ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ಪ್ರಧಾನ ಸುತ್ತು ಪ್ರವೇಶಿಸಿದ ಮಿಥುನ್‌
Published 27 ಮಾರ್ಚ್ 2024, 16:30 IST
Last Updated 27 ಮಾರ್ಚ್ 2024, 16:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್ : ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಸಿಂಧು ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 21-16, 21-12 ರಿಂದ ಕೆನಡಾದ ವೆನ್ ಯು ಜಾಂಗ್ ಅವರನ್ನು ನೇರ್‌ ಗೇಮ್‌ಗಳಲ್ಲಿ ಮಣಿಸಿದರು. ಮುಂದಿನ ಸುತ್ತಿನಲ್ಲಿ ಭಾರತದ ಆಟಗಾರ್ತಿಯು ಚೀನಾ ತೈಪೆಯ ಹುವಾಂಗ್ ಯು-ಹ್ಸುನ್ ಅವರನ್ನು ಎದುರಿಸುವರು.

ವಿಶ್ವದ 11ನೇ ರ್‍ಯಾಂಕ್‌ನ ಸಿಂಧು ಅವರಿಗೆ ಮೊದಲ ಗೇಮ್‌ನ ಆರಂಭದಲ್ಲಿ 49ನೇ ಕ್ರಮಾಂಕದ ಹುವಾಂಗ್ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. ಒಂದು ಹಂತದಲ್ಲಿ 14–14ರ ಸಮಬಲದ ಹೋರಾಟ ಕಂಡುಬಂತು. ಆದರೆ, ನಂತರದಲ್ಲಿ ಸಿಂಧು ನಿಖರ ಆಟದ ಮೂಲಕ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಸಿಂಧು ಸಂಪೂರ್ಣ ಪಾರಮ್ಯ ಮೆರೆದರು.

ಪ್ರಧಾನ ಸುತ್ತಿಗೆ ಮಿಥುನ್‌: ಭಾರತದ ಮಿಥುನ್ ಮಂಜುನಾಥ್ ಪುರುಷರ ಸಿಂಗಲ್ಸ್‌ನಲ್ಲಿ ಪ್ರಧಾನ ಸುತ್ತು ಪ್ರವೇಶಿಸಿದರು. ಕ್ವಾಲಿಫೈಯರ್‌ ಸುತ್ತಿನ ಮೊದಲ ಪಂದ್ಯದಲ್ಲಿ ಅವರು 15-21, 24-22, 21-18ರಿಂದ ಸ್ವದೇಶದ ಎಸ್.ಶಂಕರ್ ಮುತ್ತುಸಾಮಿ ಅವರನ್ನು ಸೋಲಿಸಿದರು.

ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಕನ್ನಡಿಗ ಮಿಥುನ್‌ ಎರಡನೇ ಸುತ್ತಿನಲ್ಲಿ 21-13, 21-13ರಿಂದ ಚೀನಾ ತೈಪೆಯ ಲಿಯಾವೊ ಜುವೊ ಫು ಅವರನ್ನು ಹಿಮ್ಮೆಟ್ಟಿಸಿ ಮುಖ್ಯ ಸುತ್ತಿಗೆ ಅರ್ಹತೆ ಪಡೆದರು. ಅಲ್ಲಿ 32ರ ಘಟ್ಟದ ಪಂದ್ಯದಲ್ಲಿ ವಿಶ್ವದ 64ನೇ ಕ್ರಮಾಂಕದ ವಾಂಗ್ ತ್ಸು ವೀ (ತೈವಾನ್‌) ಅವರನ್ನು ಎದುರಿಸುವರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ಕೃಷ್ಣ ಪ್ರಸಾದ್ ಗಾರಗ ಮತ್ತು ಸಾಯಿ ಪ್ರತೀಕ್ ಜೋಡಿಯು ಆರಂಭಿಕ ಸುತ್ತಿನ ಪಂದ್ಯದಲ್ಲಿ 21-15, 28-30, 21-11ರಿಂದ ಕೆನಡಾದ ಡಾಂಗ್ ಆ್ಯಡಂ ಮತ್ತು ನೈಲ್ ಯಾಕುರಾ ಅವರನ್ನು ರೋಚಕ ಹಣಾಹಣಿಯಲ್ಲಿ ಸೋಲಿಸಿ, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಮಹಿಳೆಯರ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ ಕಂಚಿನ ಪದಕ ವಿಜೇತರಾದ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಆರಂಭಿಕ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಐದನೇ ಶ್ರೇಯಾಂಕದ ಭಾರತದ ಜೋಡಿಯು 18-21, 22-20, 18-21ರಿಂದ ಅಮೆರಿಕದ ಅನ್ನಿ ಕ್ಸು ಮತ್ತು ಕೆರ್ರಿ ಕ್ಸು ಅವರಿಗೆ ಮಣಿಯಿತು. ಈ ಮೂಲಕ ಭಾರತದ ಆಟಗಾರ್ತಿಯರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕನಸು ಕೂಡ ಕಮರಿತು.

ಭಾರತದ ಪಿ.ವಿ. ಸಿಂಧು
ಭಾರತದ ಪಿ.ವಿ. ಸಿಂಧು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT