ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 4ರಿಂದ ಕ್ಯು ಸ್ಪೋರ್ಟ್ಸ್‌ ಪ್ರೀಮಿಯರ್ ಲೀಗ್‌

Published 24 ಏಪ್ರಿಲ್ 2024, 20:23 IST
Last Updated 24 ಏಪ್ರಿಲ್ 2024, 20:23 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರದ ಮತ್ತು ರಾಜ್ಯದ ಪ್ರಮುಖ ಆಟಗಾರರ ಜೊತೆ ಆತಿಥೇಯ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆಟಗಾರರು, ಮೇ 4ರಂದು ಇಲ್ಲಿ ಆರಂಭವಾಗುವ ಮೊದಲ ಆವೃತ್ತಿಯ ಕ್ಯೂ ಸ್ಪೋರ್ಟ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಎಂಟು ತಂಡಗಳಲ್ಲಿ ಆಡಲಿದ್ದಾರೆ.

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಸ್ನೂಕರ್‌ ಅರೇನಾದಲ್ಲಿ ಏಳು ದಿನ ನಡೆಯುವ ಲೀಗ್‌ನಲ್ಲಿ– ಲೈಟ್ನಿಂಗ್ ಲೀಜನ್‌, ಸೈಕ್ಲೋನ್‌ ಕುಸೇಡರ್ಸ್‌, ಸಮ್ಮರ್‌ ಟಸ್ಕರ್ಸ್, ಹರಿಕೇನ್ ಹಾಕ್ಸ್‌, ಥಂಡರ್‌ಸ್ಟಾರ್ಮ್‌ ಟೈಟನ್ಸ್‌, ಟಾರ್ನೆಡೊ ಟೈಗರ್ಸ್‌, ವರ್ಲ್‌ವಿಂಡ್‌ ವಾರಿಯರ್ಸ್‌ ಮತ್ತು ಮಾನ್ಸೂನ್ ಮಾವೆರಿಕ್ಸ್‌  ತಂಡಗಳು ಪಾಲ್ಗೊಳ್ಳಲಿವೆ.

ಪ್ರತಿ ತಂಡಗಳಲ್ಲಿ ಏಳು ಮಂದಿ ಆಟಗಾರರಿದ್ದು, ಇಬ್ಬರು ರಾಷ್ಟ್ರೀಯ ಆಟಗಾರರು, ಇಬ್ಬರು ರಾಜ್ಯ ಮಟ್ಟದ ಆಟಗಾರರು ಮತ್ತು ಮೂರು ಮಂದಿ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆಟಗಾರರು ಇರುತ್ತಾರೆ. ಏಪ್ರಿಲ್ 20ರಂದು ಆಟಗಾರರ ಬಿಡ್‌ ಪ್ರಕ್ರಿಯೆ ನಡೆದಿದ್ದು, ಒಂದೊಂದು ಫ್ರಾಂಚೈಸಿಗೆ ತಲಾ ₹2 ಕೋಟಿವರೆಗೆ ತೊಡಗಿಸಲು ಅವಕಾಶವಿತ್ತು.

ರೌಂಡ್‌ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ಮೊದಲ ನಾಲ್ಕು ತಂಡಗಳು ಕ್ವಾಲಿಫೈರ್ ತಲುಪಲಿವೆ. ಪ್ಲೇ ಆಫ್‌ ಪಂದ್ಯಗಳು ಐಪಿಎಲ್‌ ಮಾದರಿಯಲ್ಲಿ ನಡೆಯಲಿವೆ. ಮೇ 10ರಂದು ಫೈನಲ್ ನಡೆಯಲಿದೆ.

‍ಪ್ರತಿ ಪಂದ್ಯವು ಏಳು ಫ್ರೇಮ್‌ಗಳನ್ನು ಒಳಗೊಂಡಿದೆ. ಮೂರು ಸಿಂಗಲ್ಸ್‌, ಮೂರು ಡಬಲ್ಸ್‌ ಮತ್ತು ಒಂದು ಶೌಟ್‌ ಮಾದರಿ. ಇನ್‌ಸ್ಟಿಟ್ಯೂಟ್‌ ಏಳು ಸ್ನೂಕರ್‌ ಟೇಬಲ್‌ಗಳನ್ನು ಹೊಂದಿದೆ.

‘ಈ ಲೀಗ್‌ ವಿಭಿನ್ನವಾಗಿದೆ. ರಾಷ್ಟ್ರೀಯ, ರಾಜ್ಯ ಆಟಗಾರರ ಜೊತೆ ಕ್ಲಬ್‌ ಮಟ್ಟದ ಆಟಗಾರರು ಆಡಲು ಅವಕಾಶವಾಗುತ್ತದೆ. ರಾಷ್ಟ್ರೀಯ, ವಿಶ್ವ ಚಾಂಪಿಯನ್‌ ಆಟಗಾರರ ಆಟ ನೋಡಿ ಕಲಿತುಕೊಳ್ಳಲು ಅವಕಾಶ ದೊರೆಯಲಿದೆ. ಅವರಿಗೆ ಇಂಥ ಅವಕಾಶ ಸಿಗುವುದು ಕಡಿಮೆ’ ಎಂದು 27 ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್ ಅಡ್ವಾಣಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಪಂಕಜ್ ಜೊತೆ ರಾಷ್ಟ್ರೀಯ ಆಟಗಾರರಾದ ಬ್ರಿಜೇಶ್ ದಮಾನಿ, ಆದಿತ್ಯ ಮೆಹ್ತ, ಸೌರವ್‌ ಕೊಥಾರಿ, ಮನನ್‌ ಚಂದ್ರ, ಕಮಲ್‌ ಚಾವ್ಲಾ ಮೊದಲಾದವರು ಭಾಗವಹಿಸಲಿದ್ದಾರೆ. ಐಬಿಎಸ್‌ಎಫ್‌ 6–ರೆಡ್‌ ಸ್ನೂಕರ್ ಚಾಂಪಿಯನ್‌ ವಿದ್ಯಾ ಪಿಳ್ಳೈ ಅವರು ಮಾನ್ಸೂನ್ ಮಾವೆರಿಕ್ಸ್ ಪರ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT