ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌: ಷಾಟ್‌ಪಟ್‌ ಚಿನ್ನ ಗೆದ್ದ ಸಚಿನ್‌ ಖಿಲಾರಿ

ಪದಕ ಗಳಿಕೆಯಲ್ಲಿ ಭಾರತದ ದಾಖಲೆ
Published 22 ಮೇ 2024, 14:05 IST
Last Updated 22 ಮೇ 2024, 14:05 IST
ಅಕ್ಷರ ಗಾತ್ರ

ಕೋಬೆ (ಜಪಾನ್‌): ಭಾರತದ ಸಚಿನ್‌ ಸರ್ಜೆರಾವ್ ಖಿಲಾರಿ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪುರುಷರ ಷಾಟ್‌ಪಟ್‌ (ಎಫ್‌46) ಸ್ಪರ್ಧೆಯಲ್ಲಿ ಬುಧವಾರ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಕೊಂಡರು. ಭಾರತ ಈ ಕೂಟದಲ್ಲಿ ಪದಕ ಗಳಿಕೆಯಲ್ಲಿ ಹಿಂದಿನ ದಾಖಲೆಯನ್ನು ಮೀರಿನಿಂತಿತು.

ಧರಮ್‌ವೀರ್ ಪುರುಷರ ಕ್ಲಬ್‌ ಥ್ರೊ (ಎಫ್‌ 51 ಕೆಟಗರಿ) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಭಾರತ ಈವರೆಗೆ 11 ಪದಕಗಳನ್ನು ಗೆದ್ದುಕೊಂಡಿದ್ದು, ಇದರಲ್ಲಿ ಐದು ಚಿನ್ನ, ನಾಲ್ಕು ಬೆಳ್ಳಿ, ಮೂರು ಕಂಚಿನ ಪದಕಗಳು  ಒಳಗೊಂಡಿದೆ. ಈ ಹಿಂದೆ 2023ರ ಪ್ಯಾರಿಸ್‌ ಚಾಂಪಿಯನ್‌ಷಿಪ್‌ನಲ್ಲಿ 10 ಪದಕಗಳನ್ನು ಜಯಿಸಿದ್ದು ಇದುವರೆಗಿನ ಅತ್ಯುತ್ತಮ ಸಾಧನೆ. ಅಲ್ಲಿ ಭಾರತ ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗಳಿಸಿತ್ತು.

ಸಚಿನ್ ಷಾಟ್‌ಪಟ್‌ನನ್ನು 16.30 ಮೀ. ದೂರ ಎಸೆದು, ಕಳೆದ ವರ್ಷ ಪ್ಯಾರಿಸ್‌ನಲ್ಲಿ ತಾವೇ ಸ್ಥಾಪಿಸಿದ್ದ ಏಷ್ಯನ್ ದಾಖಲೆಯನ್ನು (16.21 ಮೀ) ಸುಧಾರಿಸಿದರು. ಒಂದು ಕೈ ಅಥವಾ ಎರಡೂ ಕೈಗಳ ಸ್ವಾಧೀನವನ್ನು ಭಾಗಶಃ ಕಳೆದುಕೊಂಡ ಅಥ್ಲೀಟುಗಳು ಎಫ್‌46 ವಿಭಾಗದ ವ್ಯಾಪ್ತಿಗೆ ಬರುತ್ತಾರೆ. ಇವರು ಸೊಂಟ ಮತ್ತು ಕಾಲಿನ ಶಕ್ತಿ ಬಳಸಿ ಥ್ರೋಗಳನ್ನು ಮಾಡಬೇಕಾಗುತ್ತದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯು ಕರಗಣಿ ಗ್ರಾಮದ ಸಚಿನ್ ಅವರು ಶಾಲಾ ದಿನಗಳಲ್ಲಿ ಆದ ಅವಘಡದಲ್ಲಿ ಎಡಗೈ ನಿಯಂತ್ರಣ ಕಳೆದುಕೊಂಡಿದ್ದಾರೆ. ಗ್ಯಾಂಗ್ರೀನ್ ಪರಿಣಾಮ ಮೊಣಕೈಯಿಂದ ಕೆಳಗಿನ ಸ್ನಾಯು ಕಳೆದುಕೊಂಡಿದ್ದಾರೆ. ಹಲವು ಶಸ್ತ್ರಚಿಕಿತ್ಸೆ ನಡೆಸಿದರೂ ಅದು ಮೊದಲಿನಂತಾಗಿಲ್ಲ.

ಪದಕ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್‌ ನಂತರದ ಸ್ಥಾನದಲ್ಲಿದೆ.

‘ನಾನು ಚಿನ್ನದ ನಿರೀಕ್ಷೆಯಲ್ಲಿದ್ದೆ. ಗೆದ್ದ ಕಾರಣ ಸಂತಸವಾಗಿದೆ. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಅಲ್ಲೂ ಚಿನ್ನ ಗೆಲ್ಲುವ ವಿಶ್ವಾಸವಿದೆ’ ಎಂದು ಸಚಿನ್ ಕೋಬೆಯಿಂದ ಪಿಟಿಐಗೆ ತಿಳಿಸಿದರು.

ಕೂಟ ಮುಗಿಯಲು ಇನ್ನೂ ಮೂರು ದಿನಗಳು ಇದ್ದು, ಭಾರತ ಇನ್ನಷ್ಟು ಪದಕಗಳನ್ನು ಗೆಲ್ಲುವ ಸಾಧ್ಯತೆಯಿದೆ. ಈ ಬಗ್ಗೆ ಆಶಾವಾದಿಯಾಗಿದ್ದೇನೆ ಎಂದು ಮುಖ್ಯ ಕೋಚ್‌ ಸತ್ಯನಾರಾಯಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT