ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಎಚ್ಚರಿಕೆ ನೀಡಿ ಪರಿಹಾರ ಕೊಡಿಸಿದ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ

Published 27 ಏಪ್ರಿಲ್ 2024, 7:57 IST
Last Updated 27 ಏಪ್ರಿಲ್ 2024, 7:57 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ.

ಕೇಂದ್ರ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿರುವ ಕುರಿತು ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು. ಎನ್‌ಡಿ‌ಆರ್‌ಎಫ್ ನಿಯಮವಾಳಿ ಪ್ರಕಾರ ರಾಜ್ಯಕ್ಕೆ ₹18,171 ಕೋಟಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ₹3,498.98 ಕೋಟಿಗೆ ಅನುಮೋದನೆ ನೀಡಿದ್ದು, ₹3,454 ಕೋಟಿ ಬಿಡುಗಡೆ ಮಾಡಿದೆ. ಬರ ಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಕಾಳಜಿಯಿಂದ ಈ ಬರ ಪರಿಹಾರ ನೀಡಿಲ್ಲ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ನಮ್ಮಲ್ಲಿನ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ರಾಜಕೀಯ ದುರುದ್ದೇಶದಿಂದ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮನವರಿಕೆಯಾಗಿದೆ. ನ್ಯಾಯಾಲಯ ವಿಚಾರಣೆ ವೇಳೆ ಚಾಟಿ ಬೀಸಿದ ನಂತರ ವಾರದ ಅವಧಿಯೊಳಗೆ ಬರ ಪರಿಹಾರ ನೀಡಲಾಗುವುದು ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋರ್ಟ್‌ಗೆ ವಚನ ನೀಡಿತ್ತು. ಅದನ್ನು ಪಾಲಿಸಲಿಕ್ಕಾಗಿ ಒಲ್ಲದ ಮನಸ್ಸಿನಿಂದ ಈ ಪರಿಹಾರ ನೀಡಿದೆ’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

‘ಬರಪರಿಹಾರ ಬಿಡುಗಡೆಯಲ್ಲಿ ರಾಜ್ಯ ಬಿಜೆಪಿ ನಾಯಕರದ್ದಾಗಲಿ, ಕೇಂದ್ರ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ. ಇದು ಕೃಷಿ ಕ್ಷೇತ್ರ ಮತ್ತು ರಾಜ್ಯದ ರೈತರ ಮೇಲೆ ಸುಪ್ರೀಂ ಕೋರ್ಟ್ ಇಟ್ಟುಕೊಂಡಿರುವ ಕಾಳಜಿಯ ಫಲ. ಸ್ವಲ್ಪವಾದರೂ ಪರಿಹಾರವನ್ನು ನೀಡದೆ ಇದ್ದರೆ ರೊಚ್ಚೆದ್ದಿರುವ ಕರ್ನಾಟಕದ ಜನ ಚುನಾವಣಾ ಪ್ರಚಾರಕ್ಕಾಗಿ ತಮ್ಮನ್ನು ರಾಜ್ಯಕ್ಕೆ ಕಾಲಿಡಲು ಬಿಡಲಾರರು ಎಂಬ ಭಯವೂ ಈ ಪರಿಹಾರ ಘೋಷಿಸಲು ಕಾರಣವಾಗಿದೆ. ಈ ಅಲ್ಪ ಪರಿಹಾರವನ್ನು ತಮ್ಮ ಸಾಧನೆ ಎಂದು ರಾಜ್ಯದ ಬಿಜೆಪಿ ನಾಯಕರು ಬಿಂಬಿಸಲು ಹೊರಟರೆ ರಾಜ್ಯದ ಜನ ಅವರಿಗೆ ತಕ್ಕ ಉತ್ತರ ನೀಡಬೇಕೆಂದು ಮನವಿ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಈ ಬರ ಪರಿಹಾರ ಬಿಡುಗಡೆಯ ಹಿಂದಿನ ಕಾರಣಗಳೇನೇ ಇರಲಿ, ನೀಡಿರುವ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಧ್ಯವಾದಷ್ಟು ಶೀಘ್ರ ಬಾಕಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸುತ್ತಿದ್ದೇನೆ. ಇದೇ ರೀತಿ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯವನ್ನು ಕೂಡಾ ಕೇಂದ್ರ ಸರ್ಕಾರ ಸರಿಪಡಿಸಬೇಕೆಂದು ಆಗ್ರಹಿಸುತ್ತೇನೆ’ ಎಂದು ಹೇಳಿದ್ದಾರೆ.

‘ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ನಾವು 2023ರ ಸೆಪ್ಟೆಂಬರ್ 13ರಂದು ಘೋಷಿಸಿದ್ದೆವು. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ₹35,162 ಕೋಟಿಯಷ್ಟು ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ನಾವು ಪರಿಹಾರ ಕೇಳಿರುವುದು ಹೆಚ್ಚು ಕಡಿಮೆ ಅದರ ಅರ್ಧದಷ್ಟು. ಅಂದರೆ ₹18,171 ಕೋಟಿ. ಉಳಿದ ಹಣವನ್ನು ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೇ ಭರಿಸುತ್ತಿದೆ. ಈಗ ಬಿಡುಗಡೆಯಾಗಿರುವುದು ₹3498.98 ಕೋಟಿ ಮಾತ್ರ. ಉಳಿದ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT