ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

Published 27 ಏಪ್ರಿಲ್ 2024, 5:56 IST
Last Updated 27 ಏಪ್ರಿಲ್ 2024, 5:56 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ.

ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಬರ ಪರಿಹಾರ ಕೋರಿ ಕೇಂದ್ರಕ್ಕೆ ಮೊರೆ ಹೋಗಿತ್ತು. ಆದರೆ, ಬರ ಪರಿಹಾರ ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ನೆರವು ನೀಡುವುದರ ಕುರಿತು ಒಂದು ವಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾಗ್ದಾನ ನೀಡಿತ್ತು.

ಕೋರ್ಟ್‌ನಲ್ಲಿ ವಿಚಾರಣೆ ಕಾಲಕ್ಕೆ, ‘ಕರ್ನಾಟಕದಲ್ಲಿ ಬರ ನಿರ್ವಹಣೆಗೆ ಹಣಕಾಸು ನೆರವು ನೀಡುವಂತೆ ರಾಜ್ಯ ಸರ್ಕಾರ ಮುಂದಿಟ್ಟಿರುವ ಬೇಡಿಕೆಯನ್ನು ಈಡೇರಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ’ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.

‘ಇದು ರಾಜ್ಯಕ್ಕೆ ಸಿಕ್ಕಿರುವ ಜಯ’ ಎಂದು ಪ್ರತಿಪಾದಿಸಿದ್ದ ರಾಜ್ಯ ಸರ್ಕಾರ, ‘ವಾರದೊಳಗೆ ಬರ ಪರಿಹಾರ ಬಿಡುಗಡೆಯಾಗಲಿದ್ದು, ಸುಪ್ರೀಂ ಕೋರ್ಟ್‌ನ ಮಧ್ಯ ಪ್ರವೇಶದಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ’ ಎಂದು ಅಭಿಪ್ರಾಯಪಟ್ಟಿತ್ತು.

ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದಕ್ಕೆ ಸ್ಪಂದನ ಸಿಗದೇ ಇದ್ದುದರಿಂದ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದ್ದು, ರಾಜ್ಯಕ್ಕೆ ದ್ರೋಹ ಎಸಗಿದೆ’ ಎಂದು ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಬರಪರಿಹಾರ, ತೆರಿಗೆ ನ್ಯಾಯಕ್ಕಾಗಿ ದೆಹಲಿಯಲ್ಲಿ ಪ್ರತಿಭಟನೆಯನ್ನೂ ಸರ್ಕಾರ ನಡೆಸಿತ್ತು. ವಿಳಂಬವಾಗಿ ಮನವಿ ಸಲ್ಲಿಸಿದ್ದಕ್ಕೆ ಪರಿಹಾರ ನೀಡಲು ಸಾಧ್ಯವಾಗಿಲ್ಲ; ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಹೇಳಿತ್ತು. ಬಳಿಕವೂ ‘ಸಂಘರ್ಷ’ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT