆಲಿನ್‌ ಥ್ರೊ ಚಾಂಪಿಯನ್ ನೀರಜ್ ಚೋಪ್ರಾ ಬುಧವಾರ 27ನೇ ಫೆಡರೇಷನ್‌ ಕಪ್ ಕೂಟದಲ್ಲಿ ನಿಧಾನಗತಿಯ ಆರಂಭ ಮಾಡಿದರು. ಮೂರು ವರ್ಷಗಳ ನಂತರ ತವರು ನೆಲದಲ್ಲಿ ಕಣಕ್ಕಿಳಿದ ಅವರಿಗೆ ಇದರ ಹೊರತಾಗಿಯೂ ಚಿನ್ನ ಗೆಲ್ಲುವುದಕ್ಕೆ ಸಮಸ್ಯೆಯಾಗಲಿಲ್ಲ.

26 ವರ್ಷದ ಸೂಪರ್‌ಸ್ಟಾರ್ ಅಥ್ಲೀಟ್‌ ಲಯಕ್ಕೆ ಬರಲು ಸಮಯ ತೆಗೆದುಕೊಂಡರು. ಮೂರು ಸುತ್ತುಗಳ ನಂತರ ಅವರು ಎರಡನೇ ಸ್ಥಾನದಲ್ಲಿದ್ದರು. ಆದರೆ ನಾಲ್ಕನೇ ಯತ್ನದಲ್ಲಿ 82.27 ಮೀ. ಎಸೆತದೊಡನೆ ಅಗ್ರಸ್ಥಾನಕ್ಕೇರಿದರು. ಕರ್ನಾಟಕದ ಡಿ.ಪಿ. ಮನು ಅಂತಿಮ ಯತ್ನ ಪೂರೈಸಿದ್ದು 82.06 ಮೀ. ದೂರ ಎಸೆತದೊಡನೆ ಎರಡನೇ ಸ್ಥಾನ ಪಡೆದಿದ್ದರಿಂದ, ನೀರಜ್ ತಮ್ಮ ಅಂತಿಮ ಥ್ರೋ ಅವಕಾಶ ತೆಗೆದುಕೊಳ್ಳಲಿಲ್ಲ.

ಇನ್ನೊಬ್ಬ ಅಂತರರಾಷ್ಟ್ರೀಯ ಸ್ಪರ್ಧಿ ಕಿಶೋರ್ ಜೇನಾ ಅವರು ಆರು ಯತ್ನಗಳ ಪೈಕಿ ಮೂರರಲ್ಲಿ ಫೌಲ್ ಆದರು. ಅವರು 75.25 ಮೀ. ಥ್ರೊದೊಡನೆ ಐದನೇ ಸ್ಥಾನ ಪಡೆದರು. ಮಹಾರಾಷ್ಟ್ರದ ಉತ್ತಮ್ ಬಾಳಾಸಾಹೇಬ ಪಾಟೀಲ (78.39 ಮೀ.) ಕಂಚಿನ ಪದಕ ಪಡೆದರು.

ಚೋಪ್ರಾ 2021ರ ಮಾರ್ಚ್‌ 17ರಲ್ಲಿ ಇದೇ ಕೂಟದಲ್ಲಿ ಭಾಗವಹಿಸಿದ ನಂತರ ದೇಶದ ಯಾವುದೇ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. ಆಗ ಅವರು 87.80 ಮೀ. ಎಸೆತ ದಾಖಲಿಸಿ ಚಿನ್ನ ಗೆದ್ದಿದ್ದರು.

ಆದರೆ ಅದರ ನಂತರ ಚೋಪ್ರಾ, ಟೋಕಿಯೊ ಒಲಿಂಪಿಕ್ಸ್‌ ಚಿನ್ನ (2021), ಡೈಮಂಡ್‌ ಲೀಗ್ ಚಾಂಪಿಯನ್‌ (2022), ವಿಶ್ವ ಚಾಂಪಿಯನ್ (2023) ಆಗಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದರು. ಮೂರು ಡೈಮಂಡ್‌ ಲೀಗ್‌ ವೈಯಕ್ತಿಕ ಲೆಗ್‌ನಲ್ಲಿ ಮೊದಲಿಗರಾಗಿದ್ದರು. ಆದರೆ 90 ಮೀ. ದೂರ ಎಸೆಯುವ ಅವರ ಕನಸು ಇನ್ನೂ ಸಾಕಾರಗೊಂಡಿಲ್ಲ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 89.94 ಮೀ. ಆಗಿದೆ.

ಚಿನ್ನ ಗೆದ್ದ ಸ್ನೇಹಾ ಅಭಿನಯಾ ಪೂವಮ್ಮ

ಕರ್ನಾಟಕದ ಮಹಿಳೆಯರು ಅಂತಿಮ ದಿನ ಮೂರು ಚಿನ್ನ ಗೆದ್ದರು. ಎಸ್.ಎಸ್‌.ಸ್ನೇಹಾ ಅವರು 100 ಮೀ. ಓಟದಲ್ಲಿ ಚಿನ್ನ ಗೆದ್ದು ಕೂಟದ ವೇಗದ ಓಟಗಾರ್ತಿ ಗೌರವಕ್ಕೆ ಪಾತ್ರರಾದರು. ಅವರು 11.63 ಸೆ.ಗಳಲ್ಲಿ ಓಟ ಪೂರೈಸಿದರು. ತಮಿಳುನಾಡಿನದ ಗಿರಿಧಾರಣಿ ರವಿಕುಮಾರ್ (11.67 ಸೆ.) ಬೆಳ್ಳಿ ಮತ್ತು ಒಡಿಶಾದ ಶ್ರವಣಿ ನಂದಾ (11.76 ಸೆ.) ಕಂಚಿನ ಪದಕ ಪಡೆದರು. ಮಹಿಳೆಯರ 400 ಮೀ. ಓಟದಲ್ಲಿ ಪೂವಮ್ಮ ರಾಜು (53.32 ಸೆ.) ಚಿನ್ನ ಗೆದ್ದರು. ಹರಿಯಾಣದ ಸುಮ್ಮಿ (53.46 ಸೆ.) ಎರಡನೇ ಮತ್ತು ತಮಿಳುನಾಡಿನ ಆರ್‌.ವಿದ್ಯಾ ರಾಮರಾಜ್ (53.52 ಸೆ). ಮೂರನೇ ಸ್ಥಾನ ಗಳಿಸಿದರು. ಅಭಿನಯಾ ಎಸ್‌.ಶೆಟ್ಟಿ ಮಹಿಳೆಯರ ಹೈಜಂಪ್‌ನಲ್ಲಿ 1.77 ಮೀ. ಸಾಧನೆಯೊಡನೆ ಚಿನ್ನ ಗೆದ್ದರೆ ಕೇರಳದ ಆ್ಯಂಜೆಲ್ ಪಿ.ದೇವಸ್ಯ (1.74 ಮೀ.) ರಜತ ಮತ್ತು ಬಾಂಗ್ಲಾದೇಶದ ಮೊಸ್ತ್ ರಿತು ಅಖ್ತರ್‌ (1.71 ಮೀ.) ಕಂಚಿನ ಪದಕ ಪಡೆದರು.

ನೀರಜ್ ಚೋಪ್ರಾ

ನೀರಜ್ ಚೋಪ್ರಾ

(ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT