ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಶೂಟಿಂಗ್‌: ಮನು ಭಾಕರ್‌ಗೆ ಒಲಿಂಪಿಕ್‌ ಕೋಟಾ

25 ಮೀ. ಪಿಸ್ತೂಲ್‌ ವಿಭಾಗದಲ್ಲಿ 5ನೇ ಸ್ಥಾನ
Published 28 ಅಕ್ಟೋಬರ್ 2023, 14:43 IST
Last Updated 28 ಅಕ್ಟೋಬರ್ 2023, 14:43 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮನು ಭಾಕರ್‌ ಅವರು ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಐದನೇ ಸ್ಥಾನ ಪಡೆದರಲ್ಲದೆ, ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಸ್ಥಾನ ಗಿಟ್ಟಿಸಿದರು.

ಶನಿವಾರ ನಡೆದ ಸ್ಪರ್ಧೆಯ ಫೈನಲ್‌ನಲ್ಲಿ 24 ಪಾಯಿಂಟ್ಸ್‌ ಕಲೆಹಾಕಿದ ಅವರು ‘ಶೂಟ್‌ ಆಫ್‌’ನಲ್ಲಿ ಎಡವಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.

ಎರಡನೇ ಸ್ಥಾನ ಹೊರತುಪಡಿಸಿ, ಒಂದರಿಂದ ನಾಲ್ಕರವರೆಗಿನ ಸ್ಥಾನಗಳನ್ನು ಚೀನಾ ಸ್ಪರ್ಧಿಗಳು ತಮ್ಮದಾಗಿಸಿಕೊಂಡರು. ಬೆಳ್ಳಿ ಪದಕ ಇರಾನ್‌ನ ಹನಿಯಾ ರೊಸ್ತಿಮಿಯಾನ್‌ ಪಾಲಾಯಿತು.

ಹನಿಯಾ ಈ ಹಿಂದೆಯೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರಿಂದ ಮತ್ತು ಚೀನಾಕ್ಕೆ ಒಂದು ಒಲಿಂಪಿಕ್‌ ಕೋಟಾ ಸ್ಥಾನ ಮಾತ್ರ ಪಡೆಯಬಹುದಾಗಿದ್ದ ಕಾರಣ ಮನು ಅವರು ಐದನೇ ಸ್ಥಾನ ಪಡೆದರೂ ಒಲಿಂಪಿಕ್‌ ಕೋಟಾ ಗಿಟ್ಟಿಸಿಕೊಂಡರು.

ಕೋಟಾ ಆಧಾರದಲ್ಲಿ ಇದುವರೆಗೆ ಭಾರತದ 11 ಶೂಟರ್‌ಗಳು ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಮನು ಅವರು ಪಿಸ್ತೂಲ್‌ ವಿಭಾಗದಲ್ಲಿ ಒಲಿಂಪಿಕ್‌ ಕೋಟಾ ಗಿಟ್ಟಿಸಿದ ಭಾರತದ ಎರಡನೇ ಶೂಟರ್‌. ಸರಬ್ಜೋತ್‌ ಸಿಂಗ್ ಅವರು ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು.

ಮನು ಅವರು ಅರ್ಹತಾ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡಿ 591 ಪಾಯಿಂಟ್ಸ್‌ಗಳೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಕಣದಲ್ಲಿದ್ದ ಭಾರತದ ಇಶಾ ಸಿಂಗ್‌ ಮತ್ತು ರಿದಂ ಸಾಂಗ್ವಾನ್‌ ಅವರು ಕ್ರಮವಾಗಿ 17 (579) ಹಾಗೂ 23ನೇ (576) ಸ್ಥಾನ ಪಡೆದು ಪದಕ ಸುತ್ತು ತಲುಪಲು ವಿಫಲರಾದರು.

ಶನಿವಾರ ಭಾರತದ ಶೂಟರ್‌ಗಳು ನಾಲ್ಕು ಬೆಳ್ಳಿ ಗೆದ್ದುಕೊಂಡರು. ಮನು ಇಶಾ ಮತ್ತು ರಿದಂ ಅವರು 25 ಮೀ. ಪಿಸ್ತೂಲ್‌ ತಂಡ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದರು. 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ದಿವ್ಯಾಂಶ್ ಸಿಂಗ್‌ ಪನ್ವಾರ್‌– ರಮಿತಾ ಜಿಂದಾಲ್ 12–16ರಿಂದ ಚೀನಾ ತೈಪೆ ಜೋಡಿಯ ಕೈಯಲ್ಲಿ ಸೋತರು.

ಜೂನಿಯರ್‌ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಸಿಮ್ರನ್‌ಪ್ರೀತ್‌ ಕೌರ್‌ ಬ್ರಾರ್‌ ಅವರು ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT